Advertisement

Champions Trophy: ಕೊನೆಗೂ ಚಾಂಪಿಯನ್ಸ್‌ ಟ್ರೋಫಿ ವೇಳಾಪಟ್ಟಿ ಬಿಡುಗಡೆಗೊಳಿಸಿದ ಐಸಿಸಿ

08:42 PM Dec 24, 2024 | Team Udayavani |

ದುಬೈ: 2017ರ ನಂತರ ಆಯೋಜನೆಗೊಂಡಿರುವ ಚಾಂಪಿಯನ್ಸ್‌ ಟ್ರೋಫಿಯ (Champions Trophy) ವೇಳಾಪಟ್ಟಿಯನ್ನು ಐಸಿಸಿ (International Cricket Council) ಕೊನೆಗೂ ಬಿಡುಗಡೆಗೊಳಿಸಿದ್ದು, ಮುಂದಿನ ವರ್ಷ (2025) ಪಾಕಿಸ್ತಾನ ಹಾಗೂ ಯುನೈಟೆಡ್‌ ಅರಬ್‌ ಎಮಿರೇಟ್ಸ್‌(ಯುಎಇ-ದುಬೈ) ನಲ್ಲಿ ಹೈಬ್ರಿಡ್ ಮಾದರಿಯಲ್ಲಿ ಪಂದ್ಯಾವಳಿಗಳು ಆಯೋಜನೆಗೊಳ್ಳಲಿದ್ದು, ಫೆಬ್ರವರಿ 19ರಿಂದ ಟೂರ್ನಿ ಆರಂಭವಾಗಲಿದೆ.

Advertisement

ವಾಸ್ತವವಾಗಿ ಈ ಟೂರ್ನಿಯ ವೇಳಾಪಟ್ಟಿ ಈಗಾಗಲೇ ಬಿಡುಗಡೆಯಾಗಿರಬೇಕಿತ್ತು. ಆದರೆ ಪಂದ್ಯಾವಳಿಯ ಆಯೋಜನೆಗೆ ಸಂಬಂಧಿಸಿದಂತೆ ಭಾರತ ಹಾಗೂ ಆತಿಥೇಯ ಪಾಕಿಸ್ತಾನದ ನಡುವೆ ಉಂಟಾಗಿದ್ದ ಪಂದ್ಯಾವಳಿ ತಾಣಗಳ ಗೊಂದಲಗಳಿಂದ ಈ ವೇಳಾಪಟ್ಟಿ ಬಿಡುಗಡೆಗೆ ವಿಳಂಬವಾಗಿದೆ. ಚಾಂಪಿಯನ್ಸ್‌ ಟ್ರೋಫಿಯ ಮೊದಲ ಪಂದ್ಯದಲ್ಲಿ ಆತಿಥೇಯ, ಹಾಲಿ ಚಾಂಪಿಯನ್‌ ಪಾಕಿಸ್ತಾನ ತಂಡ ಕರಾಚಿಯಲ್ಲಿ ನ್ಯೂಜಿಲ್ಯಾಂಡ್ ತಂಡವನ್ನು ಎದುರಿಸಲಿದೆ.

ಟೂರ್ನಿಯ ಹೈವೋಲ್ಟೇಜ್ ಪಂದ್ಯವಾದ  ಭಾರತ ಮತ್ತು ಪಾಕಿಸ್ಥಾನ ನಡುವಿನ ಪಂದ್ಯವು ದುಬೈನಲ್ಲಿ ಫೆ. 23 ರಂದು ನಡೆಯಲಿದೆ. ಭಾರತ ತನ್ನ ಮೊದಲ ಪಂದ್ಯವನ್ನು ಫೆ.20ರಂದು ಬಾಂಗ್ಲಾದೇಶ ಎದುರು ಸೆಣಸಾಡಲಿದೆ. ಟೀಂ ಇಂಡಿಯಾ ತನ್ನ ಎಲ್ಲಾ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ.

ಮಾ.9ರಂದು ಫೈನಲ್‌ ಸೆಣಸಾಟ:
ಮಾ.4 ಮತ್ತು ಮಾ.5ರಂದು ಎರಡು ಸೆಮಿಫೈನಲ್ ಪಂದ್ಯಗಳು ನಡೆಯಲಿವೆ. ಎರಡೂ ಸೆಮಿಫೈನಲ್‌ಗಳಿಗೂ ಮೀಸಲು ದಿನ ಹೊಂದಿದ್ದು,  ಮಾ.9ರಂದು ಫೈನಲ್‌ ಪಂದ್ಯ ನಿಗದಿಯಾಗಿದ್ದು,  ಮೀಸಲು ದಿನವೂ ಇರಲಿದೆ. ಸೆಮಿಫೈನಲ್‌ಗೆ ಭಾರತ ಅರ್ಹತೆ ಪಡೆದರೆ ಆ ಪಂದ್ಯಗಳು ದುಬೈನಲ್ಲಿ ನಡೆಯಲಿವೆ. ಆದರೆ, ಒಂದೊಮ್ಮೆ ಟೀಂ ಇಂಡಿಯಾ ಫೈನಲ್‌ಗೆ ಅರ್ಹತೆ ಪಡೆಯದಿದ್ದರೆ ಪಾಕಿಸ್ತಾನದ ಲಾಹೋರ್ ಸ್ಟೇಡಿಯಂನಲ್ಲಿ ಫೈನಲ್ ಪಂದ್ಯ ನಡೆಯಲಿದೆ. ಭಾರತ ತಂಡವು ಫೈನಲ್‌ ಪ್ರವೇಶಿಸಿದರೆ ದುಬೈಯಲ್ಲಿ ನಡೆಯಲಿದೆ.

Advertisement

ಶಮನವಾದ ವಿವಾದ:
ಕೂಟದ ಆತಿಥೇಯ ರಾಷ್ಟ್ರವಾಗಿರುವ ಪಾಕಿಸ್ತಾನಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡದ ಕಾರಣ ಪ್ರಯಾಣಿಸಲು ಸಾಧ್ಯವಿಲ್ಲ ಎಂದು ಭಾರತ ಹೇಳಿತ್ತು. ತನ್ನ ಪಂದ್ಯಗಳನ್ನು ತಟಸ್ಥ ತಾಣದಲ್ಲಿ ಆಡಿಸಲು ಭಾರತ ಮನವಿ ಮಾಡಿತ್ತು. ಇದನ್ನು ಪಾಕಿಸ್ತಾನ ನಿರಾಕರಿಸಿತ್ತು. ಕೂಟ ಪೂರ್ಣ ಪಾಕಿಸ್ತಾನದಲ್ಲೇ ನಡೆಯಬೇಕು ಎಂದು ಹಠ ಹಿಡಿದಿತ್ತು. ಒಂದು ಹಂತದಲ್ಲಿ ಭಾರತವಿಲ್ಲದಿದ್ದರೂ ಸರಿ ಎಂಬ ಹಂತಕ್ಕೂ ಪಾಕ್‌ ತಲುಪಿತ್ತು. ಇದಕ್ಕೆ ಪಾಕ್‌ ಸರ್ಕಾರವೂ ಬೆಂಬಲ ನೀಡಿತ್ತು. ಆದರೆ ಐಸಿಸಿ ಭಾರತವಿಲ್ಲದಿದ್ದರೆ ಆಗುವ ಭಾರೀ ನಷ್ಟದ ಕಾರಣವನ್ನು ಮುಂದೊಡ್ಡಿ ಪಾಕಿಸ್ತಾನದ ಮನವೊಲಿಸಲು ಯಶಸ್ವಿಯಾಯಿತು.

ಇದಕ್ಕಾಗಿ 2028ರವರೆಗೆ ಭಾರತ, ಪಾಕ್‌ನಲ್ಲಿ ನಡೆಯುವ ಐಸಿಸಿ ಕೂಟಗಳ ಹೈಬ್ರಿಡ್‌ ಮಾದರಿಯಲ್ಲಿ ನಡೆಸಲು ತೀರ್ಮಾನಿಸಲಾಯಿತು. 2025ರಲ್ಲಿ ಭಾರತದಲ್ಲಿ ನಡೆಯುವ ಮಹಿಳಾ ಏಕದಿನ ವಿಶ್ವಕಪ್‌, 2026ರಲ್ಲಿ ನಡೆಯುವ ಟಿ20 ವಿಶ್ವಕಪ್‌ಗೆ ಪಾಕಿಸ್ತಾನ ಭಾರತಕ್ಕೆ ಬರುವುದಿಲ್ಲ. 2028ರಲ್ಲಿ ಪಾಕಿಸ್ತಾನದಲ್ಲಿ ಮಹಿಳಾ ಟಿ20 ವಿಶ್ವಕಪ್‌ ನಡೆಯಲಿದ್ದು, ಅಲ್ಲಿಗೆ ಭಾರತ ಹೋಗುವುದಿಲ್ಲ. ಭಾರತ, ಪಾಕಿಸ್ತಾನಗಳು ತಟಸ್ಥ ತಾಣದಲ್ಲಿ ಪಂದ್ಯಗಳನ್ನಾಡಲಿವೆ.

ಎ ಗುಂಪು:
ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ನ್ಯೂಜಿಲ್ಯಾಂಡ್‌  ತಂಡ

ಬಿ ಗುಂಪು:
ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ಇಂಗ್ಲೆಂಡ್, ಮತ್ತು ದಕ್ಷಿಣ ಆಫ್ರಿಕಾ ತಂಡ

Advertisement

Udayavani is now on Telegram. Click here to join our channel and stay updated with the latest news.

Next