ಚಾಮರಾಜನಗರ: ಬಿಜೆಪಿ ಸರಕಾರದ ವಿರುದ್ಧ ವಾಗ್ಧಾಳಿ ಮುಂದುವರಿಸಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ಕರ್ನಾಟಕದ ಇತಿಹಾಸದಲ್ಲಿ ಅತ್ಯಂತ ಭ್ರಷ್ಟ ಸರಕಾರ ಅಂದರೆ ಅದು ಬಿಜೆಪಿ ಸರಕಾರ ಎಂದು ಹರಿಹಾಯ್ದರು.
ಭ್ರಷ್ಟಾಚಾರ ಕುರಿತು ಮಾತನಾಡಿದರೆ, ಸುಳ್ಳಿನ ಸಾಮ್ರಾಟನಾಗಿರುವ ಸುಧಾಕರನ ಮೂಲಕ ಉತ್ತರ ಕೊಡಿಸುತ್ತಾರೆ. ಆತ ಅಲಿಬಾಬಾ ಮತ್ತು 40 ಮಂದಿ ಕಳ್ಳರ ತಂಡದ ಸದಸ್ಯ ಎಂದು ಛೇಡಿಸಿದರು.
ನಗರದಲ್ಲಿ ಗುರುವಾರ ನಡೆದ ಪ್ರಜಾಧ್ವನಿ ಯಾತ್ರೆಯ ಬಹಿರಂಗ ಸಮಾವೇಶದಲ್ಲಿ ಮಾತನಾಡಿ, ಕಾಂಗ್ರೆಸ್ ಪಕ್ಷ ಡಾ| ಅಂಬೇಡ್ಕರ್ ನೀಡಿರುವ ಸಂವಿಧಾನದ ಬಗ್ಗೆ ನಂಬಿಕೆ ಇಟ್ಟಿರುವ ಪಕ್ಷ. ಸಂವಿಧಾನದಲ್ಲಿ ಸಮಾನ ಸಮಾಜ, ಜಾತ್ಯತೀತತೆಯಲ್ಲಿ ಕಾಂಗ್ರೆಸ್ ನಂಬಿಕೆ ಇಟ್ಟಿದೆ. ಆದರೆ ಬಿಜೆಪಿ ಇದಕ್ಕೆ ವಿರುದ್ಧವಾಗಿದೆ ಎಂದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ಕಾರ್ಮಿಕ ಸಮಾಜಗಳಿಗೆ ನೆರವು ನೀಡುವಂತೆ ಸರಕಾರಕ್ಕೆ ಸಲಹೆ ನೀಡಿದೆವು. ಯಾರಿಗೂ ಸಹಾಯ ಮಾಡಲಿಲ್ಲ. ಆರೋಗ್ಯ ಮಂತ್ರಿ ಸುಧಾಕರ್, ಜಿಲ್ಲಾ ಉಸ್ತುವಾರಿ ಮಂತ್ರಿ ಸುರೇಶ್‌ಕುಮಾರ್ ಆಗಿ ದ್ದರು. ಚಾಮರಾಜ ನಗರ ದಲ್ಲಿ ಆಕ್ಸಿಜನ್ ನೀಡದೇ 36 ಜನರ ಕೊಲೆ ಮಾಡಿದರು. ಅವರ ಮನೆಗೆ ಜಿಲ್ಲಾ ಉಸ್ತು ವಾರಿ ಸಚಿವರಾಗಲಿ, ಆರೋಗ್ಯ ಸಚಿವರಾಗಲಿ ಮಾನವೀಯತೆ ದೃಷ್ಟಿಯಿಂದಲಾದರೂ ಸಾಂತ್ವನ ಹೇಳಲಿಲ್ಲ ಎಂದು ಟೀಕಿಸಿದರು.
ಪ್ರಮುಖರಾದ ರಣದೀಪ್ ಸಿಂಗ್ ಸುಜೇìವಾಲ, ಆರ್. ಧ್ರುವನಾರಾ ಯಣ, ನಾಯಕ ಬಿ.ಕೆ.ಹರಿಪ್ರಸಾದ್ ಮುಂತಾದವರಿದ್ದರು.
ನಮ್ಮ ಪಕ್ಷ ಆಂತರಿಕ ಸರ್ವೇ ಮಾಡಿಸಿದ್ದು, ವಿಧಾನಸಭಾ ಚುನಾವಣೆಯಲ್ಲಿ 136 ಸೀಟು ಗೆಲ್ಲಲಿದ್ದೇವೆ. ಜನರು ಬೆಲೆಯೇರಿಕೆಯಿಂದ ತತ್ತರಿಸಿದ್ದಾರೆ. ಭ್ರಷ್ಟ ಬಿಜೆಪಿ ಸರಕಾರದ ದುರಾಡಳಿತದಿಂದ ಬೇಸತ್ತಿದ್ದಾರೆ. ಹಾಗಾಗಿ ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ತರಲು ನಿರ್ಧರಿಸಿದ್ದಾರೆ.
-ಡಿ.ಕೆ. ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ