ಹನೂರು: ತಾಲೂಕಿನಾದ್ಯಂತ ಯೂರಿಯಾ ಅಭಾವ ಸೃಷ್ಠಿಯಾಗಿದ್ದು ಕೃಷಿ ಚಟುವಟಿಕೆಗಳಿಗೆ ರೈತರು ಸಂಕಷ್ಟ ಎದುರಿಸುವಂತಾಗಿದ್ದು ಯೂರಿಯಾ ರಸಗೊಬ್ಬರಕ್ಕಾಗಿ ಅಕ್ಕಪಕ್ಕದ ಪಟ್ಟಣಗಳಿಗೆ ಎಡತಾಕುವಂತಾಗಿದೆ..
ಕಳೆದ 3-4 ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡು ಬಿತ್ತನೆ ಕಾರ್ಯ ಮುಗಿಸಿ ತಾವು ಹಾಕಿರುವ ಬೆಳೆಗಳಿಗೆ ಯೂರಿಯಾ ಹಾಕಲು ಸಿದ್ಧರಾಗಿದ್ದಾರೆ. ಸಬ್ಸಿಡಿ ದರದಲ್ಲಿ ಸಹಕಾರ ಸಂಘಗಳ ಮೂಲಕ ಯೂರಿಯಾ ಖರೀದಿಸುತ್ತಿದ್ದ ರೈತರು ಸಹಕಾರ ಸಂಘಗಳಿಗೆ ಎಡತಾಕುವಂತಾಗಿದೆ.. ಆದರೆ ಸಹಕಾರ ಸಂಘಗಳಲ್ಲಿ ರೈತರಿಗೆ ಅವಶ್ಯಕತೆಯಿರುವಷ್ಟು ರಸಗೊಬ್ಬರ ದೊರಕುತ್ತಿಲ್ಲ. ಇದರಿಂದ ಹೆಚ್ಚಿನ ದರ ನೀಡಿ ಖಾಸಗಿ ಅಂಗಡಿಗಳಲ್ಲಿ ಖರೀದಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆಯೇ?: ಮಳೆ ಆರಂಭವಾಗುವ ಮುನ್ನ ಎಲ್ಲಾ ಖಾಸಗಿ ಅಂಗಡಿಗಳಲ್ಲೂ ಯುರಿಯಾ ಲಭಿಸುತಿತ್ತು. ಆದರೆ ಇದೀಗ ಮಳೆ ಪ್ರಾರಂಭವಾಗಿ ಯುರಿಯಾಕ್ಕೆ ಹೆಚ್ಚಿನ ಬೇಡಿಕೆ ಬಂದ ಹಿನ್ನೆಲೆ ಕೆಲ ಖಾಸಗಿ ವ್ಯಾಪಾರಿಗಳು ಯುರಿಯಾವನ್ನು ಅಕ್ರಮವಾಗಿ ದಾಸ್ತಾನು ಮಾಡಿ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಒಂದು ಚಈಲ ಯುರಿಯಾದ ಬೆಲೆ 270ರೂ ಇದ್ದು ಕಾಳಸಂತೆಯಲ್ಲಿ 300ರಿಂದ 320ರೂವರೆಗೆ ಮಾರಾಟವಾಗುತ್ತಿದೆ. ಆದರೆ ಹೆಚ್ಚಿನ ಬೆಲೆ ನೀಡಿದರೂ ಎಲ್ಲಾ ರೈತರಿಗೂ ಲಭಿಸುತ್ತಿಲ್ಲ. ಕೆಲ ಖಾಸಗಿ ವ್ಯಾಪಾರಿಗಳು ತಮಗೆ ಬೇಕಾದಂತಹ ಕೆಲವೇ ಕೆಲವು ರೈತರಿಗೆ ವಿತರಿಸುತ್ತಿದ್ದಾರೆ.
ರಸಗೊಬ್ಬರಕ್ಕಾಗಿ ಕ್ಯೂ: ಹನೂರು ತಾಲೂಕಿನಲ್ಲಿ ಯುರಿಯಾ ಲಭಿಸದ ಹಿನ್ನೆಲೆ ಕೆಲ ರೈತರು ಕೊಳ್ಳೇಗಾಲ ತಾಲೂಕು ಕೇಂದ್ರ ಮತ್ತು ಕಾಮಗೆರೆಯ ತೋಟಗಾರಿಕೆ ಉತ್ಪಾದಕ ರೈತರ ಕಂಪೆನಿಗಳ ಮುಂದೆ ಸರದಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಈ ಹಿಂದೆ ಅನಾಪುರ, ಕಣ್ಣೂರು, ಗುಂಡಾಪುರ, ಚೆನ್ನಾಲಿಂಗನಹಳ್ಳಿ ಸೇರಿದಂತೆ ಬಹುತೇಕ ಗ್ರಾಮಗಳ ರೈತರು ಹನೂರು ಪಟ್ಟಣದಲ್ಲಿ ರಸಗೊಬ್ಬರ ಖರೀದಿಸುತ್ತಿದ್ದರು. ಆದರೆ ಇದೀಗ ಹನೂರು ಪಟ್ಟಣದಲ್ಲಿ ಲಭ್ಯವಿಲ್ಲದ ಹಿನ್ನೆಲೆ ಕಾಮಗೆರೆ ಗ್ರಾಮಕ್ಕೆ ತೆರಳುವಂತಾಗಿದೆ.
ಸಂಪರ್ಕಕ್ಕೆ ಸಿಗದ ಕೃಷಿ ಇಲಾಖಾ ಅಧಿಕಾರಿಗಳು: ತಾಲೂಕಿನಲ್ಲಿ ಉದ್ಭವಿಸಿರುವ ಯುರಿಯಾ ರಸಗೊಬ್ಬರ ಸಮಸ್ಯೆಯ ಬಗ್ಗೆ , ತಾಲೂಕಿನಲ್ಲಿ ಬೇಡಿಕೆಯಿರುವ ಯುರಿಯಾ ಪ್ರಮಾಣದ ಬಗ್ಗೆ ಮತ್ತು ರಸಗೊಬ್ಬರ ಪೂರೈಕೆಯ ಬಗ್ಗೆ ಅಗತ್ಯ ಮಾಹಿತಿ ಪಡೆಯಲು ಪತ್ರಿಕೆಯು ತಾಲೂಕು ಕೃಷಿ ಅಧಿಕಾರಿ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ದೂರವಾಣಿ ಮುಖಾಂತರ ಸಂಪರ್ಕಿಸಲು ಪಯತ್ನಿಸಿತು. 4 ಗಂಟೆಯವರೆಗೂ ದೂರವಾಣಿ ಕರೆಯನ್ನು ಸ್ವೀಕರಿಸದ ಅಧಿಕಾರಿಗಳು ಬಳಿಕ ಮೀಟಿಂಗ್‍ನಲ್ಲಿದ್ದೇನೆ, ಆಮೇಲೆ ಕರೆ ಮಾಡುತ್ತೇನೆ ಎಂದು ಸಂದೇಶಗಳನ್ನು ಕಳುಹಿಸಿ ಸುಮ್ಮನಾದರು.