Advertisement

Chamarajanagar: ಲೊಕ್ಕನಹಳ್ಳಿ ಸಮೀಪ ಹುಲಿಯ ಮೃತ ದೇಹ ಪತ್ತೆ

10:09 PM Jun 22, 2024 | Team Udayavani |

ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಕೊಳ್ಳೇಗಾಲ ವನ್ಯಜೀವಿ ವಲಯದ ಗುಂಡಾಲ್ ಶಾಖೆಯ ಲೊಕ್ಕನಹಳ್ಳಿ ಪಶ್ಚಿಮ ಗಸ್ತಿನಲ್ಲಿ ಹುಲಿಯ ಮೃತ ದೇಹ ಪತ್ತೆಯಾಗಿದೆ.

Advertisement

ಹುಲಿಯು ಅಂದಾಜು 5-6 ವರ್ಷ ವಯಸ್ಸಿನ ಹೆಣ್ಣು ಹುಲಿಯಾಗಿದ್ದು, ಸ್ವಾಭಾವಿಕ ಸಾವು ಎಂದು ಅರಣ್ಯ ಇಲಾಖೆ ಪ್ರಕಟಣೆ ತಿಳಿಸಿದೆ. ಚರ್ಮ ಸಹಿತ ಎಲ್ಲ ಆವಯವಗಳು ಇದ್ದು, ಎಸ್.ಓ.ಪಿ.ಯ ಪ್ರಕಾರ ಎನ್‌ಟಿಸಿಎ ಸಮಿತಿ ಸದಸ್ಯರ ಹಾಜರಾತಿಯಲ್ಲಿ ಹುಲಿಯ ಮರಣೋತ್ತರ ಪರೀಕ್ಷೆಯನ್ನು ನುರಿತ ವನ್ಯಜೀವಿ ತಜ್ಞರಾದ ಇಬ್ಬರು ಪಶುವೈದ್ಯರು ನಡೆಸಿದ್ದಾರೆ. ಮೃತ ಹುಲಿಯ ಸಾವು ಸ್ವಾಭಾವಿಕವೆಂದು ದೃಢಪಡಿಸಿರುತ್ತಾರೆ.

ಹುಲಿಯ ಮೃತ ದೇಹದ ಸಂಪೂರ್ಣ ಕಳೆಬರವನ್ನು ಯಥಾಸ್ಥಿತಿಯಲ್ಲಿ ಘಟನಾ ಸ್ಥಳದ ಬಳಿ ಎಸ್.ಓ.ಪಿ. ಪ್ರಕಾರ ವಿಲೆ ಮಾಡಲಾಯಿತು ಎಂದು ಅರಣ್ಯ ಇಲಾಖೆ ತಿಳಿಸಿದೆ.

ದೊಡ್ಡಸಂಪಿಗೆ ಮೀಸಲು ಅರಣ್ಯದ ಸ್ಥಳೀಯವಾಗಿ ಕರೆಯಲ್ಪಡುವ ಬರಳ್ಳ ಅರಣ್ಯ ಪ್ರದೇಶದಲ್ಲಿ ಅರಣ್ಯ ಸಿಬ್ಬಂದಿಯವರು ಗಸ್ತು ಸಂದರ್ಭದಲ್ಲಿ ಈ ಹುಲಿಯ ಮೃತದೇಹ ಕಂಡುಬಂದಿರುತ್ತದೆ. ಈ ವಿಚಾರವನ್ನು ಭಾರತ ಸರ್ಕಾರದ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್.ಟಿ.ಸಿ.ಎ.) ರವರ ಎಸ್.ಓ.ಪಿ.ಯ ಅನುಗುಣವಾಗಿ ಅಧಿಕಾರಿಗಳು ಹಾಗೂ ಸಿಬ್ಬಂದಿಯವರು ಕ್ರಮವಹಿಸಿರುತ್ತಾರೆ.

ಶನಿವಾರ ಹುಲಿಯ ಮರಣೋತ್ತರ ಪರೀಕ್ಷೆಯನ್ನು ಕ್ರಮಕೈಗೊಳ್ಳಲು ಎಸ್.ಓ.ಪಿ. ಯ ಪ್ರಕಾರ ಸಮಿತಿ ರಚಿಸಲಾಗಿದೆ. ಸಮಿತಿಯಲ್ಲಿ ಉಪ ಅರಣ್ಯ ಸಂಕ್ಷಣಾಧಿಕಾರಿ ದೀಪ್ ಜೆ. ಕಂಟ್ರಾಕ್ಟರ್ ಮುಖ್ಯ ವನ್ಯಜೀವಿ ಪರಿಪಾಲಕ ಜಿ. ಮಲ್ಲೇಶಪ್ಪ , ವನ್ಯಜೀವಿ ಪರಿಪಾಲಕಿ ಕೃತಿಕಾ ಆಲನಹಳ್ಳಿ ಪಶುವೈದ್ಯಾಧಿಕಾರಿ ಡಾ. ಮಿರ್ಜಾ ವಾಸೀಂ, ಡಾ. ಶಿವರಾಜು ಎಸ್., ಎಸಿಎಫ್ ನಂದಗೋಪಾಲ್, ಆರ್‌ಎಫ್ ಓ ವಾಸು ಮತ್ತಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next