ಚಾಮರಾಜನಗರ: ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಸೋಮವಾರ ಚುನಾವಣೆ ನಡೆಯಲಿದ್ದು, ಪರಿಸ್ಥಿತಿ ಬಿಜೆಪಿಗೆ ಅನುಕೂಲಕರವಾಗಿದೆ. ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ವರ್ಗ ಮಹಿಳೆಗೆ ಮೀಸಲಾಗಿದೆ
31 ಸದಸ್ಯ ಬಲದ ನಗರಸಭೆಯಲ್ಲಿ ಬಿಜೆಪಿ 15, ಕಾಂಗ್ರೆಸ್ 8, ಎಸ್‌ಡಿಪಿಐ 6, ಬಿಎಸ್‌ಪಿ 1 ಪಕ್ಷೇತರ 1 ಸ್ಥಾನ ಗಳಿಸಿವೆ. ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಇಲ್ಲ. ಬಹುಮತಕ್ಕೆ 17 ಸ್ಥಾನ ಅಗತ್ಯ. ಬಿಜೆಪಿ 15 ಸ್ಥಾನ ಗೆದ್ದಿದ್ದು, 1 ಸಂಸದರ ಮತವಿದೆ. ಬಿಎಸ್‌ಪಿ ಅಥವಾ ಪಕ್ಷೇತರ ಅಭ್ಯರ್ಥಿಯಲ್ಲಿ ಒಬ್ಬರು ಬೆಂಬಲ ನೀಡಿದರೂ ಆ ಪಕ್ಷಕ್ಕೆ ಬಹುಮತ ದೊರಕುತ್ತದೆ. ಬಿಎಸ್‌ಪಿಯಿಂದ ಗೆದ್ದಿರುವ 17ನೇ ವಾರ್ಡಿನ ಸದಸ್ಯ ವಿ. ಪ್ರಕಾಶ್, ತಾವು ಈಗಾಗಲೇ ಬಿಎಸ್‌ಪಿಗೆ ರಾಜೀನಾಮೆ ನೀಡಿರುವುದಾಗಿ ತಿಳಿಸಿದ್ದಾರೆ. ಅವರು ಬಿಜೆಪಿಗೆ ಬೆಂಬಲ ನೀಡುವುದು ಬಹುತೇಕ ಖಚಿತವಾಗಿದೆ.
ಕಾಂಗ್ರೆಸ್ ಪಕ್ಷಕ್ಕೆ 1 ಶಾಸಕರ ಮತವಿದೆ. ಶಾಸಕರ ಮತವೂ ಸೇರಿದರೆ ಅದರ ಸ್ಥಾನ 9, ಎಸ್‌ಡಿಪಿಐ ಬೆಂಬಲ ನೀಡಿದರೆ ಅದರ 6 ಮತವೂ ಸೇರಿ 15 ಮತಗಳಾಗುತ್ತದೆ. ಬಿಎಸ್‌ಪಿ ಸದಸ್ಯ ವಿ. ಪ್ರಕಾಶ್ ಹಾಗೂ ಪಕ್ಷೇತರ ಸದಸ್ಯ 17 ನೇ ವಾರ್ಡ್‌ನ ಬಸವಣ್ಣ ಇಬ್ಬರ ಬೆಂಬಲ ದೊರೆತರೆ ಮಾತ್ರ ಬಹುಮತ ದೊರಕುತ್ತದೆ. ಹೀಗಾಗಿ ಪ್ರಸ್ತುತ ವಾತಾವರಣದಲ್ಲಿ ಬಿಜೆಪಿ ಅಧಿಕಾರ ಹಿಡಿಯುವುದು ಬಹುತೇಕ ಖಚಿತವಾಗಿದೆ.
ಬಿಜೆಪಿಯಿಂದ ಅಧ್ಯಕ್ಷ ಸ್ಥಾನಕ್ಕೆ 7ನೇ ವಾರ್ಡ್‌ನ ಆಶಾ ಹಾಗೂ 22ನೇ ವಾರ್ಡ್‌ನ ಮಮತಾ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್‌ಕುಮಾರ್ ಅವರ ನಿಕಟವರ್ತಿಯಾದ ಚುಡಾ ಮಾಜಿ ಅಧ್ಯಕ್ಷ ಎಸ್. ಬಾಲಸುಬ್ರಹ್ಮಣ್ಯ ಅವರ ಪತ್ನಿ ಮಮತಾ ವರಿಷ್ಠರ ಬಲ ನೆಚ್ಚಿಕೊಂಡಿದ್ದಾರೆ. ಇತ್ತ ಆಶಾ ಸದಸ್ಯರ ಬಲ ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಎಸ್‌ಟಿ ಮಹಿಳೆ ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಲ್ಲಿ 29ನೇ ವಾರ್ಡ್‌ನ ಸುಧಾ ಮಾತ್ರ ಅರ್ಹರು. ಹಾಗಾಗಿ ಉಪಾಧ್ಯಕ್ಷ ಸ್ಥಾನಕ್ಕೆ ಅಲ್ಲಿ ಪೈಪೋಟಿ ಇಲ್ಲ. ಕಾಂಗ್ರೆಸ್ ಪಕ್ಷದಲ್ಲಿ 13ನೇ ವಾರ್ಡಿನ ಕಲಾವತಿ ರವಿಕುಮಾರ್ ಹಾಗೂ 14ನೇ ವಾರ್ಡಿನ ಚಿನ್ನಮ್ಮ , 18ನೇ ವಾರ್ಡಿನ ಶಾಂತಿ ಪ್ರಬಲ ಆಕಾಂಕ್ಷಿಗಳು. ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನಲ್ಲೂ ಏಕೈಕ ಅಭ್ಯರ್ಥಿ ಇದ್ದಾರೆ. 16ನೇ ವಾರ್ಡ್‌ನ ಚಂದ್ರಕಲಾ ಮಾತ್ರ ಸ್ಪರ್ಧೆಗೆ ಅರ್ಹರಾಗಿದ್ದಾರೆ. ಸದಸ್ಯ ಬೆಂಬಲ ದೊರಕುವುದು ಕಷ್ಟ ಎಂದು ಗೊತ್ತಿರುವುದರಿಂದ ಕಾಂಗ್ರೆಸ್ ತಟಸ್ಥವಾಗಿದೆ ಎಂದು ಮೂಲಗಳು ತಿಳಿಸಿವೆ. ಸೋಮವಾರ ಸಂಜೆ 4ಕ್ಕೆ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆಗೆ ಚುನಾವಣೆ ನಡೆಯಲಿದೆ. ಮಧ್ಯಾಹ್ನ 1ರಿಂದ 2 ಗಂಟೆಯವರೆಗೆ ನಾಮಪತ್ರ ಸಲ್ಲಿಕೆ ನಡೆಯಲಿದೆ. 4 ಗಂಟೆಗೆ ಚುನಾವಣಾ ಸಭೆ ಆರಂಭವಾಗಲಿದ್ದು, 10 ನಿಮಿಷ ಕಾಲ ನಾಮಪತ್ರ ಪರಿಶೀಲನೆ ನಡೆಯಲಿದೆ. ನಾಮಪತ್ರ ವಾಪಸ್ ಪಡೆಯಲು 5 ನಿಮಿಷಗಳ ಕಾಲಾವಕಾಶವಿದೆ.