ಚಾಮರಾಜನಗರ: ಇಲ್ಲಿನ ಕೋವಿಡ್ ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆ ಸೇರಿದಂತೆ ಇತರ ಕಾರಣಗಳಿಂದ 22 ಮಂದಿ ಸಾವನ್ನಪ್ಪಿದ್ದಾರೆ. ರವಿವಾರ ರಾತ್ರಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಮುಗಿದು ರೋಗಿಗಳು ಸಂಕಷ್ಟ ಪಡುತ್ತಿದ್ದರೆ, ಅತ್ತ ಜಿಲ್ಲಾಧಿಕಾರಿ ಎಂ.ಆರ್.ರವಿ ಮನೆಯಲ್ಲಿ ನಿದ್ದೆಯಲ್ಲಿದ್ದರು!
ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಭಾನುವಾರ ರಾತ್ರಿ 10.30 ರಲ್ಲಿ ಆಕ್ಸಿಜನ್ ಸರಬರಾಜು ಮುಗಿದಿದ್ದು, ಈ ದುರಂತಕ್ಕೆ ಕಾರಣವಾಗಿದೆ. ಸದ್ಯ ಆಸ್ಪತ್ರೆಯಲ್ಲಿ 24 ವೆಂಟಿಲೇಟರ್ ಗಳು ಸೇರಿದಂತೆ 100 ಆಕ್ಸಿಜನ್ ಬೆಡ್ ಗಳು ಇವೆ. ಆದರೆ ಆಮ್ಲಜನಕ ಕೊರತೆಯಾಗಿರುವುದರಿಂದ ರೋಗಿಗಳಿಗೆ ಆಮ್ಲಜನಕ ಪೂರೈಕೆ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿತ್ತು.
ಚಾಮರಾಜನಗರ ಜಿಲ್ಲೆಗೆ ಮೈಸೂರಿನಿಂದ ಆಕ್ಸಿಜನ್ ಪೂರಕೆಯಾಗುತ್ತಿದೆ. ಆದರೆ ಮೈಸೂರು ಜಿಲ್ಲೆ ಹೊರತು ಪಡಿಸಿ ನೆರೆಯ ಜಿಲ್ಲೆಗೆ ಆಮ್ಲಜನಕ ಪೂರೈಕೆ ಮಾಡಬಾರದು ಎಂದು ಗ್ಯಾಸ್ ಏಜೆನ್ಸಿಗೆ ಆದೇಶಿಸಿರುವ ಕಾರಣ, ಜಿಲ್ಲೆಗೆ ಆಮ್ಲಜನಕ ಸಿಲಿಂಡರ್ ಗಳನ್ನು ನೀಡಿಲ್ಲ. ಹೀಗಾಗಿ ಚಾಮರಾಜ ನಗರ ಜಿಲ್ಲಾಸ್ಪತ್ರೆಗೆ ಅಗತ್ಯ ಪ್ರಮಾಣದ ಸಿಲಿಂಡರ್ ಗಳು ತಲುಪಿರಲಿಲ್ಲ.
ಆದರೆ ಈ ಎಲ್ಲಾ ಮಾಹಿತಿ ತಿಳಿದಿದ್ದರೂ ಜಿಲ್ಲಾಧಿಕಾರಿ ಯಾವುದೇ ಕ್ರಮಕೈಗೊಂಡಿಲ್ಲ. ವೈದ್ಯಾಧಿಕಾರಿಗಳು ಸೇರಿದಂತೆ ಹಲವರು ಈ ಬಗ್ಗೆ ಹೇಳಿದರೂ ಜಿಲ್ಲಾಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಈ ಅವಗಢಕ್ಕೆ ಕಾರಣವಾಗಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.
ಆಸ್ಪತ್ರೆಗೆ ಬಾರದ ಡಿಸಿ: ಆಕ್ಸಿಜನ್ ಸಿಗದೆ ಸಾವನ್ನಪ್ಪಿದವರ ಕುಟುಂಬಿಕರು ಮಧ್ಯರಾತ್ರಿಯೇ ಜಿಲ್ಲಾಧಿಕಾರಿ ಮನೆ ಮುಂದೆ ಹೋದರೂ ಯಾವುದೇ ಪ್ರಯೋಜನವಾಗಲಿಲ್ಲ. ಮನೆ ಮಂದೆ ಬಂದು ಆಕ್ರೋಶ ತೋಡಿಕೊಂಡರೂ ಡಿಸಿ ಮಾತ್ರ ಯಾವುದೇ ರೀತಿಯ ಪ್ರತಿಕ್ರಿಯೆ ತೋರಿಸಲಿಲ್ಲ ಎನ್ನುವುದು ಮಾತ್ರ ವಿಪರ್ಯಾಸ.