Advertisement

ಮತ್ತೆ ರಾಜಕೀಯ ಒಲವು ತೋರಿದ ಚಂಪಾ

08:52 AM Nov 25, 2017 | Team Udayavani |

ರಾಷ್ಟ್ರಕವಿ ಕುವೆಂಪು ಪ್ರಧಾನ ವೇದಿಕೆ: ಸಮ್ಮೇಳನದ ನೆಪದಲ್ಲಿ ರಾಜಕೀಯ ಬಾವುಟ ಹಾರಿಸಿದ ಕುಖ್ಯಾತಿಗೆ ಮೈಸೂರಿನಲ್ಲಿ ನಡೆಯುತ್ತಿರುವ 83ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಾಕ್ಷಿ ಆಯಿತು. ಸಾಹಿತ್ಯ  ಕನ್ನಡತನದ ಚೌಕಟ್ಟಿನಿಂದ ಆಚೆ ಜಿಗಿದು, ಸಮ್ಮೇಳನದ ಸರ್ವಾಧ್ಯಕ್ಷ ಪ್ರೊ. ಚಂದ್ರಶೇಖರ ಪಾಟೀಲ ಅವರೇ ರಾಜಕೀಯ ಮಾತುಗಳನ್ನು ಸ್ಫೋಟಿಸುತ್ತಿದ್ದರು. ಪ್ರಾದೇಶಿಕ ಪಕ್ಷದ ಗುಂಗಿನಿಂದ ಚಂಪಾ ಹೊರಬಂದಿಲ್ಲ ಎನ್ನುವುದಕ್ಕೆ ಅವರ ಮಾತುಗಳೇ ಕನ್ನಡಿಯಾಗಿದ್ದವು.

Advertisement

ಕಳೆದ ವಿಧಾನಸಭೆ ಚುನಾವಣೆ ವೇಳೆ ಕೆಜೆಪಿಯ ಉನ್ನತ ಹುದ್ದೆಯಲ್ಲಿದ್ದ ಚಂಪಾ ಅವರು, ಬಿ.ಎಸ್‌. ಯಡಿಯೂರಪ್ಪ ಅವರ ಮೇಲಿನ ಸಿಟ್ಟನ್ನೋ, ಬಿಜೆಪಿ ಬಗೆಗಿನ ಆಕ್ರೋಶವನ್ನೋ, ಪರೋಕ್ಷವಾಗಿ ಹೊರಹಾಕುತ್ತಿದ್ದುದು ಸ್ಪಷ್ಟವಿತ್ತು. ಕಾಂಗ್ರೆಸ್‌ ಮೇಲೆ ಪ್ರೀತಿ ತೋರುತ್ತಲೇ, ಬಿಜೆಪಿ ವಿರುದ್ಧ ಹೆಸರು ಪ್ರಸ್ತಾಪಿಸದೇ ಹರಿಹಾಯ್ದರು. ಸರ್ವಾಧ್ಯಕ್ಷ ಭಾಷಣದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು
ಓಲೈಸಿದ್ದೂ ಮೇಲ್ನೋಟಕ್ಕೆ ಕಂಡುಬಂತು. 

ಮತ್ತೂಂದು ಪಕ್ಷ ಕನ್ನಡವಿರೋಧಿ: “ರಾಜ್ಯದಲ್ಲಿರುವ ಎರಡು ರಾಜಕೀಯ ಪಕ್ಷಗಳಲ್ಲಿ ಒಂದು ಪಕ್ಷ (ಕಾಂಗ್ರೆಸ್‌) ಇಂಥ ಸಮ್ಮೇಳನಗಳನ್ನು ಆಯೋಜಿ ಸುತ್ತಾ, ಕನ್ನಡದ ಪರ ನಿಂತಿದೆ. ಇನ್ನೊಂದು ಪಕ್ಷಕ್ಕೆ (ಬಿಜೆಪಿ) ಕನ್ನಡದ ಹಿತ ಬೇಕಿಲ್ಲ. ಪ್ರತ್ಯೇಕ ನಾಡಧ್ವಜ ಬೇಕೆಂದಾಗ ಅವರು ಅಡ್ಡಬರುತ್ತಾರೆ. ಮೆಟ್ರೋದಲ್ಲಿ ಹಿಂದಿ ಹೇರಿಕೆ ಆಗುತ್ತಿದೆಯೆನ್ನುವಾಗಲೂ ಅವರು
ತಲೆಕೆಡಿಸಿಕೊಳ್ಳುವುದಿಲ್ಲ’ ಎಂದು ಆರೋಪಿಸಿದರು. ನಮ್ಮ ಜನಪ್ರತಿನಿಧಿಗಳ, ಮಂತ್ರಿಗಳ ಸಹಜ ಧರ್ಮವಾಗಿ ಕನ್ನಡ ಅರಳಬೇಕು. ಇದು ಸಾಧ್ಯವಾಗುವುದು ನಮ್ಮ ನಾಡಿನಲ್ಲಿ ನಮ್ಮದೇ ಆದ ರಾಜಕೀಯ ಪಕ್ಷ ಅಧಿಕಾರಕ್ಕೆ ಬಂದಾಗ ಮಾತ್ರ. ನಮ್ಮ ನೆಲದ ಸಾರವನ್ನು ಹೀರಿ, ನಮ್ಮ ಹವೆಯನ್ನುಂಡು, ನಮ್ಮ ಆಕಾಶದಲ್ಲಿ ಟೊಂಗೆಗಳನ್ನು ಹರಡಿ, ನಮ್ಮ ಹೂವುಗಳ ವಾಸನೆ ಬೀರಬಲ್ಲ ಒಂದು
ವೃಕ್ಷವಾಗಿ, ನಿರ್ಣಾಯಕ ರಾಜಕೀಯ ಶಕ್ತಿಯಾಗಿ ನಮ್ಮ ಕನ್ನಡಶಕ್ತಿ ಕ್ರೋಢೀಕರಣಗೊಂಡಾಗ ಮಾತ್ರ ಎಂದು ತಮ್ಮ ಆಶಯ ವ್ಯಕ್ತಪಡಿಸಿದರು.

ರಾಷ್ಟ್ರೀಯ ಪಕ್ಷಗಳಿಂದ ಕನ್ನಡಕ್ಕೆ ಲಾಭವಿಲ್ಲ: ರಾಷ್ಟ್ರೀಯ ಪಕ್ಷಗಳ ಹೆಡ್‌ ಆಫಿಸ್‌ ಇರುವುದೇ ನವದೆಹಲಿಯಲ್ಲಿ. ಮುಖ್ಯಮಂತ್ರಿಗಳು
ಆಯ್ಕೆಯಾಗುವುದು ಪಕ್ಷದ ಶಾಸಕರ ಮನಸ್ಸಿನ ಇಚ್ಛೆಯಿಂದಲ್ಲ. ಹೈಕಮಾಂಡಿನ ಮನಸುಖರಾಯರ ಲಹರಿಯಿಂದ. ಹೀಗೆ ಪಾರ್ಟಿಯಲ್ಲಿ ಕುಕ್ಕರಿಸಿದ ಮುಖ್ಯಮಂತ್ರಿ ಸದಾ ತನ್ನ ಅಧಿಕಾರ ಉಳಿಸಿಕೊಳ್ಳುವುದನ್ನೇ ಧ್ಯಾನಿಸಬೇಕು. ತನ್ನ ಮಂತ್ರಿ ಮಂಡಲದ ಒಬ್ಬ ಸಣ್ಣ ಮಂತ್ರಿಯ ಖಾತೆ ಬದಲಾವಣೆಗೂ ಅವರು ದಿಲ್ಲಿಗೆ ಓಡಬೇಕು. ಇಂಥ ರಾಜಕೀಯ ಪಕ್ಷಗಳಿಂದ ಕನ್ನಡಕ್ಕೆ ಯಾವ ಲಾಭವೂ
ಇಲ್ಲ ಎಂದರು ಚಂಪಾ.

ಸೆಕ್ಯುಲರ್‌ ಪಕ್ಷವನ್ನೇ ಆರಿಸಿ: ಬರಲಿರುವ ಚುನಾವಣೆಯಲ್ಲಿ ಅಧಿಕಾರ ಗದ್ದುಗೆಗೆ ಹತ್ತಿರ ಬರಬಹುದಾದ ಒಂದು ರಾಷ್ಟ್ರೀಯ ಪಕ್ಷವನ್ನೇ
ಆರಿಸುವುದಾದರೆ, ಆ ರಾಷ್ಟ್ರೀಯ ಪಕ್ಷಕ್ಕೆ ಒಂದು ಪ್ರಾದೇಶಿಕ ಅಜೆಂಡಾ ಇದೆಯೋ ಎಂಬುದನ್ನು ಪರಿಶೀಲಿಸಬೇಕು. ರಾಜ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಆ ಪಕ್ಷದ ನಿಲುವೇನು? ಪ್ರಣಾಳಿಕೆಯಲ್ಲಿ ಸ್ಪಷ್ಟ ಪ್ರಸ್ತಾಪಗಳಿವೆಯೇ? ಅವರ ಈವರೆಗಿನ ನಡೆ 
ನುಡಿಗಳಲ್ಲಿ ಪ್ರಾಮಾಣಿಕತೆ ಇದೆಯೇ? ಇವು ನಮ್ಮ ಒರೆಗಲ್ಲುಗಳಾಗಬೇಕು. ಈ ಪಕ್ಷ ಸಂವಿಧಾನದ ಮೌಲ್ಯಗಳಿಗೆ ಬದ್ಧವಿರುವ ಸೆಕ್ಯುಲರ್‌ ಪಕ್ಷವಾಗಿರಬೇಕೆಂದು ಮತ್ತೆ ಹೇಳಬೇಕಾಗಿಲ್ಲ ಎಂದು ಪರೋಕ್ಷವಾಗಿ ಬಿಜೆಪಿಗೆ ಚಾಟಿ ಬೀಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next