ಚಾಮರಾಜನಗರ: ಕರ್ನಾಟಕ ಸರ್ಕಾರ ನೀಡುವ ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಜಿಲ್ಲೆಯ ಕೊಳ್ಳೇಗಾಲದವರಾದ ಭಾರತೀಯ ವಿಜ್ಞಾನ ಸಂಸ್ಥೆಯ ಬಾಹ್ಯಾಕಾಶ ತಂತ್ರಜ್ಞಾನ ಪ್ರಾಧ್ಯಾಪಕ ಡಾ. ಗೋಪಾಲನ್ ಜಗದೀಶ್ ಅವರು ಪಾತ್ರರಾಗಿದ್ದಾರೆ.
ಡಾ. ಗೋಪಾಲನ್ ಜಗದೀಶ್ ಅವರು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಬಾಹ್ಯಾಕಾಶ ತಂತ್ರಜ್ಞಾನ ವಿಭಾಗದ ಹಿರಿಯ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರು ಶಬ್ದಾತೀತ ವಾಯುಬಲ ವಿಜ್ಞಾನ ಮತ್ತು ಘಾತಕಕಾರಿ ತರಂಗಗಳ ಕುರಿತು ವಿಶೇಷ ಸಂಶೋಧನೆ ಮಾಡಿದ್ದಾರೆ.
ಕೊಳ್ಳೇಗಾಲ ಪಟ್ಟಣದ ಅರಣ್ಯ ಅಧಿಕಾರಿ ದಿ. ಗೋಪಾಲನ್ ಅವರ ಪುತ್ರರಾದ ಜಗದೀಶ್ ಅವರು, ಕೊಳ್ಳೇಗಾಲದ ಆರ್.ಸಿ. ಮಿಷನ್ ಕಾನ್ವೆಂಟ್ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ನಡೆಸಿದರು. ಬಳಿಕ ಮೈಸೂರಿನ ರಾಮಕೃಷ್ಣ ವಿದ್ಯಾಶಾಲೆಯಲ್ಲಿ ಪ್ರೌಢಶಾಲೆ, ಬೆಂಗಳೂರಿನ ಬಸವನಗುಡಿ ನ್ಯಾಷನಲ್‌ಕಾಲೇಜಿನಲ್ಲಿ ಪಿಯುಸಿ, ಬೆಂಗಳೂರಿನ ತಾಂತ್ರಿಕ ವಿದ್ಯಾಲಯದಲ್ಲಿ ಬಿ.ಇ, ರಾಂಚಿಯ ಬಿರ್ಲಾ ತಾಂತ್ರಿಕ ಸಂಸ್ಥೆಯಲ್ಲಿ ಎಂ.ಇ. ಮತ್ತು ಬೆಂಗಳೂರು ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಪಿಎಚ್‌ಡಿ ಪದವಿ ಪಡೆದರು.
ಬಳಿಕ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಬಾಹ್ಯಾಕಾಶ ವಿಜ್ಞಾನ ಪ್ರಾಧ್ಯಾಪಕರಾಗಿ ಇದುವರೆಗೂ ಸೇವೆ ಸಲ್ಲಿಸುತ್ತಿದ್ದಾರೆ. ಜಗದೀಶ್ ಅವರು ಘಾತಕಕಾರಿ ತರಂಗಗಳ ಕುರಿತಂತೆ 16 ಪೇಟೆಂಟ್‌ಗಳನ್ನು ಹೊಂದಿದ್ದಾರೆ.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಕುರಿತು, ದೆಹಲಿಯಲ್ಲಿದ್ದ ಅವರು ದೂರವಾಣಿ ಮೂಲಕ ಉದಯವಾಣಿಯೊಂದಿಗೆ ಮಾತನಾಡಿ, ನಾನು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದವನು ಎಂಬುದು ಹೆಮ್ಮೆಯ ಸಂಗತಿ. ನಾನು ಅಪ್ಪಟ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿ, ಕುವೆಂಪು ಅವರು ನನಗೆ ದೇವರಿದ್ದಂತೆ, ಡಿವಿಜಿಯವರು ನನ್ನ ಮೆಚ್ಚಿನ ಲೇಖಕರಲ್ಲೊಬ್ಬರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಬಂದಿರುವುದು ಸಂತೋಷದ ವಿಷಯ ಎಂದು ಹರ್ಷ ಹಂಚಿಕೊಂಡರು.
ನನ್ನ ಎಸ್‌ಎಸ್‌ಎಲ್ ಸಿ. ಪಿಯುಸಿ ಶಿಕ್ಷಣವನ್ನು ಸರ್ಕಾರ ನೀಡಿದ ವಿದ್ಯಾರ್ಥಿ ವೇತನದಿಂದಲೇ ನಡೆಸಲು ಸಾಧ್ಯವಾಯಿತು. ಇದಕ್ಕಾಗಿ ಸರ್ಕಾರಕ್ಕೆ ನಾನು ಆಭಾರಿಯಾಗಿದ್ದೇನೆ. ಈಗ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿರುವುದು ನಮ್ಮ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗೆ ಮನ್ನಣೆ ನೀಡಿದಂತಾಗಿದೆ. ಇದಕ್ಕಾಗಿ ನಾನು ರಾಜ್ಯ ಸರ್ಕಾರಕ್ಕೆ, ನನ್ನ ವಿದ್ಯಾರ್ಥಿಗಳಿಗೆ, ನನ್ನ ಅಧ್ಯಾಪಕರಿಗೆ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು.