Advertisement

ಚಾಮರಾಜನಗರ: ಮಹಾಶಿವರಾತ್ರಿ ಜಾತ್ರೋತ್ಸವಕ್ಕೆ ಪೂರ್ವ ಸಿದ್ಧತೆ

11:48 AM Mar 01, 2024 | Team Udayavani |

ಉದಯವಾಣಿ ಸಮಾಚಾರ
ಚಾಮರಾಜನಗರ: ಪ್ರಸಿದ್ಧ ಯಾತ್ರಾ ಕ್ಷೇತ್ರ ಹನೂರುತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಮಾ. 7ರಿಂದ ಪ್ರಾರಂಭವಾಗಲಿರುವ ಮಹಾಶಿವರಾತ್ರಿ ಹಾಗೂ ಏ.6 ರಿಂದ ಆರಂಭವಾಗಲಿರುವ ಯುಗಾದಿ ಜಾತ್ರಾ ಮಹೋತ್ಸವಕ್ಕೆ ಕೈಗೊಳ್ಳಲಾಗುತ್ತಿರುವ ಸಿದ್ಧತೆಗಳ ಕುರಿತು ಜಿಲ್ಲಾಧಿಕಾರಿ ಶಿಲ್ಪಾನಾಗ್‌ ಹಾಗೂ ಹನೂರು ಶಾಸಕ ಎಂ.ಆರ್‌. ಮಂಜುನಾಥ್‌ ಪರಿಶೀಲನಾ ಸಭೆ ನಡೆಸಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ, ಗುರುವಾರ ಜಾತ್ರಾ ಮಹೋತ್ಸವ ಸಂಬಂಧ ಪೂರ್ವ ಸಿದ್ಧತಾ ಸಭೆ ನಡೆಸಿದ ಜಿಲ್ಲಾಧಿಕಾರಿ ಹಾಗೂ ಶಾಸಕರು ಮಹಾಶಿವರಾತ್ರಿ ಜಾತ್ರೆಗೆ ಕ್ಷೇತ್ರಕ್ಕೆ ಜಿಲ್ಲೆಯ ವಿವಿಧ ಭಾಗಗಳಿಂದ ಹೆಚ್ಚು ಸಂಖ್ಯೆಯಲ್ಲಿ ಭಕ್ತಾದಿಗಳು ಬರುವ ಹಿನ್ನೆಲೆಯಲ್ಲಿ ಶುದ್ಧ ಕುಡಿಯುವ ನೀರಿನ ಪೂರೈಕೆಗೆ ಮಾಡಲಾಗಿರುವ ವ್ಯವಸ್ಥೆಗಳ ಬಗ್ಗೆ ಪರಿಶೀಲಿಸಿದರು.

ನೀರು ಬಿಟ್ಟು ಶುದ್ಧೀಕರಿಸಿ ಸರಬರಾಜು: ಮಲೆ ಮಹದೇಶ್ವರ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಇ. ರಘು ವಿವರ ನೀಡಿ ಕಾವೇರಿ ನೀರು ಸರಬರಾಜು ಯೋಜನೆಯಿಂದ ನಿರ್ಮಿಸಿರುವ 90 ಲಕ್ಷ ಲೀಟರ್‌ ಸಾಮರ್ಥ್ಯದ ಟ್ಯಾಂಕ್‌ ನಲ್ಲಿ ನೀರು ಶೇಖರಣೆ ಮಾಡಿ ನೀರು ಶುದ್ಧೀಕರಣ ಘಟಕಕ್ಕೆ ನೀರು ಬಿಟ್ಟು ಶುದ್ಧೀಕರಿಸಿ ಸರಬರಾಜು ಮಾಡಲು ಕ್ರಮ ವಹಿಸಲಾಗಿದೆ.

8 ಸ್ಥಳಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕದ ಮೂಲಕ ನೀರು ಪೂರೈಸಲಾಗುತ್ತದೆ. ಪರ ಮಾಡುವ ಸ್ಥಳದಲ್ಲಿ ಟ್ಯಾಂಕರ್‌ ಮೂಲಕ ಶುದ್ಧ ಕುಡಿಯುವ ನೀರು ಸೌಲಭ್ಯ ಕಲ್ಪಿಸಲಾಗುತ್ತಿದೆ. ಪಾದಯಾತ್ರೆಯಲ್ಲಿ ಬರುವ ಭಕ್ತಾದಿಗಳಿಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದರು.

ಪ್ಲಾಸ್ಟಿಕ್‌ ನಿಷೇಧದ ಬಗ್ಗೆ ಅರಿವು ಮೂಡಿಸಿ: ತಾಳ ಬೆಟ್ಟದಿಂದ ಮಹದೇಶ್ವರ ಬೆಟ್ಟದವರೆಗೆ ಭಕ್ತಾದಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕವಾಗಿ ಇರಬೇಕು. ಪ್ಲಾಸ್ಟಿಕ್‌ ನಿಷೇಧದ ಬಗ್ಗೆ ವ್ಯಾಪಕವಾಗಿ ಭಕಾದಿಗಳಿಗೆ ಮನವರಿಕೆ ಮಾಡಿಕೊಡಬೇಕು ಎಂದು ಜಿಲ್ಲಾಧಿಕಾರಿಗಳು ಹಾಗೂ ಶಾಸಕರು ಸೂಚನೆ ನೀಡಿದರು.

Advertisement

ನೀರಿನ ಟ್ಯಾಂಕ್‌ ವ್ಯವಸ್ಥೆ ಮಾಡಿ: ಪಾದಯಾತ್ರೆ ಹಾಗೂ ವಾಹನಗಳ ಮುಖಾಂತರ ಬರುವ ಭಕ್ತಾದಿಗಳನ್ನು ತಾಳಬೆಟ್ಟದಲ್ಲಿಯೇ ಪ್ಲಾಸ್ಟಿಕ್‌ ಬಾಟಲ್‌, ಪ್ಲಾಸ್ಟಿಕ್‌ ವಸ್ತುಗಳನ್ನು ಕೊಂಡೊಯ್ಯುವುದನ್ನು ನಿಷೇಧಿಸಲು ಮನವರಿಕೆ ಮಾಡಿಕೊಡಲಾಗುತ್ತದೆ. ಪ್ಲಾಸ್ಟಿಕ್‌ ಹಾಗೂ ತ್ಯಾಜ್ಯಗಳನ್ನು ಹಾಕಲು ಕಸದ ಬುಟ್ಟಿಗಳನ್ನು ಇಡುವ ವ್ಯವಸ್ಥೆ ಮಾಡಲಾಗಿದೆ. ಪಾದಯಾತ್ರೆಗಳಿಗೆ ಹೆಚ್ಚು ಸಂಖ್ಯೆಯಲ್ಲಿ ನೀರಿನ ಟ್ಯಾಂಕ್‌ಗಳನ್ನು ಇಡಲು ಕ್ರಮವಹಿಸಲಾಗಿದೆ ಎಂದು ರಘು ಅವರು ಸಭೆಗೆ ಮಾಹಿತಿ ನೀಡಿದರು.

ಭಕ್ತಾದಿಗಳಿಗೆ ನೆರಳಿನ ವ್ಯವಸ್ಥೆ”: ಬಿಸಿಲಿನ ತಾಪಮಾನ ಹೆಚ್ಚಾಗಿರುವುದರಿಂದ ಭಕ್ತಾದಿಗಳಿಗೆ ನೆರಳಿನ ವ್ಯವಸ್ಥೆ ವ್ಯಾಪಕವಾಗಿ ಆಗಬೇಕಿದೆ. ತುರ್ತು ಸಂದರ್ಭಗಳಲ್ಲಿ ಅವಶ್ಯಕತೆ ಇರುವ ಕಡೆ ನೆರಳಿಗೆ ಸೂಕ್ತ ಕ್ರಮವಹಿಸಬೇಕು. ಅಂತರಗಂಗೆ ಸ್ನಾನಘಟ್ಟದಲ್ಲಿ ನೈರ್ಮಲ್ಯ ಕಾಪಾಡಿಕೊಳ್ಳಬೇಕು. ಕಾಯಂ ಶೌಚಾಲಯಗಳ ಜೊತೆಗೆ ತಾತ್ಕಾಲಿಕ ಶೌಚಾಲಯಗಳ ವ್ಯವಸ್ಥೆ ಮಾಡಬೇಕು. ಸ್ನಾನಕ್ಕಾಗಿ ಷವರ್‌ಗಳನ್ನು ಅಳವಡಿಸಬೇಕು.

ಸ್ನಾನ ಗೃಹ ಹಾಗೂ ಶೌಚಾಲಯಗಳ ನಿರಂತರ ಸ್ವತ್ಛತೆಗೆ ಸಿಬ್ಬಂದಿ ನಿಯೋಜಿಸಬೇಕು ಎಂದು ಶಾಸಕರು ಹಾಗೂ ಜಿಲ್ಲಾಧಿಕಾರಿ ತಿಳಿಸಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾ ಹಕಾಧಿಕಾರಿ ಆನಂದ್‌ಪ್ರಕಾಶ್‌ ಮೀನಾ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪದ್ಮಿನಿ ಸಾಹು, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಉಪ ಕಾರ್ಯದರ್ಶಿ ಚಂದ್ರಶೇಖರ್‌, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್‌ ಮಹೇಶ್‌, ತಾಪಂ ಕಾರ್ಯನಿರ್ವಾಹಕಾಧಿಕಾರಿ ಉಮೇಶ್‌ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ವಿಶೇಷ ದಾಸೋಹ ಇರಬೇಕು
ಜಾತ್ರಾ ಸಂದರ್ಭದಲ್ಲಿ ನಿತ್ಯ ದಾಸೋಹದ ಜೊತೆಗೆ ವಿಶೇಷ ದಾಸೋಹ ಇರಬೇಕು. ಇದಕ್ಕೆ ಪೂರಕವಾದ ಎಲ್ಲಾ ವ್ಯವಸ್ಥೆಗಳನ್ನು ಪೂರ್ಣಗೊಳಿಸಬೇಕು. ಕೆ.ಎಸ್‌.ಆರ್‌.ಟಿಸಿ ವತಿಯಿಂದ ವಿವಿಧ ಭಾಗಗಳಿಂದ ಈ ಬಾರಿ ಹೆಚ್ಚು ಸಂಖ್ಯೆಯಲ್ಲಿ ಬಸ್ಸುಗಳ ಕಾರ್ಯಾಚರಣೆಯಾಗಬೇಕು. ತಮಿಳುನಾಡಿನಿಂದಲೂ ಕ್ಷೇತ್ರಕ್ಕೆ ಬಸ್ಸುಗಳ ಸಂಖ್ಯೆಯಲ್ಲಿ ಹೆಚ್ಚಳವಾಗಬೇಕು ಎಂದು
ಸೂಚಿಸಲಾಯಿತು. ವಾಹನಗಳಿಗೆ ಪಾರ್ಕಿಂಗ್‌ ಸೌಲಭ್ಯ, ಜಾತ್ರಾ ಆವರಣದಲ್ಲಿ ಸ್ವಚ್ಛತೆ, ವಿದ್ಯುತ್‌ ದೀಪಾಲಂಕಾರ, ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ, ನಿರಂತರ ವಿದ್ಯುತ್‌ ಪೂರೈಕೆ, ಭದ್ರತಾ ವ್ಯವಸ್ಥೆ ಸೇರಿದಂತೆ ಇನ್ನಿತರ ಅಗತ್ಯ ವ್ಯವಸ್ಥೆಗಳ ಸಿದ್ಧತೆಯನ್ನು ವಿವರವಾಗಿ ಸಭೆಯಲ್ಲಿ ಪರಿಶೀಲಿಸಿದರು. ಸಾಲೂರು ಶ್ರೀಗಳಾದ ಶಾಂತಮಲ್ಲಿಕಾರ್ಜುನ ಸ್ವಾಮಿಜಿ ಅವರು ಜಾತ್ರಾ
ಸಂಬಂಧ ಅಗತ್ಯ ಸೂಚನೆ ಹಾಗೂ ಸಲಹೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next