Advertisement
ಇತ್ತೀಚಿಗೆ ಬಂಡೀಪುರ ಅರಣ್ಯ ಪ್ರದೇಶದಿಂದ ಹಾದು ಹೋಗುವ ಕೇರಳ ಕರ್ನಾಟಕ ಗಡಿಯ ಹೆದ್ದಾರಿಯಲ್ಲಿ ನಡೆದದ್ದು ಎನ್ನಲಾದ ವಿಡಿಯೋ ಒಂದರಲ್ಲಿ, ಕಾಡಾನೆಯೊಂದು ಇಬ್ಬರು ಪ್ರಯಾಣಿಕ ರನ್ನು ಅಟ್ಟಿಸಿಕೊಂಡು ಬರುವಾಗ, ಓರ್ವ ಕೆಳಗೆ ಬಿದ್ದರೂ, ಆನೆಯ ಕಾಲಿನ ತುಳಿತದಿಂದ ಸ್ವಲ್ಪದರಲ್ಲೇ ಬಚಾವ್ ಆಗುವ ದೃಶ್ಯ ವೈರಲ್ ಆಗಿತ್ತು.
Related Articles
Advertisement
ಅರಣ್ಯ ಪ್ರಾಣಿಗಳು ಅವುಗಳ ಪಾಡಿಗೆ ಅವು ಇರುತ್ತವೆ. ಅವುಗಳನ್ನು ನಾವು ಕೆರಳಿಸುವುದು, ಚೇಷ್ಟೆ ಮಾಡುವುದ ರಿಂದ ಕೆರಳುತ್ತವೆ. ಅರಣ್ಯ ಪ್ರಾಣಿಗಳಿಗೆ ಚೇಷ್ಟೆ ಮಾಡುವುದು ಅಪರಾಧ. ವನ್ಯಜೀವಿಗಳಿಗೆ ಆಹಾರವನ್ನೂ ನೀಡಬಾರದು. ಸುರಕ್ಷಿತ ಅಂತರದಿಂದ ನೋಡಬಹುದು. ನಾವು ಶಿಸ್ತಿನಿಂದ ಇರಬೇಕು ಎಂದು ದೀಪ್ ಸಲಹೆ ನೀಡುತ್ತಾರೆ.
ಕಬ್ಬಿಗಾಗಿ ರಸ್ತೆ ಬದಿಯಲ್ಲೇ ನಿಲ್ಲುವ ಆನೆಗಳು..:
ಅರಣ್ಯದೊಳಗಿನ ಹೆದ್ದಾರಿಗಳಲ್ಲಿ ಜನರ ಕುಚೇಷ್ಟೆಗಳಿಂದ ಆನೆಗಳು ಅಟ್ಟಿಸಿಕೊಂಡು ಬರುವ ಪ್ರಕರಣಗಳು ಒಂದೆಡೆಯಾದರೆ, ಹೆದ್ದಾರಿಗಳಲ್ಲಿ ನಿಂತಿರುವ ಆನೆಗಳಿಗೆ ಕಬ್ಬು ತಿನ್ನುವುದನ್ನು ರೂಢಿ ಮಾಡಿರುವುದರಿಂದ ಆನೆಗಳು ರಸ್ತೆ ಬದಿಯಲ್ಲೇ ನಿಂತಿರುವ ದೃಶ್ಯ ಚಾಮರಾಜನಗರದಿಂದ ಸತ್ಯಮಂಗಲಕ್ಕೆ ಹೋಗುವ ಹಾಸನೂರು ರಸ್ತೆಯಲ್ಲಿ ಸರ್ವೆ ಸಾಮಾನ್ಯವಾಗಿದೆ. ತಮಿಳುನಾಡಿಗೆ ತರಕಾರಿ ಕೊಂಡು ಹೋಗುವ ವಾಹನಗಳು ರಸ್ತೆ ಬದಿ ನಿಂತಿರುವ ಜಿಂಕೆ,ಆನೆಗಳಿಗೆ ತರಕಾರಿ ಎಸೆಯುವುದು, ಕಬ್ಬಿನ ಲಾರಿಗಳವರು ಒಂದಷ್ಟು ಕಬ್ಬಿನ ಜಲ್ಲೆಯನ್ನು ಎಸೆಯುವುದರಿಂದ ಕೆಲವು ಆನೆಗಳು ಅರಣ್ಯದ ಆಹಾರಕ್ಕಿಂತ ಹೊರಗಿನ ಆಹಾರಕ್ಕೆ ಒಗ್ಗಿ ಹೋಗಿವೆ. ಹಾಸನೂರು ಚೆಕ್ ಪೋಸ್ಟ್ ಸಮೀಪ ಕಬ್ಬಿನ ಲಾರಿಗಳನ್ನು ನಿಲ್ಲಿಸಿದಾಗ ಸೊಂಡಿಲು ಹಾಕಿ ಕಬ್ಬು ಎತ್ತಿಕೊಳ್ಳುತ್ತವೆ.
ಕೆಲವು ಆನೆಗಳಂತೂ ರಸ್ತೆ ಮಧ್ಯದಲ್ಲೇ ನಿಂತು ಲಾರಿಗಳನ್ನು ತಪಾಸಣೆ ಮಾಡುತ್ತವೆ! ಹೀಗೆ ಆನೆಗಳು ಕಬ್ಬಿನ ಲಾರಿಗಳಿಗೆ ಸೊಂಡಿಲು ಹಾಕುವುದನ್ನು ಮೊಬೈಲ್‌ನಲ್ಲಿ ಸೆರೆ ಹಿಡಿಯುವ ಲಾರಿ ಚಾಲಕರು ಜಾಲತಾಣಗಳಲ್ಲಿ ಶೇರ್ ಮಾಡುವ ಮೂಲಕ ವೈರಲ್ ಮಾಡುವ ಮೂಲಕ ಮಜಾ ತೆಗೆದುಕೊಳ್ಳುತ್ತಿದ್ದಾರೆ. ಆದರೆ ವನ್ಯಜೀವಿಗಳನ್ನು ಹೀಗೆ ಕಾಡಿನ ಆಹಾರದಿಂದ ನಾಡಿನ ಆಹಾರಕ್ಕೆ ಒಗ್ಗಿಸುವುದು ಅಪರಾಧ ಮತ್ತು ಆತಂಕಕಾರಿ ಎಂದು ವನ್ಯಜೀವಿ ತಜ್ಞರು ಹೇಳುತ್ತಾರೆ. ಕಾಡು ಪ್ರಾಣಿಗಳಿಗೆ ಪ್ರಯಾಣಿಕರು ಆಹಾರ ನೀಡುವುದು ವನ್ಯಜೀವಿ ಕಾಯಿದೆಯಡಿ ಅಪರಾಧ. ವಿರಳ ಸಂಖ್ಯೆಯಲ್ಲಿ ಇಂಥವರಿಗೆ ದಂಡ ವಿಧಿಸಲಾಗಿದೆ. ಆದರೆ ಅರಣ್ಯ ಇಲಾಖೆ ಇಂಥವರ ವಿರುದ್ಧ ವ್ಯಾಪಕ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂಬುದು ವನ್ಯಜೀವಿ ತಜ್ಞರ ಒತ್ತಾಯ.
ಅರಣ್ಯದೊಳಗೆ ಹಾದು ಹೋಗುವ ಮುನ್ನವೇ ಅನೇಕ ಎಚ್ಚರಿಕೆ ಫಲಕಗಳನ್ನು ಹಾಕಲಾಗಿದೆ. ನೋ ಪಾರ್ಕಿಂಗ್, ನೋ ಸ್ಟಾಪ್, ಪಿಕ್‌ನಿಕ್ ಮಾಡಬಾರದು, ಫೋಟೋ ತೆಗೆಯಬಾರದು. ಎಂಬ ನಾಮಫಲಕಗಳನ್ನು ಹಾಕಿದ್ದೇವೆ. ಸ್ಥಳೀಯರು ಬುಡಕಟ್ಟು ಜನರು ಪ್ರಾಣಿಗಳನ್ನು ಕೆಣಕಲು ಹೋಗುವುದಿಲ್ಲ. ದೊಡ್ಡ ನಗರ ಪ್ರದೇಶಗಳಿಂದ ಮೋಜಿಗಾಗಿ ಬರುವ ವಿದ್ಯಾವಂತರೇ ಹೀಗೆ ಮಾಡುವುದು. ಇಂಥವರಿಗೆ ಕಾಮನ್‌ಸೆನ್ಸ್ ಇದ್ದರೆ ಇಂಥ ಪ್ರಕರಣ ನಡೆಯುವುದಿಲ್ಲ.-ದೀಪ್ ಜೆ ಕಾಂಟ್ರಾಕ್ಟರ್, ಉಪ ಅರಣ್ಯ ಸಂರಕ್ಷಣಾಧಿಕಾರಿ, ಬಿಆರ್‌ಟಿ
ಹೆದ್ದಾರಿ ಬದಿ ನಿಲ್ಲುವುದನ್ನು ಅಭ್ಯಾಸ ಮಾಡಿಕೊಂಡಿರುವ ಆನೆಗಳು ಇತರ ಪ್ರಾಣಿಗಳ ಬಗ್ಗೆ ಅರಣ್ಯ ಇಲಾಖೆ ಎಚ್ಚರಿಕೆ ವಹಿಸಬೇಕು. ಹೆದ್ದಾರಿಯಿಂದ ಈ ಪ್ರಾಣಿಗಳು ದೂರ ಇರುವಂತೆ ನೋಡಿಕೊಳ್ಳಬೇಕು. ಸಾರ್ವಜನಿಕರು ಪ್ರಾಣಿಗಳಿಗೆ ಆಹಾರ ನೀಡದಂತೆ ಕಠಿಣ ಕ್ರಮ ಕೈಗೊಳ್ಳಬೇಕು. ಇಂಥ ಪ್ರಕರಣ ಕಂಡುಬಂದಾಗ ದಂಡ ವಿಧಿಸಬೇಕು. ಜನರು ಆಹಾರ ಕೊಡದಿದ್ದರೆ, ಪ್ರಾಣಿಗಳು ರಸ್ತೆ ಬದಿ ಬಂದು ಆಹಾರಕ್ಕೆ ಕಾಯುವುದಿಲ್ಲ.– ಸಂಜಯ ಗುಬ್ಬಿ, ನೇಚರ್ ಕನ್ಸರ್‌ವೇಶನ್ ಫೌಂಡೇಷನ್
– ಕೆ.ಎಸ್.ಬನಶಂಕರ ಆರಾಧ್ಯ