Advertisement

ಚಾಮರಾಜನಗರ ಜಿಲ್ಲೆಯ 129 ಗ್ರಾ.ಪಂ.ಗಳ ಚುನಾವಣೆಗೆ 1046 ಮತಗಟ್ಟೆಗಳ ಸ್ಥಾಪನೆ

07:43 PM Nov 30, 2020 | sudhir |

ಚಾಮರಾಜನಗರ: ರಾಜ್ಯ ಚುನಾವಣಾ ಆಯೋಗ ಗ್ರಾಮ ಪಂಚಾಯಿತಿ ಚುನಾವಣೆಗೆ ದಿನಾಂಕ ಘೋಷಿಸಿದ್ದು, ಜಿಲ್ಲೆಯಲ್ಲಿ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಡಿ. 22 ರಂದು ಮೊದಲ ಹಂತಕ್ಕೆ ಹಾಗೂ ಡಿ. 27ರಂದು ಎರಡನೇ ಹಂತಕ್ಕೆ ಮತದಾನ ನಡೆಯಲಿದೆ.

Advertisement

ಚಾಮರಾಜನಗರ ಹಾಗೂ ಗುಂಡ್ಲುಪೇಟೆ ತಾಲೂಕಿಗೆ ಮೊದಲ ಹಂತದಲ್ಲಿ ಅಂದರೆ ಡಿ. 22ರಂದು ಚುನಾವಣೆ ನಡೆಯಲಿದೆ. ಯಳಂದೂರು, ಕೊಳ್ಳೇಗಾಲ ಹಾಗೂ ಹನೂರು ತಾಲೂಕಿಗೆ ಎರಡನೇ ಹಂತದಲ್ಲಿ, ಅಂದರೆ ಡಿ. 27ರಂದು ಮತದಾನ ನಡೆಯಲಿದೆ.

ಮೊದಲನೇ ಹಂತಕ್ಕೆ ಡಿ. 7ರಂದು ಹಾಗೂ ಎರಡನೇ ಹಂತಕ್ಕೆ ಡಿ. 11 ರಂದು ಚುನಾವಣಾ ಅಧಿಸೂಚನೆ ಹೊರಡಿಸಲಾಗುತ್ತದೆ. ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಸಲು ಡಿ. 11 ಕೊನೆಯ ದಿನ ಹಾಗೂ ದ್ವಿತೀಯ ಹಂತಕ್ಕೆ ನಾಮಪತ್ರ ಸಲ್ಲಿಸಲು ಡಿ. 16 ಕೊನೆಯ ದಿನವಾಗಿದೆ. ಡಿ. 12 ರಂದು ಮೊದಲ ಹಂತಕ್ಕೆ ಹಾಗೂ ಡಿ. 17ಕ್ಕೆ ಎರಡನೇ ಹಂತಕ್ಕೆ ನಾಮಪತ್ರಗಳನ್ನು ಪರಿಶೀಲಿಸಲಾಗುತ್ತದೆ. ನಾಮಪತ್ರ ಹಿಂತೆಗೆದುಕೊಳ್ಳಲು ಕ್ರಮವಾಗಿ ಡಿ. 14 ಹಾಗೂ 19 ಕೊನೆಯ ದಿನ. ಡಿ. 30ರಂದು ಮತ ಎಣಿಕೆ ನಡೆಯಲಿದೆ.

ಇದನ್ನೂ ಓದಿ:ಅತಿವೃಷ್ಠಿ ಹಾನಿ ಪರಿಹಾರಕ್ಕೆ ಲಂಚ ಕೇಳಿದ ಮಸಗುಪ್ಪಿ ಗ್ರಾಮ ಲೆಕ್ಕಾಧಿಕಾರಿ ಎಸಿಬಿ ಬಲೆಗೆ

ಜಿಲ್ಲೆಯಲ್ಲಿ ಒಟ್ಟು 129 ಗ್ರಾಮಪಂಚಾಯಿತಿಗಳಿವೆ. ಚಾಮರಾಜನಗರ ತಾಲೂಕಿನಲ್ಲಿ 43, ಗುಂಡ್ಲುಪೇಟೆ ತಾಲೂಕಿನಲ್ಲಿ 34, ಯಳಂದೂರು ತಾಲೂಕಿನಲ್ಲಿ 12, ಕೊಳ್ಳೇಗಾಲ ತಾಲೂಕಿನಲ್ಲಿ 16 ಹಾಗೂ ಹನೂರು ತಾಲೂಕಿನಲ್ಲಿ 24 ಗ್ರಾಮ ಪಂಚಾಯಿತಿಗಳಿವೆ.

Advertisement

ಜಿಲ್ಲೆಯಲ್ಲಿ ಮೂಲ ಮತಗಟ್ಟೆಗಳ ಸಂಖ್ಯೆ 839 ಹಾಗೂ ಹೆಚ್ಚುವರಿ ಮತಗಟ್ಟೆಗಳ ಸಂಖ್ಯೆ 207 ಸೇರಿ ಒಟ್ಟು 1046 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತದೆ.

ಜಿಲ್ಲೆಯ ಮತದಾರರು: ಜಿಲ್ಲೆಯ ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಟ್ಟಂತೆ ಒಟ್ಟು 7,00,116 ಮತದಾರರಿದ್ದಾರೆ. ಇವರಲ್ಲಿ 3,48,897 ಪುರುಷರು, 3,51,171 ಮಂದಿ ಮಹಿಳೆಯರು ಹಾಗೂ 48 ಮಂದಿ ತೃತೀಯ ಲಿಂಗಿ ಮತದಾರರಿದ್ದಾರೆ.

ಮಹಿಳಾ ಮತದಾರರೇ ಹೆಚ್ಚು!: ವಿಶೇಷವೆಂದರೆ ಜಿಲ್ಲೆಯಲ್ಲಿ ಮಹಿಳಾ ಮತದಾರರ ಸಂಖ್ಯೆಯೇ ಹೆಚ್ಚಿದೆ! 3,48,897 ಮಂದಿ ಪುರುಷ ಮತದಾರರಿದ್ದರೆ, 3,51,171 ಮಂದಿ ಮಹಿಳಾ ಮತದಾರರಿದ್ದಾರೆ. ಪುರುಷರಿಗಿಂತ 2,274 ಮಂದಿ ಮಹಿಳಾ ಮತದಾರರು ಹೆಚ್ಚಿದ್ದಾರೆ!

ಎರಡೂ ಹಂತಗಳ ಚುನಾವಣೆಯ ಮತಗಳ ಎಣಿಕೆ ಕಾರ್ಯವು ಆಯಾ ತಾಲೂಕು ಕೇಂದ್ರಗಳಲ್ಲಿ ಡಿ. 30ರಂದು ಬೆಳಿಗ್ಗೆ 8 ಗಂಟೆಗೆ ಆರಂಭವಾಗಲಿದೆ. ಡಿಸೆಂಬರ್ 31ರಂದು ಚುನಾವಣಾ ಪ್ರಕ್ರಿಯೆ ಮುಕ್ತಾಯವಾಗಲಿದೆ. ಚುನಾವಣಾ ನೀತಿ ಸಂಹಿತೆಯು ಚುನಾವಣೆ ನಡೆಯುವ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನ.30 ರಿಂದ ಡಿಸೆಂಬರ್ 31ರ ಸಂಜೆ 5 ಗಂಟೆಯವರೆಗೆ ಜಾರಿಯಲ್ಲಿರುತ್ತದೆ.

ಪಟ್ಟಣ ಪ್ರದೇಶಗಳಿಗೆ ನೀತಿ ಸಂಹಿತೆ ಅನ್ವಯ ಇಲ್ಲ: ನೀತಿ ಸಂಹಿತೆಯು ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ ಪ್ರದೇಶಗಳಿಗೆ ಅನ್ವಯವಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next