ಬೆಂಗಳೂರು/ವಾರಾಣಸಿ: ಕರ್ನಾಟಕ- ತಮಿಳುನಾಡು ನಡುವಿನ ಕಾವೇರಿ ನದಿ ವಿವಾದ ಬಗೆಹರಿಯಬೇಕು. ಪ್ರತಿ ವರ್ಷ ಉತ್ತಮ ಮಳೆಯಾಗಬೇಕು ಎಂಬ ಸಂಕಲ್ಪದೊಂದಿಗೆ ಈ ಬಾರಿಯ ದಸರಾ ಸಂದರ್ಭದಲ್ಲಿ ಗಂಗಾರತಿ ಮಾದರಿಯಲ್ಲಿ ಕಾವೇರಿ ಆರತಿ ಆಯೋಜಿಸಲು ರಾಜ್ಯ ಸರಕಾರ ಚಿಂತನೆ ನಡೆಸಿದೆ.
ಇನ್ನೆರಡು ದಿನಗಳಲ್ಲಿ ಸರಕಾರಕ್ಕೆ ಅಧ್ಯಯನ ವರದಿ ಒಪ್ಪಿಸಲು ಸಚಿವ ಚಲುವರಾಯಸ್ವಾಮಿ ನೇತೃತ್ವದ ನಿಯೋಗ ನಿರ್ಧರಿಸಿದೆ.
ಹರಿದ್ವಾರ ಮತ್ತು ವಾರಾಣಸಿಯಲ್ಲಿ 2 ದಿನಗಳ ಗಂಗಾರತಿಯ ಅಧ್ಯಯನ ಪ್ರವಾಸ ಪೂರ್ಣಗೊಳಿಸಿದ ಸಚಿವರು, ಶಾಸಕರ ನಿಯೋಗ ರವಿವಾರ ವಾರಾಣಸಿಯಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಈ ಕುರಿತು ವಿವರಣೆ ನೀಡಿತು.
ಸಚಿವ ಚಲುವರಾಯಸ್ವಾಮಿ ಮಾತನಾಡಿ, ಕೆಆರ್‌ಎಸ್ ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ಕಾವೇರಿ ನದಿಗೆ ಬಾಗಿನ ಅರ್ಪಿಸಿದ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಕಾವೇರಿ ಆರತಿ ಬಗ್ಗೆ ಪ್ರಸ್ತಾವಿಸಲಾಗಿತ್ತು. ಕೂಡಲೇ ಈ ಕುರಿತು ಅಧ್ಯಯನ ನಡೆಸಲು ಕಾವೇರಿ ಕೊಳ್ಳದ ಶಾಸಕರು, ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳನ್ನು ಒಳಗೊಂಡ ನಿಯೋಗ ರಚಿಸಿ ಅಧ್ಯಯನಕ್ಕೆ ಸೂಚಿಸಿದ ಹಿನ್ನೆಲೆಯಲ್ಲಿ ಪ್ರವಾಸ ಕೈಗೊಳ್ಳಲಾಯಿತು. ಮೊದಲ ದಿನ ಹರಿದ್ವಾರ ಹಾಗೂ ಎರಡನೇ ದಿನ ವಾರಾಣಸಿಯ ಗಂಗಾರತಿಯನ್ನು ವೀಕ್ಷಿಸಲಾಗಿದೆ.
ಎಲ್ಲವನ್ನೂ ಎರಡು ದಿನದಲ್ಲಿ ವರದಿ ರೂಪದಲ್ಲಿ ಡಿ.ಕೆ.ಶಿವಕುಮಾರ್ ಅವರಿಗೆ ನೀಡಲಾಗುತ್ತದೆ. ಬಳಿಕ ಅಧಿಕಾರಿಗಳ ತಂಡ ಮತ್ತೂಮ್ಮೆ ಎರಡೂ ಸ್ಥಳಗಳಿಗೆ ಭೇಟಿ ನೀಡಿ ಹೆಚ್ಚಿನ ಅಧ್ಯಯನ ನಡೆಸಿ ಮತ್ತೂಂದು ವರದಿ ನೀಡಿದ ಬಳಿಕ ಮುಂದಿನ ನಿರ್ಣಯವನ್ನು ಸರಕಾರ ಕೈಗೊಳ್ಳಲಿದೆ.
ಇದುವರೆಗೆ ಕೆಆರ್‌ಎಸ್ ಬೃಂದಾವನ ಹಾಗೂ ಗಂಜಾಂ ನಿಮಿಷಾಂಬ ದೇವಸ್ಥಾನದ ಬಳಿ ಕಾವೇರಿ ಆರತಿ ಬಗ್ಗೆ ಚಿಂತನೆ ಇತ್ತು. ಇದೀಗ ಬಲಮುರಿ ತಟದಲ್ಲೂ ಆಯೋಜಿಸಬಹುದಾದ ಸಲಹೆಗಳು ಬಂದಿದ್ದು, ಸ್ಥಳದ ನಿರ್ಧಾರವನ್ನು ಅನಂತರದ ದಿನಗಳಲ್ಲಿ ಮಾಡಲಾಗುತ್ತದೆ. ಕೆಆರ್‌ಎಸ್ ಬೃಂದಾವನವನ್ನು ಅಂತಾರಾಷ್ಟ್ರೀಯ ಮಾದರಿಯ ಪ್ರವಾಸಿ ತಾಣ ಮಾಡಲು ಡಿಪಿಆರ್ ಸಿದ್ಧಗೊಂಡಿದ್ದು ಜಾಗತಿಕ ಟೆಂಡರ್ ಸಹ ಕರೆಯಲಾಗಿದೆ ಎಂದು ವಿವರಿಸಿದರು.