ರಾಂಚಿ: ಝಾರ್ಖಂಡ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವ ಚಂಪೈ ಸೊರೇನ್ ಅವರು ಇಂದು ನಡೆದ ವಿಶ್ವಾಸಮತದಲ್ಲಿ ವಿಜಯ ಸಾಧಿಸಿದ್ದಾರೆ. ಈ ಮೂಲಕ ಜೆಎಂಎಂ ಸರ್ಕಾರವು ದೊಡ್ಡ ಗೆಲುವು ಪಡೆದಿದೆ.
ವಿಶ್ವಾಸಮತದ ವೇಳೆ ಒಟ್ಟು 47 ಸಮ್ಮಿಶ್ರ ಶಾಸಕರು ಚಂಪೈ ಸೊರೇನ್ ಸರ್ಕಾರವನ್ನು ಬೆಂಬಲಿಸಿದರು. 29 ಮತಗಳು ಸೊರೇನ್ ವಿರುದ್ಧ ದಾಖಲಾಯಿತು.
ಚಂಪೈ ಸೊರೇನ್ ಅವರ ವಿಜಯವನ್ನು ಜಾರ್ಖಂಡ್ ರಾಜ್ಯಪಾಲ ಸಿಪಿ ರಾಧಾಕೃಷ್ಣನ್ ಘೋಷಿಸಿದರು. ಇದನ್ನು ಜಾರ್ಖಂಡ್ ವಿಧಾನಸಭೆಯಲ್ಲಿ ಭಾರೀ ಹರ್ಷೋದ್ಗಾರಗಳೊಂದಿಗೆ ಸ್ವಾಗತಿಸಲಾಯಿತು.
81 ಸದಸ್ಯರ ಜಾರ್ಖಂಡ್ ವಿಧಾನಸಭೆಯಲ್ಲಿ ಬಹುಮತದ ಅಂಕ 41 ಆಗಿದ್ದು, ಇಂದಿನ ಸದನಕ್ಕೂ ಮುನ್ನ ಚಂಪೈ ಸೊರೇನ್ ಅವರು ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ)ಗೆ 47 ಶಾಸಕರ ಬೆಂಬಲವಿದ್ದು, ಅದು 50ಕ್ಕೆ ಹೆಚ್ಚಾಗಬಹುದು ಎಂದು ಹೇಳಿದ್ದರು.
ಭ್ರಷ್ಟಾಚಾರ ಪ್ರಕರಣದಲ್ಲಿ ಜೆಎಂಎಂ ನಾಯಕ, ಮಾಜಿ ಸಿಎಂ ಹೇಮಂತ್ ಸೊರೇನ್ ಬಂಧನವಾದ ಬಳಿಕ ಚಂಪೈ ಅವರು ಸಿಎಂ ಆಗಿ ಪ್ರಮಾಣ ಸ್ವೀಕರಿಸಿದ್ದರು. ರಾಜ್ಯಪಾಲರು ಅವರಿಗೆ ವಿಶ್ವಾಸಮತ ಸಾಬೀತುಪಡಿಸಲು 10 ದಿನಗಳ ಕಾಲಾವಕಾಶ ನೀಡಿದ್ದರು. ಆದರೆ ಹೆಚ್ಚು ದಿನ ಕಳೆದರೆ ಶಾಸಕರ ಖರೀದಿ ನಡೆಯಬಹುದು ಎಂಬ ಭೀತಿಯಿಂದ ಚಂಪೈ ಅವರು ಫೆ. 5ರಂದೇ ವಿಶ್ವಾಸಮತ ಸಾಬೀತುಪಡಿಸುವುದಾಗಿ ಘೋಷಿಸಿದ್ದರು. ರೆಸಾರ್ಟ್‌ನಲ್ಲಿದ್ದ ಜೆಎಂಎಂ ಪಕ್ಷದ ಶಾಸಕರು ಸೋಮವಾರ ವಿಶ್ವಾಸ ಮತ ಹಿನ್ನೆಲೆಯಲ್ಲಿ ರವಿವಾರವೇ ರಾಂಚಿಗೆ ವಾಪಸಾಗಿದ್ದರು.