Advertisement

ಚಾಮರಾಜನಗರ ನಗರಸಭೆ ಆಡಳಿತ ಬಿಜೆಪಿ ತೆಕ್ಕೆಗೆ

07:54 PM Nov 02, 2020 | mahesh |

ಚಾಮರಾಜನಗರ: ಚಾಮರಾಜನಗರ ನಗರಸಭೆಯ ನೂತನ ಅಧ್ಯಕ್ಷ ಉಪಾಧ್ಯಕ್ಷರಾಗಿ ಬಿಜೆಪಿಯ ಆಶಾ ನಟರಾಜ್ ಹಾಗೂ ಸುಧಾ ಅವರು ಸೋಮವಾರ ನಡೆದ ಚುನಾವಣೆಯಲ್ಲಿ ಆಯ್ಕೆಗೊಂಡರು. ಇದರೊಂದಿಗೆ 10 ವರ್ಷಗಳ ನಂತರ ಬಿಜೆಪಿ ಮತ್ತೆ ಜಿಲ್ಲಾ ಕೇಂದ್ರದ ನಗರಸಭೆಯ ಅಧಿಕಾರ ಹಿಡಿದಿದೆ.

Advertisement

ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಹಾಗೂ ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ವರ್ಗ ಮಹಿಳೆಗೆ ಮೀಸಲಾಗಿತ್ತು. 31 ಸದಸ್ಯ ಬಲದ ನಗರಸಭೆಯಲ್ಲಿ ಯಾವ ಪಕ್ಷಕ್ಕೂ ನಿಚ್ಚಳಬಹುಮತ ಇರಲಿಲ್ಲ. ನಗರಸಭೆಯ ಒಟ್ಟು 31 ಸದಸ್ಯ ಬಲದ ಪೈಕಿ ಬಿಜೆಪಿ ಗಳಿಸಿದ್ದ 15 ಸ್ಥಾನಗಳನ್ನು ಗಳಿಸಿ ದೊಡ್ಡ ಪಕ್ಷವಾಗಿತ್ತು. ಬಹುಮತ ಸಾಬೀತು ಪಡಿಸಲು ಆ ಪಕ್ಷಕ್ಕೆ ಇನ್ನು ಎರಡು ಮತಗಳ ಅಗತ್ಯ ಇತ್ತು. ಸಂಸದರ ಮತವೂ ಗಣನೆಗೆ ಬರುವುದರಿಂದ ಚಾಮರಾಜನಗರ ಕ್ಷೇತ್ರದ ಸಂಸದ ವಿ. ಶ್ರೀನಿವಾಸ್ ಪ್ರಸಾದ್ ಅವರು ಚುನಾವಣೆಗೆ ಹಾಜರಾಗಿ ತಮ್ಮ ಮತ ಚಲಾಯಿಸಿದರು. ಇನ್ನೊಂದು ಮತವಷ್ಟೇ ಬಿಜೆಪಿಗೆ ಅಗತ್ಯವಾಗಿತ್ತು. ಬಿಎಸ್‌ಪಿಯಿಂದ ಆಯ್ಕೆಯಾಗಿ ಕೊಳ್ಳೇಗಾಲ ಶಾಸಕ ಎನ್. ಮಹೇಶ್ ಅವರ ಜೊತೆ ಗುರುತಿಸಿಕೊಂಡಿರುವ ಸದಸ್ಯ ಪ್ರಕಾಶ್ ಬಿಜೆಪಿ ಪರ ಮತ ಚಲಾಯಿಸುವ ಮೂಲಕ ಬೆಂಬಲ ನೀಡಿದರು.

ಸೋಮವಾರ ಸಂಜೆ 4ಕ್ಕೆ ನಿಗದಿಯಾಗಿದ್ದ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಆಶಾ ಮತ್ತು ಸುಧಾ ಹಾಗೂ ಕಾಂಗ್ರೆಸ್ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ಶಾಂತಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚಂದ್ರಕಲಾ ನಾಮಪತ್ರ ಸಲ್ಲಿಸಿದ್ದರು. ಬಹುಮತ ಇಲ್ಲದಿದ್ದರೂ ಅವಿರೋಧ ಆಯ್ಕೆಗೆ ಅವಕಾಶ ನೀಡಬಾರದೆಂದು ಕಾಂಗ್ರೆಸ್ ಪಕ್ಷ ತನ್ನ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಸಿತ್ತು. ಹೀಗಾಗಿ ಚುನಾವಣೆ ನಡೆಯಿತು.

4.15ಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಪರ 15 ಸದಸ್ಯರ ಹಾಗೂ ಸಂಸದರ 1 ಮತ, ಬಿಎಸ್‌ಪಿ ಪ್ರಕಾಶ್ ಅವರ 1 ಮತ ಸೇರಿ 17 ಮತಗಳು ದೊರೆತವು. ಕಾಂಗ್ರೆಸ್ ಪಕ್ಷದ ಬಲ 8 ಹಾಗೂ ಎಸ್‌ಡಿಪಿಐ 6 ಮತ ಸೇರಿ 14 ಮತಗಳು ಬಂದವು. ಶಾಸಕ ಪುಟ್ಟರಂಗಶೆಟ್ಟಿ ಅವರು ಹಾಜರಾಗಿ ಕಾಂಗ್ರೆಸ್ ಪರ ಮತ ಚಲಾಯಿಸಿದ್ದರೂ ಗೆಲುವು ದೊರಕುತ್ತಿರಲಿಲ್ಲವಾದ ಕಾರಣವೇನೋ ಗೈರು ಹಾಜರಾಗಿದ್ದರು. ಇನ್ನೋರ್ವ ಪಕ್ಷೇತರ ಸದಸ್ಯ ಬಸವಣ್ಣ ಗೈರು ಹಾಜರಾಗಿದ್ದರು. ಹೀಗಾಗಿ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಉಪ ವಿಭಾಗಾಧಿಕಾರಿ ಗಿರೀಶ್ ಅವರು ಬಿಜೆಪಿಯ ಆಶಾ ಮತ್ತು ಸುಧಾ ಅಧ್ಯಕ್ಷ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆಂದು ಘೋಷಿಸಿದರು.

ಚುನಾವಣೆಯ ನಂತರ ಹೊರ ಬಂದ ಅಧ್ಯಕ್ಷ ಉಪಾಧ್ಯಕ್ಷರನ್ನು ಗುಂಡ್ಲುಪೇಟೆ ಶಾಸಕ ನಿರಂಜನಕುಮಾರ್, ಬಿಜೆಪಿ ಮುಖಂಡ ಎಂ. ರಾಮಚಂದ್ರ, ನಿಜಗುಣರಾಜು, ಜಿಲ್ಲಾ ಬಿಜೆಪಿ ಅಧ್ಯಕ್ಷ ಆರ್. ಸುಂದರ್, ಚುಡಾ ಅಧ್ಯಕ್ಷ ಕುಲಗಾಣ ಶಾಂತಮೂರ್ತಿ ಮತ್ತಿತರರು ಅಭಿನಂದಿಸಿದರು.

Advertisement

ಪುಟ್ಟರಂಗಶೆಟ್ಟರ ವಿರುದ್ಧ ಎಸ್‌ಡಿಪಿಐ ಅಸಮಾಧಾನ
ಚುನಾವಣೆ ಪ್ರಕ್ರಿಯೆ ಮುಗಿಯುತ್ತಲೇ ಇತ್ತ ಬಿಜೆಪಿ ಕಾರ್ಯಕರ್ತರು ನಗರಸಭೆ ಮುಂಭಾಗ ಸಂಸದ ಶ್ರೀನಿವಾಸ್ ಪ್ರಸಾದ್ ಅವರ ಸಮ್ಮುಖದಲ್ಲಿ ವಿಜಯೋತ್ಸವ ನಡೆಸಿದರು. ನಗರಸಭೆ ಕಚೇರಿಯಿಂದ ಹೊರಬಂದ ಎಸ್‌ಡಿಪಿಐ ಸದಸ್ಯರು, ಶಾಸಕ ಪುಟ್ಟರಂಗಶೆಟ್ಟಿ ಅವರ ವಿರುದ್ಧ ತೀವ್ರ ಅಸಮಾಧಾನ ಹಾಗೂ ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ಪಕ್ಷಕ್ಕೆ ಬೆಂಬಲವಾಗಿ ಎಸ್‌ಡಿಪಿಐ ಕೈ ಜೋಡಿಸಿತ್ತು. ಹಾಗಾಗಿಯೇ ಕೊನೆ ಪಕ್ಷ ಬಿಜೆಪಿಗೆ ಫೈಟ್ ಕೊಡೋಣವೆಂದೇ ಎಸ್‌ಡಿಪಿಐ ಸದಸ್ಯರು ಚುನಾವಣೆ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದರು. ಆದರೆ, ಮತ ಚಲಾಯಿಸುವ ಹಕ್ಕಿದ್ದರೂ ಶಾಸಕ ಪುಟ್ಟರಂಗಶೆಟ್ಟಿ ಅವರು ಚುನಾವಣೆ ಪ್ರಕ್ರಿಯೆ ವೇಳೆ ನಗರಸಭೆ ಸಭಾಂಗಣಕ್ಕೆ ಬರಲಿಲ್ಲ. ಅವರು ಭಾಗವಹಿಸಿ ಮತ ಚಲಾಯಿಸಬೇಕಿತ್ತು ಎಂದು ಎಸ್‌ಡಿಪಿಐ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.

ಬಿಜೆಪಿ ಗೆಲುವಿಗೆ ಕಾರಣರಾದ ಬಿಎಸ್‌ಪಿಯ ಪ್ರಕಾಶ್
ಬಿಜೆಪಿ ಹೆಚ್ಚು ಸ್ಥಾನಗಳಿಸಿದ್ದರೂ ಅದಕ್ಕೆ ಬಹುಮತ ಸಾಬೀತ ಪಡಿಸಲು ಒಂದೇ ಒಂದು ಮತದ ಅಗತ್ಯ ಇತ್ತು. ಒಂದು ವೇಳೆ ಬಿಎಸ್ಪಿ ಅಭ್ಯರ್ಥಿ ಪ್ರಕಾಶ್ ಬೆಂಬಲ ನೀಡದೇ ಇದ್ದಿದ್ದರೆ ಬಿಜೆಪಿಗೆ ಅಧಿಕಾರ ಕಷ್ಟವಾಗುತ್ತಿತ್ತು. ಇಂಥ ವೇಳೆಯಲ್ಲಿ ಪ್ರಕಾಶ್ ಬಿಜೆಪಿಗೆ ಬೆಂಬಲ ನೀಡಿ ಗೆಲುವಿಗೆ ಕಾರಣರಾದರು. ಅತ್ಯಮೂಲ್ಯ ಮತ ಚಲಾಯಿಸಿ ಬಿಜೆಪಿ ಅಧಿಕಾರಕ್ಕೇರಲು ಕಾರಣರಾದ ಬಿಎಸ್ಪಿಯ ಪ್ರಕಾಶ್ ಅವರನ್ನು ಬಿಜೆಪಿ ಕಾರ್ಯಕರ್ತರು ಮೇಲೆತ್ತಿ ಸಂಭ್ರಮ ಪಟ್ಟರು. ಗೆಲುವಿನ ನಂತರ ಬಿಜೆಪಿ ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ಚಾಮರಾಜೇಶ್ವರ ದೇವಾಲಯದ ಮುಂದೆ ಜಮಾಯಿಸ ಪಟಾಕಿ ಸಿಡಿಸಿ ಸಂಭ್ರಮಿಸಿದರು.

ನಗರಸಭೆ ಚುನಾವಣೆ ಹಿನ್ನೆಲೆಯಲ್ಲಿ ನಗರಸಭೆ ಕಚೇರಿ ಕಟ್ಟಡದ ಸುತ್ತ ಸೋಮವಾರ ಬೆಳಿಗ್ಗೆಯಿಂದಲೇ ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು. ಹೀಗಾಗಿ ವಾಣಿಜ್ಯ ಪ್ರದೇಶದಲ್ಲಿರುವ ನಗರಸಭೆ ಕಚೇರಿ ಸುತ್ತಮುತ್ತ 100 ಮೀಟರ್ ವ್ಯಾಪ್ತಿಯಲ್ಲಿ ಜನರು ಓಡಾಡಲು ತೊಂದರೆಯಾಯಿತು. ಅಂಗಡಿ ಮುಂಗಟ್ಟುಗಳಿಗೆ, ಮಾರುಕಟ್ಟೆಗೆ ಹೋಗಲು ಜನರ ಪರದಾಡಿದರು.

ಬಿಜೆಪಿಯಲ್ಲಿ ಅಧ್ಯಕ್ಷರಾಗಲು ಚುಡಾ ಮಾಜಿ ಅಧ್ಯಕ್ಷ ಬಾಲಸುಬ್ರಹ್ಮಣ್ಯ ಅವರ ಪತ್ನಿ ಮಮತಾ ಸಹ ಪ್ರಬಲ ಆಕಾಂಕ್ಷಿಯಾಗಿದ್ದರು. ಪಕ್ಷದ ವರಿಷ್ಠರು ಇಬ್ಬರ ಜೊತೆ ಮಾತುಕತೆ ನಡೆಸಿ ಆಶಾ ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next