ಚಾಮರಾಜನಗರ: ಜಿಲ್ಲೆಯ ಮೂರು ಸರ್ಕಾರಿ ಆಸ್ಪತ್ರೆಗಳಲ್ಲಿ ಒಟ್ಟು 14 ಡಯಾಲಿಸಿಸ್ ಯಂತ್ರಗಳಿದ್ದು, ಸುಮಾರು 80ಕ್ಕೂ ಹೆಚ್ಚು ಮಂದಿ ರೋಗಿಗಳು ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿದ್ದಾರೆ.
ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ 6, ಗುಂಡ್ಲುಪೇಟೆ ತಾಲೂಕು ಆಸ್ಪತ್ರೆಯಲ್ಲಿ 3, ಕೊಳ್ಳೇಗಾಲ ಉಪ ವಿಭಾಗ ಆಸ್ಪತ್ರೆಯಲ್ಲಿ 5 ಡಯಾಲಿಸಿಸ್ ಯಂತ್ರಗಳಿವೆ. ಮೂರು ಆಸ್ಪತ್ರೆಗಳಲ್ಲಿ ರಾಜ್ಯ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಡಯಾಲಿಸಿಸ್ ಕೇಂದ್ರ ಸ್ಥಾಪಿಸ ಲಾಗಿದೆ. ಇದನ್ನು ಖಾಸಗಿ ಏಜೆನ್ಸಿಗಳು ನಿರ್ವಹಣೆ ಮಾಡುತ್ತಿವೆ. ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಸ್ತುತ 54 ಮಂದಿ ರೋಗಿಗಳು ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿದ್ದಾರೆ. 25 ಮಂದಿ ವೆಯ್ಟಿಂಗ್ ಲಿಸ್ಟ್‌ನಲ್ಲಿದ್ದಾರೆ. ಕೊಳ್ಳೇಗಾಲ ಉಪವಿಭಾಗ ಸರ್ಕಾರಿ ಆಸ್ಪತ್ರೆಯಲ್ಲಿ 16 ಮಂದಿ ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿದ್ದು, 16 ಮಂದಿ ರೋಗಿಗಳು ವೆಯ್ಟಿಂಗ್ ಲಿಸ್ಟ್‌ನಲ್ಲಿದ್ದಾರೆ. ಗುಂಡ್ಲುಪೇಟೆ ತಾಲೂಕು ಆಸ್ಪತ್ರೆಯಲ್ಲಿ 18 ಮಂದಿ ರೋಗಿಗಳು ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿ ಮೊದಲು 2 ಡಯಾಲಿಸಿಸ್ ಯಂತ್ರಗಳಿದ್ದವು. ಇತ್ತೀಚಿಗೆ ಶಾಸಕ ಗಣೇಶಪ್ರಸಾದ್ ಅವರು ಇನ್ನೊಂದು ಯಂತ್ರವನ್ನು ಕೊಡುಗೆಯಾಗಿ ನೀಡಿದ್ದಾರೆ.
ಜಿಲ್ಲೆಯ ಹನೂರಿನಲ್ಲಿ ತಾಲೂಕು ಆಸ್ಪತ್ರೆ ಇನ್ನೂ ಆಗಿಲ್ಲ. ಹಾಗಾಗಿ ಇಲ್ಲಿಗೆ ಡಯಾಲಿಸಿಸ್ ಕೇಂದ್ರ ಮಂಜೂರಾಗಿಲ್ಲ. ಹನೂರು ತಾಲೂಕಿನಲ್ಲಿ 24 ಮಂದಿ ರೋಗಿಗಳು ಡಯಾಲಿಸಿಸ್ ಚಿಕಿತ್ಸೆ ಪಡೆಯಲು ಎನ್‌ರೋಲ್ ಮಾಡಿಸಿದ್ದಾರೆ.
ಯಳಂದೂರು ತಾಲೂಕು ಆಸ್ಪತ್ರೆಯಲ್ಲೂ ಡಯಾಲಿಸಿಸ್ ಕೇಂದ್ರ ಇಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಡಯಾಲಿಸಿಸ್ ಚಿಕಿತ್ಸೆ ದೊರಕುವುದರಿಂದ ಬಡ ಮತ್ತು ಕೆಳ ಮಧ್ಯಮ ವರ್ಗದ ರೋಗಿಗಳು ಸರ್ಕಾರಿ ಆಸ್ಪತ್ರೆಗೆ ಬರುತ್ತಾರೆ. ಜಿಲ್ಲೆಯಲ್ಲಿ ಸುಮಾರು 50 ಮಂದಿ ರೋಗಿಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ಎನ್‌ರೋಲ್ ಮಾಡಿಸಿ, ಯಂತ್ರಗಳ ಕೊರತೆ ಕಾರಣ ಕಾಯುವಿಕೆ ಪಟ್ಟಿಯಲ್ಲಿದ್ದಾರೆ. ಈಗ ಅವರು ಅನಿವಾರ್ಯವಾಗಿ ಖಾಸಗಿ ಡಯಾಲಿಸಿಸ್ ಕೇಂದ್ರಗಳಿಗೆ ಹೋಗಬೇಕಾಗಿದೆ.
ನೆಫ್ರಾಜಲಿಸ್ಟ್ ಇಲ್ಲ: ಜಿಲ್ಲಾ ಆಸ್ಪತ್ರೆಯಲ್ಲಿ 6 ಯಂತ್ರಗಳಿದ್ದು, ಒಂದು ದಿನಕ್ಕೆ ಮೂರು ಬ್ಯಾಚ್‌ಗಳಲ್ಲಿ ಡಯಾಲಿಸಿಸ್ ಮಾಡಲಾಗುತ್ತಿದೆ. ಈಗ ನಡೆಸುತ್ತಿರುವ ಖಾಸಗಿ ಏಜೆನ್ಸಿ ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಯಂತ್ರಗಳು ಹಳೆಯದಾಗಿವೆ. ಪದೇ ಪದೆ ಕೆಡುತ್ತಿವೆ. ಇಲ್ಲಿ ಕೆಲಸ ನಿರ್ವಹಿಸುವ ತಂತ್ರಜ್ಞರಿಗೆ ವವೇತನ ಸಮರ್ಪಕವಾಗಿ ನೀಡಿರಲಿಲ್ಲ. ಹೀಗಾಗಿ ಅವರು ಹಿಂದೆ ಮುಷ್ಕರ ಸಹ ನಡೆಸಿದ್ದರು. ಡಯಾಲಿಸಿಸ್ ಕೇಂದ್ರದಲ್ಲಿ ಒಬ್ಬ ನೆಫ್ರಾಜಲಿಸ್ಟ್ ಇರಬೇಕು. ಆದರೆ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ನೆಫ್ರಾಲಜಿಸ್ಟ್ ಇಲ್ಲ. ಪ್ರಸ್ತುತ ರೋಗಿಗಳು ಖಾಸಗಿ ನೆಫ್ರಾಜಲಿಸ್ಟ್ ಬಳಿ ತಪಾಸಣೆ, ಸಲಹೆ ಪಡೆಯಬೇಕು. ಅವರಿಗೆ 300 ರೂ. ಸಲಹಾ ವೆಚ್ಚ ನೀಡಬೇಕಾಗಿದೆ. ಸರ್ಕಾರಿ ನೆಫ್ರಾಜಲಿಸ್ಟ್ ನೇಮಿಸಬೇಕು ಎಂದು ರೋಗಿಗಳು ಒತ್ತಾಯಿಸಿದ್ದಾರೆ.
ಈಗ ಡಯಾಲಿಸಿಸ್ ಕೇಂದ್ರ ನಡೆಸುತ್ತಿರುವ ಖಾಸಗಿ ಏಜೆನ್ಸಿ ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿಲ್ಲ ಎಂಬ ದೂರುಗಳಿವೆ. ಸದ್ಯದಲ್ಲೇ ಏಜೆನ್ಸಿ ಬದಲಾಗಲಿದೆ. ನೂತನ ಯಂತ್ರಗಳು ಸಹ ಬರಲಿವೆ. ಈಗ ಇರುವ ಸಮಸ್ಯೆಗಳು ಸದ್ಯದಲ್ಲೇ ನಿವಾರಣೆಯಾಗಲಿವೆ.
● ಡಾ.ಚಿದಂಬರ, ಡಿಎಚ್‌ಒ, ಚಾಮರಾಜನಗರ
– ಕೆ.ಎಸ್. ಬನಶಂಕರ ಆರಾಧ್ಯ