Advertisement

ಚಾಮರಾಜನಗರ: ಮಾಜಿ ಶಾಸಕ ಸಿ. ಗುರುಸ್ವಾಮಿ ಕೋವಿಡ್‌ನಿಂದ ನಿಧನ

10:33 AM Aug 19, 2020 | Mithun PG |

ಚಾಮರಾಜನಗರ: ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ, ಬಿಜೆಪಿ ಮುಖಂಡ ಸಿ. ಗುರುಸ್ವಾಮಿ (68)  ಅವರು ಕೋವಿಡ್ ಸೋಂಕಿನಿಂದ ಬುಧವಾರ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

Advertisement

ಕೋವಿಡ್ ದೃಢಪಟ್ಟಿದ್ದರಿಂದಾಗಿ ಆಗಸ್ಟ್ 5 ರಂದು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ಬೆಳಿಗ್ಗೆ 7 ಗಂಟೆ ಸಮಯದಲ್ಲಿ ಮೃತಪಟ್ಟಿದ್ದಾರೆ.

ಜಿ.ಪಂ. ಮಾಜಿ ಅಧ್ಯಕ್ಷೆ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ, ವಕೀಲೆ ನಾಗಶ್ರೀ ಪ್ರತಾಪ್ ಸೇರಿದಂತೆ ಇಬ್ಬರು ಪುತ್ರಿಯರು, ಪತ್ನಿ ಶೀಲಾ ಅವರನ್ನು ಗುರುಸ್ವಾಮಿ ಅಗಲಿದ್ದಾರೆ.

ವೃತ್ತಿಯಲ್ಲಿ ವಕೀಲರಾಗಿದ್ದ ಸಿ. ಗುರುಸ್ವಾಮಿಯವರು ಜನತಾ ಪಕ್ಷ, ಜನತಾದಳದಿಂದ ರಾಜಕೀಯ ಜೀವನ ಆರಂಭಿಸಿದ್ದರು. ಜನತಾದಳ ಇದ್ದಾಗ ಅವಿಭಜಿತ ಮೈಸೂರು ಜಿಲ್ಲೆಯ ಜಿಲ್ಲಾ ಪರಿಷತ್ ಸದಸ್ಯರಾಗಿದ್ದರು. ಹಿರಿಯ ರಾಜಕೀಯ ನಾಯಕ, ಕೇಂದ್ರದ ಮಾಜಿ ಸಚಿವ ರಾಜಶೇಖರಮೂರ್ತಿಯವರ ಶಿಷ್ಯರಾಗಿದ್ದರು. ರಾಜಶೇಖರಮೂರ್ತಿಯವರು ಬಿಜೆಪಿ ಸೇರಿದ ಸಂದರ್ಭದಲ್ಲಿ ಅವರನ್ನು ಅನುಸರಿಸಿ ಗುರುಸ್ವಾಮಿ ಸಹ ಬಿಜೆಪಿ ಸೇರಿದರು.

1999ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಚಾಮರಾಜನಗರ ಕ್ಷೇತ್ರದಿಂದ ಗೆದ್ದು ಬಂದರು. ಎರಡು ಅವಧಿಗೆ ಗೆದ್ದು ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದ  ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ಅವರನ್ನು ಗುರುಸ್ವಾಮಿಯವರು ಸೋಲಿಸಿದ್ದು ಆಗ ದಾಖಲೆಯಾಗಿತ್ತು. ಕ್ಷೇತ್ರದ ಮೊದಲ ಹಾಗೂ ಏಕೈಕ ಬಿಜೆಪಿ ಶಾಸಕರೆಂಬ ಹೆಗ್ಗಳಿಕೆಯೂ ಅವರದೇ ಆಗಿತ್ತು. ನಂತರ ಕ್ಷೇತ್ರದಲ್ಲಿ ಬಿಜೆಪಿ ಜಯಗಳಿಸಿಲ್ಲ.

Advertisement

1999-2004ರ ಅವಧಿ ಮುಗಿದ ನಂತರ ನಡೆದ ರಾಜಕೀಯ ಸ್ತಿತ್ಯಂತರಗಳಲ್ಲಿ ಗುರುಸ್ವಾಮಿಯವರು ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಯಾದರು. ಬಳಿಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಬಳಿಕ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದರು. ಜಿಲ್ಲೆಯ ಪ್ರಭಾವಿ ಬಿಜೆಪಿ ಮುಖಂಡರಲ್ಲೊಬ್ಬರಾಗಿ, ಜನಾನುರಾಗಿ ಮುಖಂಡರಾಗಿ ಗುರುತಿಸಿಕೊಂಡಿದ್ದರು.

ಮೃತರ ಅಂತ್ಯಕ್ರಿಯೆ ಅವರ ಸ್ವಗ್ರಾಮ ತಾಲೂಕಿನ ಯಾನಗಹಳ್ಳಿಯ ತೋಟದಲ್ಲಿ ಕೋವಿಡ್ ಶಿಷ್ಟಾಚಾರ ದಂತೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಕುಟುಂಬದವರ ಮನವಿ:
ಕೋವಿಡ್ ಶಿಷ್ಟಾಚಾರದ ಪ್ರಕಾರ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಮೃತರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಅವಕಾಶವಿರುವುದಿಲ್ಲ ಆದುದರಿಂದ ಅಭಿಮಾನಿಗಳು, ಬಂಧುಗಳು, ಬೆಂಬಲಿಗರು, ಪಕ್ಷದ ಮುಖಂಡರು ಕಾರ್ಯಕರ್ತರು, ತಾವಿರುವಲ್ಲಿಯೇ ಶ್ರದ್ದಾಂಜಲಿ ಸಲ್ಲಿಸಿ ಎಂದು ಗುರುಸ್ವಾಮಿಯವರ ಕುಟುಂಬದವರು ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next