Advertisement

ಜಾತಿವಾದಿಗಳನ್ನು ಟೀಕಿಸಿದ್ದ ಚಂಪಾ:ಡಾ|ಪಾಟೀಲ

05:38 PM Jan 18, 2022 | Team Udayavani |

ಧಾರವಾಡ: ಚಳವಳಿಗಳ ಐಕಾನ್‌ ಆಗಿರುತ್ತಿದ್ದ ಚಂದ್ರಶೇಖರ್‌ ಪಾಟೀಲರ ವ್ಯಂಗ್ಯದ ಹಿಂದೆ ನೋವು, ವಿಮರ್ಶೆ ಇರುತ್ತಿತ್ತು ಹೊರತು ಎಂದಿಗೂ ಮತ್ತೂಬ್ಬರಿಗೆ ನೋವು ಮಾಡುವ ಉದ್ದೇಶ ಇರುತ್ತಿರಲಿಲ್ಲ. ಅವರ ಭಾಷಣದಲ್ಲಿ ವ್ಯಂಗ್ಯ ಇಲ್ಲದೇ ಹೋದರೆ ಅದು ಅವರ ಭಾಷಣವೇ ಅನ್ನಿಸಿಕೊಳ್ಳುತ್ತಿರಲಿಲ್ಲ ಎಂದು ಬಂಡಾಯ ಸಾಹಿತಿ ಡಾ|ಸಿದ್ದನಗೌಡ ಪಾಟೀಲ ಹೇಳಿದರು.

Advertisement

ನಗರದ ಕವಿಸಂ ವೆಬಿನಾರ್‌ ಮೂಲಕ ಹಮ್ಮಿಕೊಂಡಿದ್ದ ಚಂಪಾ: ಕಂಪು-ಕೊಂಕು ಸ್ಮರಣೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಂಕ್ರಮಣ ಪತ್ರಿಕೆ ಯುವ ಬರಹಗಾರರಿಗೆ ಒಂದು ದೊಡ್ಡ ವೇದಿಕೆ ನಿರ್ಮಿಸುವ ಮೂಲಕ ತಮ್ಮ ಕಂಪನ್ನು ನಾಡಿನುದ್ದಕ್ಕೂ ಹರಡಿದರು. ಸಾಹಿತ್ಯ ಪರಿಷತ್ತಿನ ಜತೆಗೆ ಗುರುತಿಸಿದಾಗ ನಾಡಿನ ತುಂಬಾ ಟೀಕೆಗಳು ಬಂದಾಗ ಸ್ಥಿತಪ್ರಜ್ಞರಾಗಿ ಸ್ವೀಕರಿಸಿದರು.

ಅವರು ಎಂದೂ ಜಾತಿಯನ್ನು ಟೀಕಿಸಲಿಲ್ಲ, ಜಾತಿವಾದಿಗಳನ್ನು ಟೀಕಿಸಿದರು. ಅವರು ಏನು ಮಾತನಾಡುತ್ತಿದ್ದರೋ ಅದಕ್ಕೆ ಬದ್ಧರಾಗಿರುತ್ತಿದ್ದರು ಎಂದರು. ನಾಡಿನ ಚಳವಳಿಗೆ ಹೆಚ್ಚು ಕಸುವು ಕೊಟ್ಟ ಚಂಪಾ ಎಲ್ಲಿ ಇರುತ್ತಿದ್ದರೋ ಅಲ್ಲಿ ನಗೆ, ವ್ಯಂಗ್ಯ, ಮೊಣಚು ಮಾತು, ಕಾವೇರಿದ ಚರ್ಚೆ ಇರುತ್ತಿತ್ತು. ಹೀಗಾಗಿ ಚಂಪಾ ಎಂದರೆ ಎಲ್ಲರೂ ಇಷ್ಟಪಡುತ್ತಿದ್ದರು. ಅರವತ್ತು ವರ್ಷಗಳ ಕಾಲ ಬದ್ಧತೆಯೊಂದಿಗೆ ಸಾಮಾಜಿಕ ಚಳವಳಿಗಳ ಭಾಗವಾಗಿ ಕೆಲಸ ಮಾಡಿದರು. ಜೀವನದ ತುಂಬಾ ಹಸನ್ಮುಖಿಯಾಗಿ ಎಲ್ಲರೊಡನೆ ಬೆರೆಯುತ್ತಿದ್ದರು. ಆ ಕಾಲಘಟ್ಟದ ಗುರುವಾಗಿ ನಮ್ಮನ್ನು ಬೆಳೆಸುತ್ತಾ ಮಾರ್ಗದರ್ಶನ ಮಾಡಿದವರು ಎಂದರು.

ಮೈಸೂರಿನ ನಿವೃತ್ತ ಪ್ರಾಧ್ಯಾಪಕ ಕಾಳೆಗೌಡ ನಾಗವಾರ ಮಾತನಾಡಿ, ಕನ್ನಡಪರ-ಜನಪರ ಗಟ್ಟಿ ಹೋರಾಟ ಮಾಡಿದವರು ಚಂದ್ರಶೇಖರ ಪಾಟೀಲ. ಉತ್ತರ ಕರ್ನಾಟಕ ಭಾಗದ ಚಳವಳಿಗಳ ಸಂಕೇತ ಆಗಿದ್ದರು. ಇವರ ಪ್ರಾಮಾಣಿಕತೆಗೆ ಇನ್ನೊಬ್ಬರು ಸಾಟಿ ಇಲ್ಲ ಎನ್ನುವಷ್ಟು ಬದುಕಿನುದ್ದಕ್ಕೂ ಉಳಿಸಿಕೊಂಡು ಬಂದರು. ಅವರದ್ದು ಜಾತ್ಯತೀತ ವ್ಯಕ್ತಿತ್ವ ಎಂದರು. ಮಂತ್ರಿಗಳಿಗೆ, ಚುನಾಯಿತ ಪ್ರತಿನಿಧಿಗಳಿಗೆ ಯಾವ ಮುಲಾಜು ಇಲ್ಲದೇ ಅವರಿಗೆ ಬುದ್ಧಿ ಹೇಳಿದ ಸಾಹಿತಿ ಇವರೊಬ್ಬರೇ ಆಗಿದ್ದರು. ಇಷ್ಟೊಂದು ಧೈರ್ಯವಾಗಿ ಮಾತನಾಡುವ ಸಾಹಿತಿಗಳು ನಡೆದುಕೊಂಡಿದ್ದಿಲ್ಲ. ಮಾತು ಮೊಣಚು. ಆದರೆ ಸಮಚಿತ್ತಭಾವದವರಾಗಿದ್ದರು. ಇವರ ನೆನಪುಗಳು ಅಪರೂಪ. ಕರ್ನಾಟಕ ವಿದ್ಯಾವರ್ಧಕ ಸಂಘ ಅವುಗಳನ್ನು ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸುವಂತಾದರೆ ಮುಂದಿನ ಪೀಳಿಗೆಗೆ ಚಂಪಾ ಅವರ ಚಿಂತನೆಗಳನ್ನು ಕಟ್ಟಿ ಕೊಟ್ಟಂತಾಗುತ್ತದೆ ಎಂದರು.

ಬಂಡಾಯದ ಕವಿ ಸತೀಶ ಕುಲಕರ್ಣಿ ಮಾತನಾಡಿ, ಅವರ ಸಾಹಿತ್ಯಗಿಂತ ಅವರ ವ್ಯಕ್ತಿತ್ವ ಹೆಚ್ಚು ಚರ್ಚೆಗೆ ಬರುವಂತಹದ್ದು, ಕೆಲವು ದೌರ್ಬಲ್ಯಗಳು ಇದ್ದವು. ಆದರೆ ಅವು ಅಪ್ರಸ್ತುತವಾಗುತ್ತವೆ. ಎರಡು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಮಾತು ನಿಲ್ಲಿಸಿ ಬಿಟ್ಟಿದ್ದರು. ಇಂದು ನಮ್ಮ ಬಾಯಿಯನ್ನು ನಾವು ಹೊಲೆದುಕೊಂಡಿದ್ದೇವೆ. ಇನ್ನು ಬಿಚ್ಚಿ ಮಾತನಾಡುವ ಸಂದರ್ಭ ಬಂದಿದೆ.

Advertisement

ಚಂಪಾ ನಮ್ಮ ಮಾತುಗಳಾಗಿದ್ದರು, ನಮ್ಮ ಕೊರಳ ಧ್ವನಿಯಾಗಿ ಕಾರ್ಯ ಮಾಡಿದರು. ಹೀಗಾಗಿ ನಾವು ಮೌನವಾಗಿದ್ದೆವು. ಇಂದು ನಾವು ಮೌನ ಮುರಿದು ಮಾತನಾಡುವುದನ್ನು ಮಾಡಲು ಶುರು ಮಾಡಬೇಕಾಗಿದೆ ಎಂದರು. ಡಾ|ಶ್ರೀಶೈಲ ಹುದ್ದಾರ, ಡಾ|ಬಸವರಾಜ ಡೋಣೂರ, ಶಿಕ್ಷಣಾ ಧಿಕಾರಿ ಗಿರೀಶ ಪದಕಿ ಮಾತನಾಡಿದರು. ಆಂಧ್ರಪ್ರದೇಶದ ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾಲಯ ಕುಲಪತಿ ಪ್ರೊ| ತೇಜಶ್ವಿ‌ ಕಟ್ಟಿಮನಿ ಅಧ್ಯಕ್ಷತೆ ವಹಿಸಿದ್ದರು.

ಚಂದ್ರಗೌಡ ಕುಲಕರ್ಣಿ, ಜಿ.ಬಿ, ಹೊಂಬಳ, ಡಾ|ಪ್ರಕಾಶ ಭಟ್‌, ಮಂಜುಳಾ ಯಲಿಗಾರ, ವಿ.ಎನ್‌. ಕೀರ್ತಿವತಿ, ಶಿವಾನಂದ ಭಾವಿಕಟ್ಟಿ, ಸಂಜೀವ ಬಿಂಗೇರಿ, ಪಾರ್ವತಿ ವಸ್ತ್ರದ, ಗುರು ಹಿರೇಮಠ, ಈರಣ್ಣ ವಡ್ಡಿನ, ಡಾ|ಮಹೇಶ ಹೊರಕೇರಿ, ಗುರು ತಿಗಡಿ, ಡಾ|ಎಲ್‌.ಆರ್‌. ಅಂಗಡಿ, ಎಲ್‌.ಐ.ಲಕ್ಕಮ್ಮನವರ, ಅಶೋಕ ಸಜ್ಜನ, ಸೋಮಶೇಖರ ಜಾಡರ ಸೇರಿದಂತೆ ಹಲವರು ಇದ್ದರು. ಶಂಕರ ಹಲಗತ್ತಿ ನಿರೂಪಿಸಿದರು. ಡಾ|ಜಿನದತ್ತ ಹಡಲಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next