ಬಹರೈನ್: ಇಲ್ಲಿನ ರಾಜ್ಯ ಪ್ರಶಸ್ತಿ ವಿಜೇತ ಕನ್ನಡ ಸಂಘ ಬಹರೈನ್ ಆಯೋಜಿಸಿದ್ದ ಸುಮಾರು ಮೂರು ವಾರಗಳಿಂದ ದ್ವೀಪದ ಕ್ರೀಡಾಪ್ರೇಮಿಗಳನ್ನು ರಂಜಿಸುತಿದ್ದ ಕೆಎಸ್‌ಬಿ ಚಾಂಪಿಯನ್ಸ್ ಟ್ರೋಫಿ 2024ರ ಮೃದು ಚೆಂಡಿನ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯವು ವರ್ಣರಂಚಿತ ಸಮಾರೋಪ ಸಮಾರಂಭದೊಂದಿಗೆ ಸಮಾಪನಗೊಂಡಿತು.
ಪುರುಷರ ಹಾಗೂ ವನಿತೆಯರ ತಂಡಗಳೂ ಸೇರಿದಂತೆ ದ್ವೀಪದ ಒಟ್ಟು 34 ತಂಡಗಳು ಈ ಪಂದ್ಯಾಟದಲ್ಲಿ ಪಾಲ್ಗೊಂಡಿದ್ದವು. ಪುರುಷರ ತಂಡಗಳ ನಡುವಿನ ಫೈನಲ್ ಪಂದ್ಯಾಟದಲ್ಲಿ ರಫಾ ಇಂಡಿಯನ್ ಸ್ಟಾರ್ಸ್ ತಂಡವು ನ್ಯೂ ವರ್ಲ್ಡ್ ತಂಡವನ್ನು ಮಣಿಸಿ ಪಂದ್ಯಾಟದ ಚಾಂಪಿಯನ್ಸ್ ಆಗಿ ಮೂಡಿಬಂದರೆ ವನಿತೆಯರ ಅಂತಿಮ ಹಂತದ ಪಂದ್ಯಾಟದಲ್ಲಿ ಕನ್ನಡ ಸಂಘ ಬಹ್ರೈನ್ ಎ ತಂಡವು ಎಚ್.ಪಿ.ಸಿ.ಎ. ಕ್ವೀನ್ಸ್ ತಂಡವನ್ನು ಸೋಲಿಸಿ ವನಿತೆಯರ ಚಾಂಪಿಯನ್ಸ್ ಪಟ್ಟವನ್ನು ತನ್ನ ಮಡಿಲಿಗೆ ಹಾಕಿಕೊಂಡಿತು. 16 ವರ್ಷದ ಒಳಗಿನ ಬಾಲಕರ ಪಂದ್ಯಾಟದಲ್ಲಿ ಎನ್.ಎಸ್.ಪಿ. ತಂಡವನ್ನು ಮಣಿಸಿದ ಎಚ್.ಪಿ.ಸಿ.ಎ. ತಂಡವು ಚಾಂಪಿಯನ್ಸ್ ಆಗಿ ಹೊರಹೊಮ್ಮಿತ್ತು.
ಪಂದ್ಯಾಟವನ್ನು ವೀಕ್ಷಿಸಿದ ಜಾವಗಲ್ ಶ್ರೀನಾಥ್ ಅವರು, ಕ್ರೀಡಾಪಟುಗಳ ಕ್ರೀಡಾ ಕ್ಷಮತೆ ಹಾಗೂ ಕ್ರೀಡಾ ಸ್ಪೂ³ರ್ತಿಯನ್ನು ಶ್ಲಾಘಿಸಿ ಬಹುಮಾನಗಳನ್ನು ವಿತರಿಸಿದರು.
ಕನ್ನಡ ಸಂಘದ ಅಧ್ಯಕ್ಷ ಅಮರನಾಥ್ ರೈ ಮಾತನಾಡಿ, ಪಂದ್ಯಾಟವು ಯಶಸ್ವಿಯಾಗಿ ಮೂಡಿ ಬಂದುದರ ಬಗ್ಗೆ ತಮ್ಮ ಮೆಚ್ಚುಗೆಯನ್ನು ಸೂಚಿಸಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಅಂತಿಮ ಹಂತದ ಪಂದ್ಯಾಟಕ್ಕೂ ಮುನ್ನ ಕನ್ನಡ ಭವನದಲ್ಲಿ ಜಾವಗಲ್ ಶ್ರೀನಾಥ್ ಅವರಿಗೆ ಅಭಿನಂದನ ಸಮಾರಂಭ ಆಯೋಜಿಸಲಾಗಿತ್ತು. ಈ ವೇಳೆ ಮಾತನಾಡಿದ ಶ್ರೀಕಾಂತ್, ಕನ್ನಡ ಸಂಘದ ಕಾರ್ಯವೈಖರಿಯನ್ನು ಮುಕ್ತಕಂಠದಿಂದ ಹೊಗಳಿದರು. ತದನಂತರ ನೆರೆದವರೊಂದಿಗೆ ಕ್ರಿಕೆಟಿಗೆ ಸಂಭಂದಪಟ್ಟಂತೆ ನಡೆದ ಮುಕ್ತ ಸಂವಾದದಲ್ಲಿ ನೆರೆದವರ ಪ್ರಶ್ನೆಗಳಿಗೆ ಉತ್ತರಿಸಿದರು. ಇಲ್ಲಿನ ಭಾರತೀಯ ದೂತಾವಾಸದ ರಾಯಭಾರಿಗಳಾದ ವಿನೋದ್ ಕೆ. ಜಾಕೋಬ್ ಮುಖ್ಯ ಅತಿಥಿಗಳಾಗಿ ಆಗಮಿಸಿ ತಮ್ಮ ಭಾಷಣವನ್ನು ಕನ್ನಡದಲ್ಲಿಯೇ ಮಾಡಿ ಎಲ್ಲರನ್ನು ಅಚ್ಚರಿಗೊಳಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.
ವೇದಿಕೆಯಲ್ಲಿ ಸಂಘದ ಅಧ್ಯಕ್ಷ ಅಮರನಾಥ್ ರೈ, ಮಂಗಳೂರಿನ ವೈದ್ಯ ಹಾಗೂ ದಕ್ಷಿಣ ಕನ್ನಡ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ್ ರೈ, ಬಹ್ರೈನ್ ಕ್ರಿಕೆಟ್ ಫೆಡರೇಶನ್‌ನ ಸಲಹಾ ಸಮಿತಿಯ ಅಧ್ಯಕ್ಷ ಮೊಹಮ್ಮದ್ ಮನ್ಸೂರ್,ಉಪಾಧ್ಯಕ್ಷ ಮಹೇಶ್ ಕುಮಾರ್ ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷ ಅಮರನಾಥ್ ರೈ ಪ್ರಾಸ್ತಾವಿಕ ಭಾಷಣ ಮಾಡಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ರಾಂಪ್ರಸಾದ್ ಅಮ್ಮೆನಡ್ಕ ನಿರೂಪಿದರು. ಕ್ರಿಕೆಟ್ ಪಂದ್ಯಾಟದ ಪ್ರಧಾನ ಸಂಯೋಜಕರಾಗಿ ಕ್ರೀಡಾ ಕಾರ್ಯದರ್ಶಿ ಜಾನ್ ದೀಪಕ್ ಪಿಂಟೋ, ಡಿ. ರಮೇಶ್, ರೆಮಿ ಪಿಂಟೋ ಹಾಗೂ ಅಶ್ವಿನ್ ದಯಾನಂದ್ ಸಹಕರಿಸಿದರು. ಈ ಪಂದ್ಯಾಟದ ಶೀರ್ಷಿಕ ಪ್ರಾಯೋಜಕರಾಗಿ ಬಿ.ಎಂ.ಎಂ.ಐ. ಸಂಸ್ಥೆ ಸಹಕರಿಸಿತ್ತು.
*ಕಮಲಾಕ್ಷ ಅಮೀನ್