ಡೆಹ್ರಾಡೂನ್: ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿರುವ ಚಂಪಾವತ್ ವಿಧಾನಸಭಾ ಕ್ಷೇತ್ರದಲ್ಲಿ ಮೇ 31 ರಂದು ಉಪಚುನಾವಣೆ ನಡೆಯಲಿದ್ದು, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ 40 ಬಿಜೆಪಿ ನಾಯಕರು ಮುಖ್ಯಮಂತ್ರಿ ಪರ ಪ್ರಚಾರ ನಡೆಸಲಿದ್ದಾರೆ.ಜೂನ್ 2 ರಂದು ಫಲಿತಾಂಶ ಪ್ರಕಟವಾಗಲಿದೆ.
ಚಂಪಾವತ್ ಸ್ಥಾನವನ್ನು ಧಾಮಿ ಅವರಿಗೆ ಗೆ ಬಿಜೆಪಿ ಶಾಸಕ ಕೈಲಾಶ್ ಚಂದ್ರ ಗೆಹ್ಟೋರಿ ಅವರು ರಾಜೀನಾಮೆ ನೀಡಿ ಬಿಟ್ಟು ಕೊಟ್ಟಿದ್ದರು. ಗೆಹ್ಟೋರಿ ಅವರು ಕಾಂಗ್ರೆಸ್‌ನ ಹೇಮೇಶ್ ಖಾರ್ಕ್ವಾಲ್ ಅವರನ್ನು 5,300 ಮತಗಳಿಂದ ಸೋಲಿಸಿದ್ದರು.
ಯೋಗಿ ಆದಿತ್ಯನಾಥ್, ಕೇಂದ್ರ ಸಚಿವರಾದ ಸ್ಮೃತಿ ಇರಾನಿ ಮತ್ತು ಅನುರಾಗ್ ಠಾಕೂರ್, ರಾಜ್ಯಸಭಾ ಸದಸ್ಯರಾದ ಅನಿಲ್ ಬಲೂನಿ ಮತ್ತು ನರೇಶ್ ಬನ್ಸಾಲ್, ಮಾಜಿ ಕೇಂದ್ರ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್, ಪ್ರದೇಶ ಬಿಜೆಪಿ ಅಧ್ಯಕ್ಷ ಮದನ್ ಕೌಶಿಕ್, ಮಾಜಿ ಮುಖ್ಯಮಂತ್ರಿಗಳಾದ ತ್ರಿವೇಂದ್ರ ಸಿಂಗ್ ರಾವತ್ ಮತ್ತು ತಿರತ್ ಸಿಂಗ್ ರಾವತ್, ಧಾಮಿ ಅವರ ಸಂಪುಟ ಸಹೋದ್ಯೋಗಿಗಳು ಸತ್ಪಾಲ್ ಮಹಾರಾಜ್ , ಧನ್ ಸಿಂಗ್ ರಾವತ್ ಮತ್ತು ರೇಖಾ ಆರ್ಯ ಪಕ್ಷದ ಪ್ರಮುಖ ಪ್ರಚಾರಕರಾಗಿದ್ದಾರೆ.
ಫೆಬ್ರವರಿಯಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಉತ್ತರಾಖಂಡದಲ್ಲಿ ಬಿಜೆಪಿ ಸತತ ಎರಡನೇ ಅವಧಿಗೆ ಅಧಿಕಾರಕ್ಕೆ ಬಂದರೂ, ಪುಷ್ಕರ್ ಸಿಂಗ್ ಧಾಮಿ ಅವರು ಕಾಂಗ್ರೆಸ್‌ನ ಭುವನ್ ಚಂದ್ರ ಕಪ್ರಿ ವಿರುದ್ಧ ಸೋತು ಖತೀಮಾ ಸ್ಥಾನವನ್ನು ಉಳಿಸಿಕೊಳ್ಳಲು ವಿಫಲರಾಗಿದ್ದರು.
ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಆರು ತಿಂಗಳೊಳಗೆ ಶಾಸಕರಾಗಬೇಕಿರುವ ಧಾಮಿ ಅವರು ಚಂಪಾವತ್‌ನಿಂದ ಸ್ಪರ್ಧಿಸಿ ರಾಜ್ಯ ವಿಧಾನಸಭೆಯ ಸದಸ್ಯರಾಗುವುದು ಸಾಂವಿಧಾನಿಕ ಅವಶ್ಯಕತೆಯಾಗಿದೆ.
ಸೋಮವಾರ, ಪುಷ್ಕರ್ ಸಿಂಗ್ ಧಾಮಿ ಚಂಪಾವತ್ ವಿಧಾನಸಭಾ ಉಪಚುನಾವಣೆಗೆ ನಾಮಪತ್ರ ಸಲ್ಲಿಸಿದ್ದರು.