ಚಾಮರಾಜನಗರ: ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ ಇಂದು ಇಬ್ಬರು ಮಹಿಳೆಯರು ಮೃತಪಟ್ಟಿದ್ದಾರೆ. 39 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. 46 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಒಟ್ಟು ಪ್ರಕರಣಗಳ ಸಂಖ್ಯೆ 708ಕ್ಕೇರಿದೆ.
ಹನೂರು ತಾಲೂಕಿನ ಕೌದಳ್ಳಿಯ 55 ವರ್ಷದ ಮಹಿಳೆ ಹಾಗೂ ಚಾಮರಾಜನಗರದ 5ನೇ ವಾರ್ಡಿನ ಅಹಮದ್ ನಗರದ ನಿವಾಸಿ 54 ವರ್ಷದ ಮಹಿಳೆ ಮೃತಪಟ್ಟವರು. ಇದರಿಂದಾಗಿ ಜಿಲ್ಲೆಯಲ್ಲಿ ಕೋವಿಡ್‌ನಿಂದ ಮೃತಪಟ್ಟವರ ಸಂಖ್ಯೆ 8ಕ್ಕೇರಿದೆ.
ಕೌದಳ್ಳಿನಿವಾಸಿ ಮಹಿಳೆ ಜು.23ರಂದು ನಗರದ ಕೋವಿಡ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗಿದೇ ಇಂದು ಬೆಳಗಿನ ಜಾವ ಮೃತಪಟ್ಟಿದ್ದಾರೆ. ನಗರದ ಅಹಮದ್ ನಗರ ನಿವಾಸಿ ಮಹಿಳೆ ಕೋವಿಡ್ ಆಸ್ಪತ್ರೆಗೆ ದಾಖಲಿಸುವ ಮುನ್ನವೇ ಇಂದು ಬೆಳಿಗ್ಗೆ 11.30ರಲ್ಲಿ ಅವರ ಮನೆಯಲ್ಲಿ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.
ನಗರದ ಅಹಮದ್ ನಗರದ ಮಹಿಳೆ ಶುಕ್ರವಾರ ಕೋವಿಡ್ ಟೆಸ್ಟ್ ಮಾಡಿಸಿ ಮನೆಗೆ ಮರಳಿದ್ದರು. ಇಂದು ಬೆಳಿಗ್ಗೆ ಪಾಸಿಟಿವ್ ಬಂದಿರುವ ಫಲಿತಾಂಶ ತಿಳಿಸುವ ವೇಳೆಗೆ ಮೃತಪಟ್ಟಿದ್ದಾರೆ.
ಇಬ್ಬರೂ ಮಹಿಳೆಯರ ಅಂತ್ಯಕ್ರಿಯೆಯನ್ನು ಕೋವಿಡ್ ಶಿಷ್ಟಾಚಾರದಂತೆ ಪಿಎಫ್ ಐ ಕಾರ್ಯಕರ್ತರು ನಡೆಸಿದರು.
ಇದುವರೆಗೆ ಜಿಲ್ಲೆಯಲ್ಲಿ 463 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ. 236 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು 593 ಮಾದರಿಗಳನ್ನು ಪರೀಕ್ಷೆಗೊಳಪಡಿಸಲಾಗಿತ್ತು. ಇದರಲ್ಲಿ 39 ಮಂದಿಗೆ ಸೋಂಕು ದೃಢಪಟ್ಟಿದೆ.
ಇಂದು ಕೊಳ್ಳೇಗಾಲ ತಾಲೂಕಿನಿಂದ 13, ಗುಂಡ್ಲುಪೇಟೆ ತಾಲೂಕಿನಿಂದ 9, ಚಾಮರಾಜನಗರ ತಾಲೂಕಿನಿಂದ 9,ಯಳಂದೂರು ತಾಲೂಕಿನಿಂದ 6 ಹಾಗೂ ಹನೂರು ತಾಲೂಕಿನಿಂದ 2 ಪ್ರಕರಣಗಳು ವರದಿಯಾಗಿವೆ.