Advertisement

ಚಾಂಪಿಯನ್ಸ್‌ ಟ್ರೋಫಿ: ಸೆಮೀಸ್‌ಗಾಗಿ ಇಂದು ಭಾರತ-ಆಫ್ರಿಕಾ ಕಾದಾಟ

03:45 AM Jun 11, 2017 | Team Udayavani |

ಲಂಡನ್‌: ಹಾಲಿ ಚಾಂಪಿಯನ್‌ ಭಾರತ ತಂಡ ರವಿವಾರ “ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಪಂದ್ಯಾವಳಿ’ಯಲ್ಲೇ ಅತ್ಯಂತ ಒತ್ತಡ ಹಾಗೂ ಆತಂಕದ ಸ್ಥಿತಿಯನ್ನು ನಿಭಾಯಿಸಬೇಕಾದ ಅನಿವಾರ್ಯತೆಗೆ ಸಿಲುಕಲಿದೆ. ಬಹುಶಃ ಇದು ಪಾಕಿಸ್ಥಾನದೆದುರಿನ ಪಂದ್ಯಕ್ಕಿಂತಲೂ ಹೆಚ್ಚಿನ ಒತ್ತಡವನ್ನು ತಂದೊಡ್ಡುವ ಸಾಧ್ಯತೆಯೂ ಇಲ್ಲದಿಲ್ಲ. “ಕ್ವಾರ್ಟರ್‌ ಫೈನಲ್‌’ ಮಹತ್ವ ಪಡೆದಿರುವ ಈ ಮುಖಾಮುಖೀಯಲ್ಲಿ ಕೊಹ್ಲಿ ಪಡೆ ವಿಶ್ವದ ನಂ.1 ತಂಡವಾದ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ.

Advertisement

ಇದು ಇತ್ತಂಡಗಳ ಪಾಲಿಗೂ ಮಾಡು-ಮಡಿ ಪಂದ್ಯ. ಟೀಮ್‌ ಇಂಡಿಯಾ ಶ್ರೀಲಂಕಾಕ್ಕೆ ಶರಣಾಗಿ ತನ್ನ ಹಾದಿಯನ್ನು ದುರ್ಗಮಗೊಳಿಸಿಕೊಂಡರೆ, ದಕ್ಷಿಣ ಆಫ್ರಿಕಾ ತಂಡ ಪಾಕಿಸ್ಥಾನಕ್ಕೆ ಸೋತು ಪರದಾಡುವಂತಾಗಿದೆ. ಭಾರತಕ್ಕೆ ಗುರುವಾರ ಲಂಕೆಯೆದುರು ಸೋಲನ್ನು ತಂದಿತ್ತ “ಕೆನ್ನಿಂಗ್ಟನ್‌ ಓವಲ್‌’ನಲ್ಲಿ ಈ ಮುಖಾಮುಖೀ ಸಾಗಲಿದ್ದು, ಗೆದ್ದ ತಂಡ ಸೆಮಿಫೈನಲ್‌ಗೆ ಲಗ್ಗೆ ಇಡಲಿದೆ. ಸೋತವರು ಮನೆಯ ಹಾದಿ ಹಿಡಿಯಲಿದ್ದಾರೆ. ಹೀಗಾಗಿ ಪೈಪೋಟಿ ತೀವ್ರಗೊಳ್ಳುವುದರಲ್ಲಿ ಅನುಮಾನವಿಲ್ಲ.

ಅಕಸ್ಮಾತ್‌ ಈ ಪಂದ್ಯದಲ್ಲಿ ಭಾರತ ಸೋತರೆ, ಹಾಲಿ ಚಾಂಪಿಯನ್‌ ತಂಡವೊಂದು ಸೆಮಿಫೈನಲ್‌ ತಲಪುವ ಮೊದಲೇ ಕೂಟದಿಂದ ಹೊರಬಿದ್ದ ಅವಮಾನಕ್ಕೆ ಸಿಲುಕಲಿದೆ. ಅಲ್ಲದೇ ಮೈದಾನದಾಚೆಯ “ಕೋಚ್‌ ವಿವಾದ’ಕ್ಕೂ ಬೇರೊಂದು ಅರ್ಥ ಲಭಿಸುತ್ತದೆ. ಇದರಿಂದ ಪಾರಾಗಲು ಹರಿಣಗಳೆದುರು ಭಾರತ ಇನ್ನೂ ಪರಿಣಾಮಕಾರಿ ಕಾರ್ಯತಂತ್ರಗಳನ್ನು ಅಳವಡಿಸಿ ಗೆದ್ದು ಬರಬೇಕಾದುದು ಅಗತ್ಯ.

ಕಾಣಬೇಕಿದೆ ಏಕದಿನ ಜೋಶ್‌
ಪಾಕಿಸ್ಥಾನ ವಿರುದ್ಧ ಭಾರತ ಸರ್ವಾಂಗೀಣ ಪ್ರಾಬಲ್ಯ ತೋರ್ಪಡಿಸಿದರೆ, ಶ್ರೀಲಂಕಾ ವಿರುದ್ಧ ಮಿಂಚಿದ್ದು ಬ್ಯಾಟಿಂಗ್‌ ಮಾತ್ರ. ಉಳಿದಂತೆ ಬೌಲಿಂಗ್‌, ಫೀಲ್ಡಿಂಗ್‌ ತೀರಾ ಕಳಪೆಯಾಗಿತ್ತು. ಸೋಲಲೆಂದೇ ಆಡಿದರೋ ಅಥವಾ ಲಂಕೆಯನ್ನು ಲಘುವಾಗಿ ಪರಿಗಣಿಸಿದರೋ ಅರ್ಥವಾಗುತ್ತಿಲ್ಲ! ಒಟ್ಟಾರೆ ಗುರುವಾರ ಭಾರತದ ಪಾಳೆಯದಲ್ಲಿ ಏಕದಿನ ಕ್ರಿಕೆಟಿನ ಆವೇಶ, ಕೆಚ್ಚು… ಯಾವುದೂ ಕಂಡುಬರಲಿಲ್ಲ ಎಂಬುದು ಸತ್ಯ. ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಇಂಥ ಎಡವಟ್ಟುಗಳನ್ನೆಲ್ಲ ನಿವಾರಿಸಿಕೊಳ್ಳಬೇಕಿದೆ.

ಭಾರತದ ಬ್ಯಾಟಿಂಗ್‌ ಬಗ್ಗೆ ಯಾವುದೇ ಆತಂಕವಿಲ್ಲ. ಎರಡರಲ್ಲೂ ಸ್ಕೋರ್‌ ಮುನ್ನೂರರ ಗಡಿಯನ್ನು ಮೀರಿ ಬೆಳೆದಿದೆ. ಶಿಖರ್‌ ಧವನ್‌, ರೋಹಿತ್‌ ಶರ್ಮ, ಯುವರಾಜ್‌ ಸಿಂಗ್‌, ವಿರಾಟ್‌ ಕೊಹ್ಲಿ, ಧೋನಿ ಸಹಿತ ಎಲ್ಲರೂ ಫಾರ್ಮ್ನಲ್ಲಿದ್ದಾರೆ. ಪಾಕ್‌ ವಿರುದ್ಧ ಅರ್ಧ ಶತಕ ಬಾರಿಸಿ ಅಜೇಯರಾಗಿ ಉಳಿದಿದ್ದ ಕೊಹ್ಲಿ ಲಂಕೆಯೆದುರು ಸೊನ್ನೆ ಸುತ್ತಿದ್ದು ಮಾತ್ರ ಇದಕ್ಕೆ ಅಪವಾದ. ಅಲ್ಲದೇ ರವಿವಾರದ ಪಂದ್ಯದಲ್ಲಿ ಅವರಿಗೆ ನಾಯಕತ್ವದ ಅಗ್ನಿಪರೀಕ್ಷೆಯೂ ಎದುರಾಗಲಿದೆ. ಈ ಒತ್ತಡದಿಂದ ಮುಕ್ತರಾಗಿ ಆಡಿದರೆ ಭಾರತದ ಕಪ್ತಾನನಿಂದ ದೊಡ್ಡ ಇನ್ನಿಂಗ್ಸ್‌ ನಿರೀಕ್ಷಿಸಬಹುದು.

Advertisement

ಅಶ್ವಿ‌ನ್‌ಗೆ ಮೊದಲ ಪಂದ್ಯ?
ಪಾಕ್‌ ವಿರುದ್ಧ ಭಾರತದ ಬೌಲಿಂಗ್‌ ಬೊಂಬಾಟ್‌ ಆಗಿತ್ತು. ಆದರೆ ಲಂಕಾ ವಿರುದ್ಧ ಅಷ್ಟೇ ಕಳಪೆ ಎನಿಸಿಕೊಂಡಿತು. ಉರುಳಿಸಿದ್ದು ಮೂರೇ ವಿಕೆಟ್‌, ಇದರಲ್ಲಿ ಬೌಲರ್‌ಗೆ ಲಭಿಸಿದ್ದು ಒಂದೇ ಎಂಬುದು ತುಸು ಆತಂಕದ ಸಂಗತಿ.

ರವಿವಾರ ಭಾರತದ ಬೌಲರ್‌ಗಳು ಆಮ್ಲ, ಡಿ ಕಾಕ್‌, ಡು ಪ್ಲೆಸಿಸ್‌, ಎಬಿಡಿ, ಡ್ಯುಮಿನಿ, ಮಿಲ್ಲರ್‌, ಮಾರಿಸ್‌ ಅವರಂಥ ಬ್ಯಾಟಿಂಗ್‌ ದೈತ್ಯರಿಗೆ ಕಡಿವಾಣ ತೊಡಿಸಬೇಕಿದೆ. ಇವರಲ್ಲಿ 3 ಮಂದಿ “ಕ್ವಾಲಿಟಿ ಲೆಫ್ಟ್ ಹ್ಯಾಂಡರ್’ ಇದ್ದಾರೆ. ಹೀಗಾಗಿ ತಂಡದ ಬೌಲಿಂಗ್‌ ಸರದಿಯಲ್ಲಿ ಒಂದೆಡರು ಬದಲಾವಣೆ ಗೋಚರಿಸಲೂಬಹುದು. ಆಫ್ ಸ್ಪಿನ್ನರ್‌ ಆರ್‌. ಅಶ್ವಿ‌ನ್‌ ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವುದು ಬಹುತೇಕ ಖಚಿತ.

ಆದರೆ ಅಶ್ವಿ‌ನ್‌ಗಾಗಿ ಜಡೇಜ ಅವರನ್ನು ಹೊರಗುಳಿಸುವ ಸಾಧ್ಯತೆ ಕಡಿಮೆ. ಪಾಕ್‌ ವಿರುದ್ಧ ಅವರ ಬೌಲಿಂಗ್‌ ಪರಿಣಾಮಕಾರಿಯಾಗಿತ್ತು. ಜಡೇಜ ಫೀಲ್ಡಿಂಗ್‌ ಬಗ್ಗೆ ಎರಡು ಮಾತಿಲ್ಲ. ಅಲ್ಲದೇ ಆಫ್ರಿಕಾ ವಿರುದ್ಧ ಅವಳಿ ಸ್ಪಿನ್‌ ದಾಳಿ ಸಂಘಟಿಸುವುದೂ ಭಾರತದ ಯೋಜನೆಗಳಲ್ಲೊಂದು.

ಆಫ್ರಿಕಾ ಮೇಲೂ ಸೋಲಿನ ಒತ್ತಡ
ಶ್ರೀಲಂಕಾವನ್ನು 96 ರನ್ನುಗಳಿಂದ ಮಣಿಸಿ ಶುಭಾರಂಭ ಮಾಡಿದ್ದ ದಕ್ಷಿಣ ಆಫ್ರಿಕಾ, ಬುಧವಾರ ಪಾಕಿಸ್ಥಾನ ವಿರುದ್ಧ ಚಡಪಡಿಸಿತ್ತು. ಲಂಕೆಯೆದುರು 6ಕ್ಕೆ 299 ರನ್‌ ಪೇರಿಸಿದರೆ, ಪಾಕ್‌ ವಿರುದ್ಧ ಗಳಿಸಿದ್ದು 8ಕ್ಕೆ 219 ರನ್‌ ಮಾತ್ರ. ಈ ಮಳೆ ಪಂದ್ಯವನ್ನು ಎಬಿಡಿ ಪಡೆ ಡಿ-ಎಲ್‌ ನಿಯಮದಂತೆ 19 ರನ್ನುಗಳಿಂದ ಸೋತಿತು. ಹೀಗಾಗಿ ಭಾರತದಂತೆ ದಕ್ಷಿಣ ಆಫ್ರಿಕಾ ಕೂಡ ಹಿಂದಿನ ಪಂದ್ಯದ ಸೋಲಿನ ಒತ್ತಡವನ್ನು ಹೊತ್ತುಕೊಂಡೇ ಕಣಕ್ಕಿಳಿಯುತ್ತಿದೆ.
ಭಾರತದ ಬಲಿಷ್ಠ ಬ್ಯಾಟಿಂಗ್‌ ಸರದಿಯನ್ನು ಕಟ್ಟಿಹಾಕಲು ರಬಾಡ, ಪಾರ್ನೆಲ್‌, ಮಾರ್ಕೆಲ್‌, ಮಾರಿಸ್‌, ತಾಹಿರ್‌ ಅವರೆಲ್ಲ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತಾರೆ ಎಂಬುದೊಂದು ಕುತೂಹಲ.

ಸಂಭಾವ್ಯ ತಂಡಗಳು
ಭಾರತ:
ರೋಹಿತ್‌ ಶರ್ಮ, ಶಿಖರ್‌ ಧವನ್‌, ವಿರಾಟ್‌ ಕೊಹ್ಲಿ (ನಾಯಕ), ಯುವರಾಜ್‌ ಸಿಂಗ್‌, ಮಹೇಂದ್ರ ಸಿಂಗ್‌ ಧೋನಿ, ಹಾರ್ದಿಕ್‌ ಪಾಂಡ್ಯ, ಕೇದಾರ್‌ ಜಾಧವ್‌, ಆರ್‌. ಅಶ್ವಿ‌ನ್‌/ರವೀಂದ್ರ ಜಡೇಜ, ಭುವನೇಶ್ವರ್‌ ಕುಮಾರ್‌, ಜಸ್‌ಪ್ರೀತ್‌ ಬುಮ್ರಾ, ಉಮೇಶ್‌ ಯಾದವ್‌/ಮೊಹಮ್ಮದ್‌ ಶಮಿ.

ದಕ್ಷಿಣ ಆಫ್ರಿಕಾ: ಹಾಶಿಮ್‌ ಆಮ್ಲ, ಕ್ವಿಂಟನ್‌ ಡಿ ಕಾಕ್‌, ಫಾ ಡು ಪ್ಲೆಸಿಸ್‌, ಎಬಿ ಡಿ ವಿಲಿಯರ್, ಡೇವಿಡ್‌ ಮಿಲ್ಲರ್‌, ಜೆ.ಪಿ. ಡ್ಯುಮಿನಿ, ವೇಯ್ನ ಪಾರ್ನೆಲ್‌, ಕ್ರಿಸ್‌ ಮಾರಿಸ್‌, ಕಾಗಿಸೊ ರಬಾಡ, ಮಾರ್ನೆ ಮಾರ್ಕೆಲ್‌, ಇಮ್ರಾನ್‌ ತಾಹಿರ್‌.

ಇಂದಿನ ಪಂದ್ಯ
ಭಾರತ-ದಕ್ಷಿಣ ಆಫ್ರಿಕಾ
ಸ್ಥಳ: ಲಂಡನ್‌
ಆರಂಭ: 3.00
ಪ್ರಸಾರ: ಸ್ಟಾರ್‌ ನ್ಪೋರ್ಟ್ಸ್

Advertisement

Udayavani is now on Telegram. Click here to join our channel and stay updated with the latest news.

Next