ಚಾಮರಾಜನಗರ: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಖಂಡಿಸಿ ಕರ್ನಾಟಕ ಸೇನಾ ಪಡೆ ಕಾರ್ಯಕರ್ತರು ಹೊಟ್ಟೆಗೆ ತಣ್ಣೀರು ಬಟ್ಟೆ ಹಾಕೊಂಡು ನಗರದಲ್ಲಿ ಬುಧವಾರ ವಿನೂತನ ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಡಳಿತ ಭವನದ ಮುಖ್ಯಗೇಟ್ ಮುಂಭಾಗದಲ್ಲಿ ನಡೆದ ಪ್ರತಿಭಟನೆಯಲ್ಲಿ, ಹೊಟ್ಟೆಗೆ ತಣ್ಣೀರು ಬಟ್ಟೆ ಹಾಕಿಕೊಂಡು ತಮಿಳುನಾಡು, ಕರ್ನಾಟಕ ಸರ್ಕಾರ, ಕಾವೇರಿ ನಿರ್ವಹಣಾ ಮಂಡಳಿ ವಿರುದ್ಧ ಘೋಷಣೆ ಕೂಗಿದರು.
ಕ್ರಮ ಕೈಗೊಂಡಿಲ್ಲ: ಪ್ರತಿಭಟನೆ ನೇತೃತ್ವ ವಹಿಸಿದ್ದ ಕರ್ನಾಟಕ ಸೇನಾ ಪಡೆ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಮಾತನಾಡಿ, ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿರುವ ಕ್ರಮ ವಿರೋಧಿಸಿ ರಾಜ್ಯಾದ್ಯಂತ ಕನ್ನಡಪರ ಸಂಘಟನೆಗಳು ನಿರಂತರ ಹೋರಾಟ ಮಾಡುತ್ತಿದ್ದರೂ ಕರ್ನಾಟಕ ಸರ್ಕಾರ, ಕಾವೇರಿ ನಿರ್ವಹಣಾ ಮಂಡಳಿ ಯಾವುದೇ ಕ್ರಮಕೈಗೊಂಡಿಲ್ಲ. ಕರ್ನಾಟಕ ಸರ್ಕಾರ, ಕಾವೇರಿ ನಿರ್ವಹಣಾ ಮಂಡಳಿ ರಾಜ್ಯದ ಜನತೆಗೆ, ರೈತರ ಹೊಟ್ಟೆಗೆ ತಣ್ಣೀರು ಬಟ್ಟೆಯೇ ಗತಿ ಎಂದು ಭಾವಿಸಿ, ಕನ್ನಡಪರ ಸಂಘಟನೆಗಳು ಹೊಟ್ಟೆಗೆ ತಣ್ಣೀರು ಬಟ್ಟೆ ಹಾಕಿ ವಿನೂತನ ಪ್ರತಿಭಟನೆ ನಡೆಸಲಾಗಿದೆ ಎಂದರು.
ಖಂಡನೀಯ: ಕಳೆದ 15 ದಿನಗಳಿಂದ ಕಾವೇರಿ ನೀರಿನ ವಿಚಾರದಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ನಡೆಯುತ್ತಿದ್ದು, ಜಿಲ್ಲೆಯಲ್ಲಿ ನಮ್ಮ ಸಂಘಟನೆ ವತಿಯಿಂದ ಕಳೆದ 7 ದಿನಗಳಿಂದ ವಿಭಿನ್ನ ರೀತಿಯಲ್ಲಿ ನಿರಂತರ ಪ್ರತಿಭಟನೆ ಮಾಡಲಾಗುತ್ತಿದೆ. ಆದರೂ ಕರ್ನಾಟಕ ಸರ್ಕಾರ ನೀರು ಬಿಟ್ಟಿರುವುದನ್ನು ಸಮರ್ಥನೆ ಮಾಡಿಕೊಳ್ಳುತ್ತಿದೆ ಹೊರತು ರಾಜ್ಯಕ್ಕೆ ಆಗಿರುವ ಅನ್ಯಾಯ ಸರಿಪಡಿಸುವ ಕೆಲಸ ಮಾಡುತ್ತಿಲ್ಲ. ಕಾವೇರಿ ನಿರ್ವಹಣಾ ಮಂಡಳಿಗೆ ಮನವಿ ಮಾಡದೇ ಇರುವುದು ಅತ್ಯಂತ ಖಂಡನೀಯ ಎಂದರು.
ರಾಜಕೀಯಕ್ಕಾಗಿ ಹೋರಾಟ ಮಾಡುತ್ತಿಲ್ಲ: ಕಾವೇರಿ ನೀರಿನ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೌನ ವಹಿಸಿರುವುದು ಅತ್ಯಂತ ಖಂಡನೀಯ. ರಾಜ್ಯದ ಉಪಮುಖ್ಯಮಂತ್ರಿ ಶಿವಕುಮಾರ್ ಮೇಕೆದಾಟು ಯೋಜನೆಗಾಗಿ ನಾವು ಹೋರಾಟ ಮಾಡುವ ಕನ್ನಡಪರ ಹೋರಾಟಗಾರರು ಎಲ್ಲಿದ್ದೀರಿ ಎಂದು ಹೇಳಿಕೆ ನೀಡಿರುವುದು ಸರಿಯಲ್ಲ. ನೀವು ಮೇಕೆದಾಟು ವಿಚಾರವಾಗಿ ವರ್ಷದಿಂದ ಹೋರಾಟ ಮಾಡುತ್ತಿದ್ದೀರಿ. ಆದರೆ ಕನ್ನಡಪರ ಸಂಘಟನೆಗಳು, ರೈತ ಸಂಘಟನೆಗಳು ಹತ್ತಾರು ವರ್ಷಗಳಿಂದ ನಿರಂತರವಾಗಿ ಹೋರಾಟ ಮಾಡುತ್ತಿವೆ. ಬರೀ ಮೇಕೆದಾಟು ಒಂದೇ ಅಲ್ಲ ಕಚೇರಿ ವಿಚಾರವಾಗಿ, ಕಳಸ ಬಂಡೂರಿ ವಿಚಾರವಾಗಿ, ಹೊಗೇನಕಲ್ ವಿಚಾರವಾಗಿ ಧ್ವನಿ ಎತ್ತಿರುವುದು ಸಂಘಟನೆ ಮಾತ್ರ. ಇದನ್ನು ಡಿ.ಕೆ.ಶಿವಕುಮಾರ್ ಅವರು ಅರ್ಥಮಾಡಿಕೊಳ್ಳಬೇಕು. ಹೋರಾಟ ದಿಂದಲೇ ಈ ದೇಶ, ರಾಜ್ಯ ಉಳಿದಿದೆ. ನಿಮ್ಮ ತರ ರಾಜಕೀಯ ಮಾಡುವುದಕ್ಕೆ ಹೋರಾಟ ಮಾಡುತ್ತಿಲ್ಲ ಎಂದು ಕಿಡಿಕಾರಿದರು.
ಕನ್ನಡಪರ ಸಂಘಟನೆಗಳ ಒಕ್ಕೂಟ ಅಧ್ಯಕ್ಷ ಶಾ.ಮುರಳಿ, ಪಣ್ಯದ ಹುಂಡಿರಾಜು, ನಿಜಧ್ವನಿ ಗೋವಿಂದರಾಜು, ಮಹೇಶ್‌ಗೌಡ, ಸಾಗರ್‌ರಾವತ್, ಗು.ಪುರುಷೋತ್ತಮ್, ಗಡಿನಾಡು ಕನ್ನಡ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಚಾ.ರಾ.ಕುಮಾರ್, ಚಾ.ಸಿ.ಸಿದ್ದರಾಜು, ಲಿಂಗರಾಜು, ತಾಂಡವಮೂರ್ತಿ, ಆಟೋನಾಗೇಶ್ ಭಾಗವಹಿಸಿದ್ದರು.