ಚಾಮರಾಜನಗರ: ನಗರದ ಸರ್ಕಾರಿ ವೈದ್ಯಕೀಯ ಕಾಲೇಜಿನ (ಸಿಮ್‌ಸ್) 7 ಮಂದಿ ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು ತಗುಲಿರುವುದು ಸೋಮವಾರ ನಡೆದ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಅಲ್ಲದೇ ವೈದ್ಯಕೀಯ ಕಾಲೇಜಿನ ಡೀನ್ ಡಾ. ಜಿ.ಎಂ. ಸಂಜೀವ್ ಅವರಿಗೂ ಸೋಂಕು ತಗುಲಿದ್ದು ಹೋಂ ಐಸೋಲೇಷನ್‌ನಲ್ಲಿದ್ದಾರೆ.
ವೈದ್ಯಕೀಯ ಕಾಲೇಜಿನ 6 ಮಂದಿ ವಿದ್ಯಾರ್ಥಿಗಳು ಹಾಗೂ ಓರ್ವ ತರಬೇತಿ ನಿರತ ವೈದ್ಯರಿಗೆ ಸೋಮವಾರ ಸೋಂಕು ತಗುಲಿರುವುದು ದೃಢಪಟ್ಟಿದೆ. ಕಳೆದ 10 ದಿನಗಳಲ್ಲಿ ವೈದ್ಯಕೀಯ ಕಾಲೇಜಿನ 9 ಮಂದಿಗೆ ಸೋಂಕು ದೃಢಪಟ್ಟಿದೆ. ವಿದ್ಯಾರ್ಥಿಗಳು ವಿದ್ಯಾರ್ಥಿ ನಿಲಯದಲ್ಲಿ ವಾಸಿಸುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿನ ಎಲ್ಲ 650 ವಿದ್ಯಾರ್ಥಿಗಳ ಗಂಟಲು ದ್ರವ ಪರೀಕ್ಷೆ ನಡೆಸಲು ಕ್ರಮ ಕೈಗೊಳ್ಳಲಾಗಿದೆ. ಹಾಸ್ಟೆಲ್ ಅನ್ನು ಕಂಟೈನ್‌ಮೆಂಟ್ ವಲಯವನ್ನಾಗಿ ಘೋಷಿಸಲಾಗಿದೆ. ಸೋಂಕು ಹರಡದಂತೆ ಮುಂಜಾಗ್ರತೆ ವಹಿಸಲಾಗಿದೆ ಎಂದು ಡಿಎಚ್‌ಓ ಡಾ. ವಿಶ್ವೇಶ್ವರಯ್ಯ ತಿಳಿಸಿದ್ದಾರೆ.
ಸೋಮವಾರ ಜಿಲ್ಲೆಯಲ್ಲಿ ಒಟ್ಟು 8 ಪ್ರಕರಣಗಳು ವರದಿಯಾಗಿವೆ. ಈ ಪೈಕಿ 7 ಪ್ರಕರಣಗಳು ಮೆಡಿಕಲ್ ಕಾಲೇಜಿನವು. ಸೋಮವಾರ ನಿಗದಿತ ಪ್ರಮಾಣಕ್ಕಿಂತ ಕಡಿಮೆ ಪರೀಕ್ಷೆಗಳು ನಡೆದಿವೆ. ದಿನಕ್ಕೆ ಸರಾಸರಿ ಒಂದು ಸಾವಿರಕ್ಕೂ ಅಧಿಕ ಮಾದರಿಗಳನ್ನು ಪರೀಕ್ಷಿಸಲಾಗುತ್ತಿತ್ತು. ಸೋಮವಾರ 763 ಮಾದರಿಗಳನ್ನು ಪರೀಕ್ಷಿಸಲಾಗಿದೆ.
ಜಿಲ್ಲೆಯಲ್ಲಿ ಪ್ರಸ್ತುತ 28 ಸಕ್ರಿಯ ಪ್ರಕರಣಗಳಿವೆ.
ಇದನ್ನೂ ಓದಿ : ಕುಣಿಗಲ್: ನೀರಿನಲ್ಲಿ ನಾಲ್ವರು ಕೊಚ್ಚಿಹೋದ ಪ್ರಕರಣ; 2 ಮೃತದೇಹ ಪತ್ತೆ, ಮುಂದುವರಿದ ಶೋಧಕಾರ್ಯ