ಚಾಮರಾಜನಗರ: ಶೂನ್ಯ ಕೋವಿಡ್ – 19 ಪಾಸಿಟಿವ್ ಆಗಿರುವ ಚಾಮರಾಜನಗರ ಜಿಲ್ಲೆ, ಈಗ ಶೂನ್ಯ ಕ್ವಾರಂಟೈನಿಗರನ್ನು ಹೊಂದುವ ಮೂಲಕ ಕೋವಿಡ್ – 19 ವಿರುದ್ಧ ಮುಂಜಾಗ್ರತೆ ವಹಿಸುವಲ್ಲಿ ದೊಡ್ಡ ಯಶ ಸಾಧಿಸಿದೆ.
ಕೇರಳ ಮತ್ತು ತಮಿಳುನಾಡಿನ ಗಡಿ ಹಂಚಿಕೊಂಡಿರುವ ಚಾಮರಾಜನಗರ ಜಿಲ್ಲೆ ಆರಂಭದಲ್ಲಿ ಆತಂಕ ಎದುರಿಸಿತ್ತು. ಕೇರಳದಲ್ಲಿ ಮೊದಲ ಕೋವಿಡ್ – 19 ಪಾಸಿಟಿವ್ ವರದಿಯಾದ ತಕ್ಷಣವೇ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿತು. ಹೊರ ರಾಜ್ಯಗಳಿಂದ ಬಂದ ಜನರ ಸ್ಕ್ರೀನಿಂಗ್ ನಡೆಸಲಾಯಿತು. ವಿದೇಶಗಳಿಂದ ಬಂದವರನ್ನು ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ, ಪ್ರತ್ಯೇಕ ಕ್ವಾರಂಟೈನ್ ಸೆಂಟರ್ ಸ್ಥಾಪಿಸಿ ಇರಿಸಲಾಯಿತು.
ಇದೆಲ್ಲದರ ಜೊತೆ ಜಿಲ್ಲಾಡಳಿತ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆಗಳ ಸಮನ್ವಯದ ಕ್ರಮಗಳಿಂದಾಗಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿತ ಪ್ರಕರಣಗಳು ಇದುವರೆಗೂ ಕಂಡು ಬಂದಿಲ್ಲ. ಆದರೆ, ವಿದೇಶದಿಂದ ಬಂದವರು, ನಂಜನಗೂಡಿನ ಜುಬಿಲಿಯಂಟ್ ಕಾರ್ಖಾನೆ ನೌಕರರು ಮತ್ತು ತಬ್ಲಿ ಜಮಾತ್ ಧರ್ಮಸಭೆಯಲ್ಲಿ ಭಾಗವಹಿಸಿದವರು ಸೇರಿ ಒಟ್ಟು 212 ಮಂದಿ ಕ್ವಾರಂಟೈನ್‌ನಲ್ಲಿದ್ದರು. ಇವರಲ್ಲಿ 14 ದಿನಗಳ ಕ್ವಾರಂಟೈನ್ ಮುಗಿಸಿದವರನ್ನು ಆಗಾಗ ಬಿಡುಗಡೆ ಮಾಡಲಾಗಿತ್ತು. ಮಂಗಳವಾರ 5 ಮಂದಿ ಕ್ವಾರಂಟೈನ್‌ನಲ್ಲಿದ್ದರು. ಈಗ ಎಲ್ಲರನ್ನೂ ಬಿಡುಗಡೆ ಮಾಡಿರುವುದರಿಂದ ಜಿಲ್ಲೆಯಲ್ಲಿ ಕ್ವಾರಂಟೈನ್‌ನಲ್ಲಿ ಒಬ್ಬರೂ ಇಲ್ಲ!
ಜಿಲ್ಲೆಯಿಂದ ಪ್ರಯೋಗ ಶಾಲೆಗೆ ಕಳುಹಿಸಲಾಗಿದ್ದ 5 ಮಾದರಿ ಪೈಕಿ ನಾಲ್ವರ ವರದಿ ನೆಗೆಟಿವ್ ಬಂದಿದೆ. ಸರ್ಕಾರದ ನಿರ್ದೇಶನದಂತೆ, ಕೋವಿಡ್ – 19 ಸೋಂಕಿತರ ಸಂಪರ್ಕ ಇಲ್ಲದಿದ್ದರೂ, ತೀವ್ರತರದ ಉಸಿರಾಟದ ತೊಂದರೆಯಿದ್ದವರನ್ನು (ಎಸ್‌ಎಆರ್‌ಐ) ದಾಖಲಿಸಿಕೊಂಡು ಚಿಕಿತ್ಸೆ ನೀಡಬೇಕೆಂಬ ಹಿನ್ನೆಲೆಯಲ್ಲಿ ಓರ್ವ ವ್ಯಕ್ತಿಯನ್ನು ಐಸೊಲೇಶನ್ ವಾರ್ಡ್‌ನಲ್ಲಿ ದಾಖಲಿಸಿಕೊಳ್ಳಲಾಗಿದೆ. ಅವರ ಗಂಟಲಿನ ದ್ರವ, ರಕ್ತದ ಮಾದರಿಯನ್ನು ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿದೆ. ಫಲಿತಾಂಶ ನಿರೀಕ್ಷಿಸಲಾಗುತ್ತಿದೆ.
ಕೆ.ಎಸ್. ಬನಶಂಕರ ಆರಾಧ್ಯ