ಶಿವಮೊಗ್ಗ: ಕೃಷಿ ಸಚಿವರ ವಿರುದ್ಧ ಮಂಡ್ಯ ಜಿಲ್ಲೆಯ ಅಧಿಕಾರಿಗಳು ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ರಾಜ್ಯದ ಇತಿಹಾಸದಲ್ಲಿ ಈ ರೀತಿ ಮೊದಲ ಬಾರಿ ಆಗಿದೆ. ರಾಜ್ಯಪಾಲರು ಸಂಬಂಧಪಟ್ಟ ಅಧಿಕಾರಿಗೆ ತನಿಖೆಗೆ ಕಳುಹಿಸಿದ್ದಾರೆ. ಮುಖ್ಯಮಂತ್ರಿಗಳು ಕೃಷಿ ಸಚಿವರನ್ನು ಸಂಪುಟದಿಂದ ಕೈ ಬಿಡಬೇಕು ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಆಗ್ರಹಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 8-10 ಲಕ್ಷ ಲಂಚ ಕೇಳುತ್ತಾರೆ ಎಂದು ರಾಜ್ಯಪಾಲರಿಗೆ ಅಧಿಕಾರಿಗಳು ಪತ್ರ ಬರೆದಿದ್ದಾರೆ. ತನಿಖೆ ಮಾಡಿ ಹಣ ಲೂಟಿ ಮಾಡಿರುವವರ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸರಕಾರ ಬಂದು ಮೂರು ತಿಂಗಳು ಆಗಿಲ್ಲ. ರೈತರಿಗೆ ತೊಂದರೆ ಕೊಡುತ್ತಿದ್ದಾರೆ. ಯಡಿಯೂರಪ್ಪ ಅವರು ರೈತರಿಗೆ ಕೊಟ್ಟ ಹಣವನ್ನು ವಾಪಸ್ ಪಡೆಯುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳಿಗೆ ಬಜೆಟ್ ನಲ್ಲಿಟ್ಟ ಬೇರೆ ಬೇರೆ ಹಣ ಬಳಸಿಕೊಳ್ಳುತ್ತಿದ್ದಾರೆ. ಮುಖ್ಯಮಂತ್ರಿಗಳು ರೈತರ ದ್ರೋಹಿ ಆಗಿದ್ದಾರೆ. ರೈತರ ದ್ರೋಹಿ ಯಾರಾದರೂ ಇದ್ದರೆ ಅದು ಸಿದ್ದರಾಮಯ್ಯ ಮಾತ್ರ. ಬಿಜೆಪಿ ಸರ್ಕಾರದ ರೈತರ ಯೋಜನೆಗಳನ್ನು ಮುಂದುವರೆಸಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ:ಹೊಸ ಹೊಸ ಆವಿಷ್ಕಾರಗಳಿಗೆ ದೃಶ್ಯ ವಿನ್ಯಾಸದಲ್ಲಿ ಉತ್ತಮ ಅವಕಾಶಗಳಿವೆ
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಜನರ ಸಮಸ್ಯೆ ಪರಿಹರಿಸುವುದಿರಲಿ. ಅವರ ಶಾಸಕರ ಸಮಸ್ಯೆ ಬಗೆಹರಿಸಲು ಆಗುತ್ತಿಲ್ಲ. ಬಹಿರಂಗವಾಗಿಯೇ ಸಚಿವರು, ಶಾಸಕರೇ ನಮಗೆ ಸಮಾಧಾನ ಇಲ್ಲ ಎಂತಿದ್ದಾರೆ. ಮುಖ್ಯಮಂತ್ರಿಗಳು ತೇಪೆ ಹಚ್ಚುವ ಕೆಲಸ ಮಾಡ್ತಿದ್ದಾರೆ. ಮೊದಲು ಸರ್ಕಾರ ಜನರ ಸಂಕಷ್ಟಗಳನ್ನು ಅರಿಯಬೇಕು. ಶಾಸಕರ ಸಮಾಧಾನ ಮಾಡಲು 6-7 ಜಿಲ್ಲೆ ಶಾಸಕರ ಸಮಾಧಾನ ಮಾಡಲು ಸಭೆ ಮಾಡುವಂತಹ ದುಸ್ಥಿತಿ ಈ ಸರಕಾರಕ್ಕೆ ಬಂದಿದೆ. ಇಂತಹ ಸ್ಥಿತಿ ಕಾಂಗ್ರೆಸ್ ಸರ್ಕಾರಕ್ಕೆ ಬಂದಿರೋದು ಬಹಳ ಅನ್ಯಾಯ ಎಂದು ವ್ಯಂಗ್ಯವಾಡಿದರು.
ಲೋಕಸಭೆ ಚುನಾವಣೆ ತಯಾರಿ ಮಾಡಿಕೊಳ್ಳಲಿ ಅದು ಅವರ ವಿಚಾರ. ದೆಹಲಿ, ಹೈದ್ರಾಬಾದ್ ಎಲ್ಲಿಗಾದ್ರೂ ಹೋಗಲಿ. ಮೊದಲು ಜನರ ಸಮಸ್ಯೆ ಬಗ್ಗೆ ಗಮನ ಕೊಡಿ ಎಂದರು.