Advertisement

ಚಾಮರಾಜನಗರ : ಪ್ರವಾಸೋದ್ಯಮಕ್ಕಿದೆ ವಿಪುಲ ಅವಕಾಶ

01:36 AM Mar 16, 2019 | Team Udayavani |

ಚಾಮರಾಜನಗರ: ದಕ್ಷಿಣ ಕರ್ನಾಟಕದ ತುತ್ತತುದಿಯಲ್ಲಿರುವ, ತಮಿಳುನಾಡು-ಕೇರಳ ದೊಂದಿಗೆ ಗಡಿ ಹಂಚಿಕೊಂಡಿರುವ ಲೋಕಸಭಾ ಕ್ಷೇತ್ರ ಚಾಮರಾಜನಗರ. ಪರಿಶಿಷ್ಟ ಜಾತಿಗೆ ಮೀಸಲು ಕ್ಷೇತ್ರವಾದ ಇದು ಚಾಮರಾಜನಗರ ಜಿಲ್ಲೆಯ 4 ಮತ್ತು ಮೈಸೂರು ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ.

Advertisement

ಚಾಮರಾಜನಗರ ಲೋಕಸಭಾ ಕ್ಷೇತ್ರ ಶೇ.50ರಷ್ಟು ಅರಣ್ಯ ಪ್ರದೇಶವನ್ನೇ ಹೊಂದಿದೆ. ಬಂಡೀಪುರ ಮತ್ತು ಬಿಳಿಗಿರಿರಂಗನಾಥ ಹುಲಿ ಸಂರಕ್ಷಿತ ಅರಣ್ಯಗಳನ್ನು ಈ ಕ್ಷೇತ್ರ ಒಳಗೊಂಡಿರುವುದು ವಿಶೇಷ. ಮಲೆಮಹದೇಶ್ವರ ವನ್ಯಜೀವಿ ಧಾಮವನ್ನು ಈಗ ಹುಲಿ ಸಂರಕ್ಷಿತ ಅರಣ್ಯದ ಪಟ್ಟಿಗೆ ಸೇರಿಸಬೇಕೆಂಬ ಪ್ರಸ್ತಾವವೂ ಇದೆ. ಅರಣ್ಯ ಪ್ರದೇಶವೆಲ್ಲ ಲೋಕಸಭಾ ಕ್ಷೇತ್ರದ ಗಡಿ ಭಾಗದಲ್ಲೇ ಇವೆ. ಜನವಸತಿ ಪ್ರದೇಶ ಇರುವುದೆಲ್ಲ ಬಯಲುಸೀಮೆಯೇ. ಹಾಗಾಗಿ ಶೇ.50ರಷ್ಟು ಅರಣ್ಯ ಪ್ರದೇಶವಿದ್ದರೂ ಚಾಮರಾಜನಗರ ಜಿಲ್ಲೆಯ ಬಹುಭಾಗ ಮಳೆಯಾಶ್ರಿತವೇ. ಮೈಸೂರು ಜಿಲ್ಲೆಗೆ ಸೇರಿದ ವಿಧಾನಸಭಾ ಕ್ಷೇತ್ರಗಳಲ್ಲಿ ಭಾಗಶಃ ನೀರಾವರಿ ಪ್ರದೇಶಗಳಿವೆ. ಲೋಕಸಭಾ ಕ್ಷೇತ್ರದಲ್ಲಿ ಮಲೆಮಹದೇಶ್ವರ ಬೆಟ್ಟ, ಬಿಳಿಗಿರಿರಂಗನ ಬೆಟ್ಟ, ತಲಕಾಡು, ಹಿಮವದ್‌ ಗೋಪಾಲಸ್ವಾಮಿ ಬೆಟ್ಟ ಮತ್ತು ತಿ.ನರಸೀಪುರ, ಮುಡುಕುತೊರೆ, ನಂಜನಗೂಡಿನಂಥ ಪ್ರಸಿದ್ಧ ಯಾತ್ರಾಸ್ಥಳಗಳಿವೆ.
 
  ಕೈ’ ಚುನಾವಣ ಅಸ್ತ್ರ
ಸಂಸದ ಧ್ರುವನಾರಾಯಣ ಅವರು, ಕ್ಷೇತ್ರದಲ್ಲಿ ಕೇಂದ್ರ ಸರಕಾರದಿಂದ ಬರಬೇಕಾದ ಬಹುಪಾಲು ಅಭಿವೃದ್ಧಿ ಕೆಲಸಗಳನ್ನು ಎಡೆಬಿಡದೆ ಪಟ್ಟು ಹಿಡಿದು ಮಾಡಿಸಿದ್ದಾರೆ ಎಂಬುದು ಜನಸಾಮಾನ್ಯರ ಅನಿಸಿಕೆ. ಮತದಾರರಿಗೆ ಸುಲಭದಲ್ಲಿ ಲಭ್ಯರಾಗುತ್ತಾರೆ, ಮತ ದಾರರ ಕಷ್ಟಸುಖಗಳಿಗೆ ಸ್ಪಂದಿಸುತ್ತಾರೆ ಎಂಬುದು ಬಹುಪಾಲು ಜನರ ಅಭಿಪ್ರಾಯ. ಇನ್ನು ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ ವಿಧಾನಸಭಾ ಕ್ಷೇತ್ರದ 
ಬಿ. ಮಟಕರೆ ಗ್ರಾಮ ಪಂಚಾಯತ್‌ನ್ನು ಧ್ರುವನಾರಾಯಣ್‌ ಅವರು ಸಂಸದರ ಆದರ್ಶ ಗ್ರಾಮಯೋಜನೆಗೆ ದತ್ತು ತೆಗೆದುಕೊಂಡಿದ್ದು, ಸಂಸದರ ಆದರ್ಶ ಗ್ರಾಮ ಯೋಜನೆ ಜಾರಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಸಂಸದರ ಈ ಅಭಿವೃದ್ಧಿ ಕಾರ್ಯಗಳೇ ಕಾಂಗ್ರೆಸ್‌ನ ಚುನಾವಣ ಅಸ್ತ್ರ.

ಸಂಸದರ ವೈಫ‌ಲ್ಯವೇ ಬಿಜೆಪಿಗೆ ಅಸ್ತ್ರ
ಕ್ಷೇತ್ರವ್ಯಾಪ್ತಿಯಲ್ಲಿ ಹೊಗೇನಕಲ್‌, ಭರಚುಕ್ಕಿ ಜಲಪಾತಗಳು, ಮಲೆಮಹದೇಶ್ವರ ಬೆಟ್ಟ, ಹಿಮವದ್‌ ಗೋಪಾಲಸ್ವಾಮಿ ಬೆಟ್ಟ, ಬಿಳಿಗಿರಿರಂಗನ ಬೆಟ್ಟ, ಬಂಡೀಪುರ, ತಲಕಾಡು ಸಹಿತ ಸಾಕಷ್ಟು ಪ್ರವಾಸಿ ತಾಣಗಳಿದ್ದು, ಇಲ್ಲಿ ಮೂಲಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ಈ ಬಗ್ಗೆ ಸಂಸದರು ಅಷ್ಟಾಗಿ ಗಮನ ಹರಿಸಿಲ್ಲ ಎಂಬ ಕೂಗು ಕೇಳಿ ಬರುತ್ತಿದೆ. ಈ ತಾಣಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯಾಗಬೇಕು. ನನೆಗುದಿಗೆ ಬಿದ್ದಿರುವ ಬೆಂಗಳೂರು-ಕನಕಪುರ-ಚಾಮರಾಜ ನಗರ ರೈಲು ಯೋಜನೆ ಜಾರಿಗೊಳಿಸಬೇಕು ಎಂಬುದು ಜನರ ಪ್ರಮುಖ ಬೇಡಿಕೆ. ಸಂಸದರ ಈ ವೈಫ‌ಲ್ಯ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸು, ಬಿಜೆಪಿಗೆ ಚುನಾವಣ ಅಸ್ತ್ರಗಳಾಗಿವೆ. 

ಧ್ರುವನಾರಾಯಣ್‌ಗೆ ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆ
ಪ್ರಸ್ತುತ ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಆರ್‌. ಧ್ರುವನಾರಾಯಣ್‌ ಸಂಸದ ರಾಗಿದ್ದಾರೆ. 2009 ಹಾಗೂ 2014ರಲ್ಲಿ ಎರಡು ಬಾರಿ ಸತತವಾಗಿ ಆರಿಸಿ ಬಂದಿದ್ದು, ಹ್ಯಾಟ್ರಿಕ್‌ ಸಾಧನೆಗಾಗಿ ಕಾದಿದ್ದಾರೆ. ಕ್ಷೇತ್ರದಲ್ಲಿ ಕಾಂಗ್ರೆಸ್‌ ಟಿಕೆಟ್‌ ಸಂಸದ ಧ್ರುವನಾರಾಯಣ್‌ಗೆ ಕಟ್ಟಿಟ್ಟ ಬುತ್ತಿ. ಬಿಜೆಪಿಯಿಂದ  ಸ್ಪರ್ಧಿಸಲು ಹಲವು ಆಕಾಂಕ್ಷಿ ಗಳಿದ್ದರಾದರೂ ಬಿಎಸ್‌ವೈ ಅವರ ಮನವೊಲಿಕೆಯ ಬಳಿಕ ಮಾಜಿ ಸಚಿವ ವಿ. ಶ್ರೀನಿವಾಸ್‌ ಪ್ರಸಾದ್‌ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಬಿಎಸ್ಪಿ ಸಹ ಕ್ಷೇತ್ರದಲ್ಲಿ ಪ್ರಬಲ ಅಭ್ಯರ್ಥಿಯನ್ನೇ ಕಣಕ್ಕಿಳಿಸುವುದಾಗಿ ಹೇಳುತ್ತಿದೆ. 

 ಕೆ.ಎಸ್‌.ಬನಶಂಕರ ಆರಾಧ್ಯ

Advertisement
Advertisement

Udayavani is now on Telegram. Click here to join our channel and stay updated with the latest news.

Next