Advertisement

Jharkhand ರಾಜ್ಯಪಾಲರನ್ನು ಭೇಟಿಯಾದ ಚಂಪೈ ಸೊರೇನ್: 39 ಶಾಸಕರು ಹೈದರಾಬಾದ್‌ಗೆ

08:56 PM Feb 01, 2024 | Team Udayavani |

ರಾಂಚಿ: ಹೇಮಂತ್ ಸೋರೆನ್ ಬಂಧನದ ನಂತರ ಜಾರ್ಖಂಡ್ ನಲ್ಲಿ ಹೊಸ ಸರಕಾರ ರಚಿಸಲು ಹಕ್ಕು ಮಂಡಿಸಿರುವ ಜಾರ್ಖಂಡ್ ಸಚಿವ ಚಂಪೈ ಸೊರೇನ್ ಗುರುವಾರ ರಾಜ್ಯಪಾಲ ಸಿ.ಪಿ. ರಾಧಾಕೃಷ್ಣನ್ ಅವರನ್ನು ಭೇಟಿ ಮಾಡಿದ್ದಾರೆ. ಚಂಪೈ ಅವರು ಸರಕಾರ ರಚಿಸಲು ಬಹುಮತವನ್ನು ಪ್ರತಿಪಾದಿಸಿದ್ದು, ರಾಜ್ಯಪಾಲರು ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.

Advertisement

ಚಂಪೈ ಅವರೊಂದಿಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಅಲಂಗೀರ್ ಆಲಂ, ಆರ್‌ಜೆಡಿ ಶಾಸಕ ಸತ್ಯಾನಂದ್ ಭೋಕ್ತಾ, ಸಿಪಿಐ (ಎಂಎಲ್) ಎಲ್ ಶಾಸಕ ವಿನೋದ್ ಸಿಂಗ್ ಮತ್ತು ಶಾಸಕ ಪ್ರದೀಪ್ ಯಾದವ್ ಇದ್ದರು.

ರಾಜ್ಯಪಾಲರೊಂದಿಗಿನ ಚಂಪೈ ಸೊರೆನ್ ಅವರ ಭೇಟಿಯು ಯಾವುದೇ ಫಲಿತಾಂಶವನ್ನು ನೀಡದ ಬಳಿಕ ಹೇಮಂತ್ ಸೊರೇನ್ ಅವರ ಸಹೋದರ ಮತ್ತು ಶಾಸಕ ಬಸಂತ್ ಸೊರೇನ್ ಸೇರಿದಂತೆ 39 ಮೈತ್ರಿ ಪಕ್ಷಗಳ ಶಾಸಕರು ಹೈದರಾಬಾದ್‌ಗೆ ಪ್ರಯಾಣಿಸಿದ್ದಾರೆ.

ಕಾಂಗ್ರೆಸ್ ಮತ್ತು ಜೆಎಂಎಂ ಆಕ್ರೋಶ

48 ಶಾಸಕರ ಬೆಂಬಲವಿದ್ದರೂ ಜಾರ್ಖಂಡ್‌ನಲ್ಲಿ ಚಂಪೈ ಸೊರೆನ್ ಅವರನ್ನು ಸರಕಾರ ರಚಿಸಲು ಆಹ್ವಾನಿಸಲು ವಿಳಂಬ ಮಾಡಿರುವುದನ್ನು ಕಾಂಗ್ರೆಸ್ ಗುರುವಾರ ಪ್ರಶ್ನಿಸಿದ್ದು, ಇದು ಸಂವಿಧಾನದ ತಿರಸ್ಕಾರ ಮತ್ತು ಸಾರ್ವಜನಿಕ ಆದೇಶದ ನಿರಾಕರಣೆಯಾಗಿದೆ ಎಂದು ಆಕ್ರೋಶ ಹೊರ ಹಾಕಿದೆ.

Advertisement

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ ಮತ್ತು ಜೆಎಂಎಂನ ಜಾರ್ಖಂಡ್ ಶಾಸಕರ ವಿಡಿಯೋವನ್ನು ಹಂಚಿಕೊಂಡಿದ್ದು, ರಾಜ್ಯಪಾಲ ಸಿ.ಪಿ. ರಾಧಾಕೃಷ್ಣನ್ ಅವರು ಭಾರತೀಯ ಪ್ರಜಾಪ್ರಭುತ್ವದ ಶವಪೆಟ್ಟಿಗೆಗೆ ಮೊಳೆ ಹೊಡೆಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

81 ಶಾಸಕರ ಸಂಖ್ಯಾಬಲದ ಸದನದಲ್ಲಿ ಬಹುಮತಕ್ಕೆ 41 ಮಂದಿ ಬೇಕು. 48 ಶಾಸಕರ ಬೆಂಬಲವಿದ್ದರೂ, ಚಂಪೈ ಸೊರೇನ್ ಜಿ ಅವರನ್ನು ಸರಕಾರ ರಚಿಸಲು ಆಹ್ವಾನಿಸದಿರುವುದು ಸ್ಪಷ್ಟವಾಗಿ ಸಂವಿಧಾನದ ತಿರಸ್ಕಾರ ಮತ್ತು ಸಾರ್ವಜನಿಕ ಆದೇಶದ ನಿರಾಕರಣೆಯಾಗಿದೆ ಎಂದು ಖರ್ಗೆ ಅವರು ಎಕ್ಸ್‌ನಲ್ಲಿ ಹಿಂದಿಯಲ್ಲಿ ಪೋಸ್ಟ್ ಮಾಡಿದ್ದಾರೆ.

JMM ಸಂಸದ ಮಹುವಾ ಮಾಜಿ ಕಿಡಿ ಕಾರಿ “22 ಗಂಟೆಗಳಿಗಿಂತ ಹೆಚ್ಚು ಸಮಯ ಕಳೆದಿದೆ. ಬಿಹಾರದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭವು ಐದು ಗಂಟೆಗಳ ಒಳಗೆ ನಡೆದಿರುವುದನ್ನು ನೀವು ನೋಡಿದ್ದೀರಿ. ರಾಜ್ಯಪಾಲರ ಉದ್ದೇಶ ಅನುಮಾನ ತರುತ್ತಿದೆ” ಎಂದು ಹೇಳಿದ್ದಾರೆ.

ಒಂದು ದಿನದ ನ್ಯಾಯಾಂಗ ಬಂಧನ
“ಹೇಮಂತ್ ಸೊರೇನ್ ಅವರನ್ನು ಒಂದು ದಿನದ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಇಡಿ 10 ದಿನಗಳ ಕಸ್ಟಡಿಗೆ ಬೇಡಿಕೆ ಸಲ್ಲಿಸಿದ್ದು ಆದರೆ ಆದೇಶವನ್ನು ಕಾಯ್ದಿರಿಸಲಾಗಿದೆ ಮತ್ತು ಮುಂದಿನ ವಿಚಾರಣೆ ನಾಳೆ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next