ಚಾಮರಾಜನಗರ: ಜಿಲ್ಲಾಡಳಿತ ಚಾಮರಾಜ ನಗರ ಹಾಗೂ ದಸರಾ ಮಹೋತ್ಸವ ಸಮಿತಿ ಮೈಸೂರು ವತಿಯಿಂದ ನಡೆದ ನಾಲ್ಕು ದಿನಗಳ ಚಾಮರಾಜನಗರ ದಸರಾ ಮಹೋತ್ಸವ ವರ್ಣರಂಜಿತ ತೆರೆ ಕಂಡಿತು.
ನಗರದ ಚಾಮರಾಜೇಶ್ವರ ದೇವಾಲಯದ ಮುಂಭಾಗದ ಪ್ರಧಾನ ವೇದಿಕೆಯಲ್ಲಿ ದಸರಾ ಸಮಾರೋಪ ಸಮಾರಂಭ ನಡೆಸಲಾಯಿತು.
ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಮಾತನಾಡಿ, ಕಳೆದ ನಾಲ್ಕು ದಿನಗಳ ಕಾಲ ನಡೆದ ಚಾಮರಾಜನಗರ ದಸರಾ ಮಹೋತ್ಸವ ಯಶಸ್ವಿಯಾಗಿ ನಡೆದಿದೆ. ಇದಕ್ಕೆ ಕಾರಣರಾದ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳ ಪ್ರತಿನಿಧಿಗಳು, ದಸರಾ ಸಮಿತಿಯ ಸದಸ್ಯರು, ಮಾಧ್ಯಮ ಪ್ರತಿನಿಧಿಗಳು, ಜಿಲ್ಲೆಯ ಜನತೆಗೆ ಜಿಲ್ಲಾಡಳಿತ ಹಾಗೂ ದಸರಾ ಮಹೋತ್ಸವ ಸಮಿತಿಯಿಂದ ಧನ್ಯವಾದಗಳನ್ನು ಅರ್ಪಿಸುವು ದಾಗಿ ತಿಳಿಸಿದರು.
ಕಾವೇರಿ ಅಚ್ಚುಕಟ್ಟು ಪ್ರಾದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜಿ.ನಿಜಗುಣರಾಜು ಮಾತನಾಡಿ, ಇಡೀ ವಿಶ್ವದ ಗಮನಸೆಳೆಯುವ ಹಬ್ಬ ದಸರಾ ಆಗಿದೆ. ನಾಡಿನ ರಕ್ಷಣೆಗಾಗಿ ದುಷ್ಟರ ಸಂಹಾರಕ್ಕಾಗಿ ನವರಾತ್ರಿಯಲ್ಲಿ ದುರ್ಗಾಪೂಜೆ ಮಹತ್ವ ಪಡೆದುಕೊಂಡಿದೆ. ಕಳೆದ 2 ವರ್ಷಗಳಿಂದ ಕೋವಿಡ್ ನಿಂದಾಗಿ ದಸರಾ ಅದ್ದೂರಿಯಾಗಿ ಆಚರಣೆಯಾಗಿರಲಿಲ್ಲ. ಈ ಬಾರಿ ಜಿಲ್ಲೆಯಲ್ಲಿ ವಿಜೃಂಭಣೆಯಿಂದ ದಸರಾ ಆಚರಿಸಲಾಗಿದೆ. ಜನರ ಪ್ರತಿಕ್ರಿಯೆಯು ಚೆನ್ನಾಗಿದೆ ಎಂದರು.
ಜನಪದ ಸಾಹಿತ್ಯದ ತವರೂರಾದ ಚಾಮರಾಜನಗರ ಜಿಲ್ಲೆ ವಿಶಿಷ್ಟವಾದದ್ದು, ಜಿಲ್ಲೆಯಲ್ಲಿ ಶೇ. 52ರಷ್ಟು ಅರಣ್ಯ ಪ್ರದೇಶವಿದೆ. ಶೇ. 48ರಷ್ಟು ಜನವಸತಿ ಪ್ರದೇಶವಿದೆ. ಪ್ರವಾಸೋದ್ಯಮಕ್ಕೆ ಹೆಚ್ಚಿನ ಅವಕಾಶಗಳು ನಮ್ಮ ಜಿಲ್ಲೆಯಲ್ಲಿವೆ. ದಸರಾ ವೇಳೆ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಸ್ಥಳೀಯ ಕಲಾವಿದರಿಗೂ ಆದ್ಯತೆ ನೀಡಿದ್ದು ಅನುಕರಣೀಯವಾಗಿದೆ ಎಂದು ಜಿ. ನಿಜಗುಣರಾಜು ತಿಳಿಸಿದರು.
ನಗರಸಭೆ ಅಧ್ಯಕ್ಷ ಆಶಾ, ಸದಸ್ಯರಾದ ಅಬ್ರಾರ್ ಅಹಮದ್, ಎ.ಪಿ.ಎಂ.ಸಿ. ಅಧ್ಯಕ್ಷ ಮನೋಜ್ ಪಟೇಲ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯತ್ರಿ, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿ ದೇವಿ, ಜಿಲ್ಲಾ ಪಂಚಾಯಿತಿ ಉಪಕಾ ರ್ಯದರ್ಶಿ ಗುಡೂರು ಭೀಮಸೇನ, ತಹಶೀಲ್ದಾರ್ ಬಸವರಾಜು ಇತರರು ಇದ್ದರು.