Advertisement

ಚಾಮರಾಜ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ನೀಡಲು ಸಿದ್ಧ

01:05 PM Jun 19, 2017 | Team Udayavani |

ಮೈಸೂರು: ಚಾಮರಾಜ ಕ್ಷೇತ್ರವನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಪರಿಣಾಮಕಾರಿಯಾಗಿ ಕೆಲಸ ಮಾಡುವ ಮೂಲಕ ಬಾಕಿಯಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ಸ್ಥಳೀಯ ಶಾಸಕ ವಾಸು ಸೂಚಿಸಿದರು.

Advertisement

ನಗರದ ಯಾದವಗಿರಿಯ ವಾಣಿವಿಲಾಸ ನೀರು ಸರಬರಾಜು ಕೇಂದ್ರದಲ್ಲಿ ಆಯೋಜಿಸಿದ್ದ ಚಾಮರಾಜ ಕ್ಷೇತ್ರದ ವಿವಿಧ ಕಾಮಗಾರಿಗಳು, ಯೋಜನೆಗಳ ಪ್ರಗತಿ ಪರಿಶೀಲನೆ ಹಾಗೂ ಸಾರ್ವಜನಿಕರ ಅಹವಾಲು ಸ್ವೀಕಾರ ಸಭೆಯಲ್ಲಿ ಮಾತನಾಡಿ, ಚಾಮರಾಜ ಕ್ಷೇತ್ರದ ಅಭಿವೃದ್ಧಿಗೆ ಅಗತ್ಯವಿರುವ ಅನುದಾನ ನೀಡಲು ರಾಜ್ಯ ಸರ್ಕಾರ ಸಿದ್ಧವಿದೆ ಎಂದರು.

 ಈ ಹಿನ್ನೆಲೆ ಮುಂದಿನ ಹಲವು ವರ್ಷಗಳಿಗೆ ಅನುಕೂಲವಾಗುವಂತೆ ದೂರ ದೃಷ್ಟಿಯಿಂದ ಅಗತ್ಯವಿರುವ ಅಭಿವೃದ್ಧಿ ಕಾಮಗಾರಿಗಳನ್ನು ಸೂಕ್ತ ಸಮಯದಲ್ಲಿ ನಡೆಸಬೇಕು. ಮುಖ್ಯವಾಗಿ ಕೆ.ಆರ್‌.ಆಸ್ಪತ್ರೆ ಹಾಗೂ ಮೈಸೂರು ಮೆಡಿಕಲ್‌ ಕಾಲೇಜಿನ ಶವಾಗಾರಕ್ಕೆ ಸುರಂಗ ಮಾರ್ಗ ನಿರ್ಮಿಸಬೇಕೆಂಬ ಬೇಡಿಕೆ ಹಲವು ವರ್ಷದಿಂದ ಕೇಳಿ ಬರುತ್ತಿದೆ. ಈ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಯೊಂದಿಗೆ ಮಾತನಾಡಿ ಅನುಮೋದನೆ ನೀಡುವಂತೆ ತಿಳಿಸುತ್ತೇನೆ ಎಂದು ತಿಳಿಸಿದರು.

ಮೈಸೂರು ನಗರ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದರೂ, ಇಲ್ಲಿನ ಜನಸಂಖ್ಯೆಗೆ ಅನುಗುಣವಾಗಿ ಮೂಲಸೌಕರ್ಯ ಕಲ್ಪಿಸುವಲ್ಲಿ ನಾವು ವಿಫ‌ಲರಾಗಿದ್ದೇವೆ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರು ನಗರದ ಅಭಿವೃದ್ಧಿಗೆ 300 ಕೋಟಿ ರೂ.ಗಳ ಅನುದಾನ ನೀಡಿದ್ದು, ಮೂರು ವಿಧಾನಸಭಾ ಕ್ಷೇತ್ರಕ್ಕೆ ತಲಾ 90 ಕೋಟಿ ರೂ.ಗಳನ್ನು ನೀಡಲಾಗಿದೆ. ಹೀಗಿದ್ದರೂ ಮೈಸೂರು ನಗರವನ್ನು ಸುಸಜ್ಜಿತವಾಗಿ ಅಭಿವೃದ್ಧಿ ಮಾಡಲು ಸಾಧ್ಯವಾಗಿಲ್ಲ,

ಹೀಗಾಗಿ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆಯುವ ಕಾಮಗಾರಿಗಳಲ್ಲಿ ಯಾವುದೇ ಸಣ್ಣಪುಟ್ಟ ದೋಷಗಳು ಕಂಡುಬಂದಲ್ಲಿ ಕೂಡಲೇ ಅದನ್ನು ಬಗೆಹರಿಸುವ ಮೂಲಕ ಕಾಮಗಾರಿಗಳಿಗೆ ಯಾವುದೇ ತೊಂದರೆ ಆಗದಂತೆ ಎಚ್ಚರವಹಿಸಿ ಎಂದು ಹೇಳಿದರು. ಅಲ್ಲದೆ ತಮ್ಮ ಶಾಸಕ ಸ್ಥಾನದ ಅವಧಿ ಅಂದಾಜು ಆರು ತಿಂಗಳಿದ್ದು, ಈ ಅವಧಿಯಲ್ಲಿ ನಾಡಹಬ್ಬ ದಸರಾ ಮಹೋತ್ಸವ, ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ.

Advertisement

ಹೀಗಾಗಿ ಎರಡು ತಿಂಗಳಲ್ಲಿ ಇದರ ಸಿದ್ದತೆ, ಆಚರಣೆಗೆ ಎರಡು ತಿಂಗಳನ್ನು ಮೀಸಲಿಟ್ಟು, ಬಾಕಿ ನಾಲ್ಕು ತಿಂಗಳಲ್ಲಿ ಕ್ಷೇತ್ರದಲ್ಲಿ ಕೈಗೊಳ್ಳಲಾಗಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು ಮುಂದಾಗಿ ಎಂದ ಅವರು, ಸರ್ಕಾರದ ಮಟ್ಟದಲ್ಲಿ ಉಳಿದಿರುವ ಸಮಸ್ಯೆಗಳ ಬಗ್ಗೆ ತಮ್ಮ ಗಮನಕ್ಕೆ ತಂದರೆ ಸರ್ಕಾರದ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿ ಬಗೆಹರಿಸುತ್ತೇನೆ ಎಂದರು. ಪಾಲಿಕೆ ಆಯುಕ್ತ ಜಿ.ಜಗದೀಶ್‌, ಸಹಾಯಕ ಆಯುಕ್ತ ಸುರೇಶ್‌ ಬಾಬು ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next