ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹಳ್ಳದಮಾದಹಳ್ಳಿ ಗ್ರಾಮದ ಪ್ರಮೋದ್ ಆರಾಧ್ಯ ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) ಪರೀಕ್ಷೆಯಲ್ಲಿ 671 ನೇ ರ‍್ಯಾಂಕ್ ಗಳಿಸಿದ್ದಾರೆ.
ರೈತರಾದ ರುದ್ರಾರಾಧ್ಯ ಹಾಗೂ ಮಮತಾಮಣಿ ದಂಪತಿಯ ಪುತ್ರ ಪ್ರಮೋದ್, 2021ರ ಸೆಪ್ಟೆಂಬರ್‌ನಲ್ಲಿ ಮೂರನೇ ಪ್ರಯತ್ನದಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ 601ನೇ ರ‍್ಯಾಂಕ್ ಪಡೆದು ತೇರ್ಗಡೆಯಾಗಿದ್ದರು. ಈ ಬಾರಿ ಮತ್ತೊಮ್ಮೆ ಪರೀಕ್ಷೆ ಎದುರಿಸಿ 671ನೇ ರ‍್ಯಾಂಕ್ ಪಡೆದು ಉತ್ತೀರ್ಣರಾಗಿದ್ದಾರೆ.
ಪ್ರಮೋದ್ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಓದಿದ್ದು ಹೆಗ್ಗಡದೇವನಕೋಟೆಯ ಸೇಂಟ್ ಮೇರಿಸ್ ಶಾಲೆಯಲ್ಲಿ. ಮೈಸೂರಿನ ಮರಿಮಲ್ಲಪ್ಪ ಕಾಲೇಜಿನಲ್ಲಿ ಪಿಯುಸಿ ಹಾಗೂ ಮಂಡ್ಯದ ಪಿಇಎಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ವ್ಯಾಸಂಗ ಮಾಡಿದ್ದಾರೆ.
2017ರಲ್ಲಿ ವೃತ್ತಿ ಶಿಕ್ಷಣ ಪೂರೈಸಿದ ಪ್ರಮೋದ್, 2021ರಲ್ಲಿ ಯುಪಿಎಸ್‌ಸಿ ಪರೀಕ್ಷೆಯ ತಮ್ಮ ಮೂರನೇ ಪ್ರಯತ್ನದಲ್ಲಿ ಯಶಸ್ಸು ಗಳಿಸಿದ್ದರು. ಆದಾಗ್ಯೂ ಮತ್ತೆ ದೆಹಲಿಯ ಕೋಚಿಂಗ್ ಸೆಂಟರ್‌ನಲ್ಲಿ ತರಬೇತಿ ಪಡೆದು, ಮತ್ತೊಮ್ಮೆ ಪರೀಕ್ಷೆ ಎದುರಿಸಿದ್ದರು.
ಈ ಬಾರಿಯ ಯುಪಿಎಸ್ ಸಿ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 671ನೇ ರ‍್ಯಾಂಕ್ ಪಡೆಯುವ ಮೂಲಕ ಚಾಮರಾಜನಗರ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.