Advertisement

9ಕ್ಕೆ ಚಲುವನಾರಾಯಣ ಸ್ವಾಮಿ ಶ್ರೀಕೃಷ್ಣರಾಜಮುಡಿ ಉತ್ಸವ

04:35 PM Jul 03, 2023 | Team Udayavani |

ಮೇಲುಕೋಟೆ: ಶ್ರೀಚಲುವನಾರಾಯಣ ಸ್ವಾಮಿಯವರ ಐತಿಹಾಸಿಕ ಶ್ರೀಕೃಷ್ಣರಾಜಮುಡಿ ಉತ್ಸವ ಜು.9ರಂದು ರಾತ್ರಿ 7ಕ್ಕೆ ವಿಜೃಂಭಣೆಯಿಂದ ನಡೆಯಲಿದೆ. ಧಾರ್ಮಿಕ ಕೈಂಕರ್ಯಗಳು ಜು.4ರಂದು ಅಂಕುರಾರ್ಪಣೆಯೊಂದಿಗೆ ಆರಂಭವಾಗಿ ಜು.15ರಂದು ನಡೆಯುವ ಪುಷ್ಪಯಾಗದೊಂದಿಗೆ ಮುಕ್ತಾಯವಾಗಲಿದೆ.

Advertisement

ಮೈಸೂರು ದೊರೆ ಮುಮ್ಮುಡಿ ಶ್ರೀಕೃಷ್ಣರಾಜ ಒಡೆಯರ್‌ ಆಷಾಢ ಮಾಸದಲ್ಲಿ ತಮ್ಮ ಕುಲದೈವ ಚೆಲುವನಾರಾಯಣ ಸ್ವಾಮಿಗೆ ಬ್ರಹ್ಮೋತ್ಸವ ಆರಂಭಿಸಿ, ಉತ್ಸವದ ನಾಲ್ಕನೇ ದಿನವಾದ ಗರುಡೋತ್ಸವಕ್ಕೆ ಅಮೂಲ್ಯ ಕೆಂಪು, ಬಿಳಿವಜ್ರಗಳಿಂದ ಕೂಡಿದ ವಜ್ರಖಚಿತ ಕೃಷ್ಣರಾಜಮುಡಿ ಕಿರೀಟ ಮತ್ತು ಮೈಸೂರು ರಾಜಲಾಂಛನ ಗಂಡುಬೇರುಂಡ ಪದಕವನ್ನು ಕೊಡುಗೆಯಾಗಿ ನೀಡಿದ್ದರು.

ಪಾರಾಯಣ, ಮಂಗಳವಾದ್ಯದೊಂದಿಗೆ ಉತ್ಸವ: ಬ್ರಹ್ಮೋತ್ಸವ ನೆನಪಿಗಾಗಿ ಕಲ್ಯಾಣಿ ಸಮುತ್ಛಯದಲ್ಲಿ ಅತ್ಯಾಕರ್ಷಕ 16 ಕಂಬಗಳ ಭುವನೇಶ್ವರಿ ಮಂಟಪವನ್ನೂ ನಿರ್ಮಿಸಿ, ತೀರ್ಥ ಸ್ನಾನದ ದಿನ ಅಲ್ಲಿಯೇ ಚೆಲುವನಾರಾಯಣ ಸ್ವಾಮಿಗೆ ಪೂಜೆ ನಡೆಯಬೇಕೆಂಬ ವ್ಯವಸ್ಥೆ ಮಾಡಿದ್ದರು. ಇಂಥ ಐಹಿಹಾಸಿಕ ಮಹೋತ್ಸವದಲ್ಲಿ ಪ್ರಮುಖ ದಿನವಾದ ನಾಲ್ಕನೇ ತಿರುನಾಳ್‌ ದಿನವಾದ ಜು.9ರಂದು ರಾತ್ರಿ ಕೃಷ್ಣರಾಜಮುಡಿ ಉತ್ಸವದಂದು ರಾತ್ರಿ 7ಕ್ಕೆ ಶ್ರೀದೇವಿಭೂದೇವಿ ಸಮೇತನಾಗಿ ಅರ್ಧಚಂದ್ರ ಪ್ರಭಾವಳಿಯಲ್ಲಿ ಗರುಡಾರೂಢನಾದ ಚೆಲುವನಾರಾಯಣ ಸ್ವಾಮಿಗೆ ಕೃಷ್ಣರಾಜಮುಡಿ ಕಿರೀಟ ಧರಿಸಿ, ದಿವ್ಯ ಪ್ರಬಂಧ ಪಾರಾಯಣ ಮತ್ತು ಮಂಗಳ ವಾದ್ಯದೊಂದಿಗೆ ಉತ್ಸವ ನೆರವೇರಿಸಲಾಗುವುದು.

ಪುಷ್ಪಯಾಗದೊಂದಿಗೆ ಸಂಪನ್ನ: ವೈರಮುಡಿ ಜಾತ್ರಾ ಮಹೋತ್ಸವ ಕಲ್ಯಾಣೋತ್ಸವದಿಂದ ಆರಂಭವಾಗಿ ಮಹಾಭಿಷೇಕದೊಂದಿಗೆ ಮುಕ್ತಾಯವಾದರೆ, ಆಷಾಢ ಮಾಸದ ಕೃಷ್ಣರಾಜಮುಡಿ ಜಾತ್ರಾ ಮಹೋತ್ಸವ ಮೈಸೂರು ದೊರೆಯಾಗಿದ್ದ ಮುಮ್ಮುಡಿ ಶ್ರೀಕೃಷ್ಣರಾಜ ಒಡೆಯರ್‌ ಜನ್ಮ ನಕ್ಷತ್ರದಂದು ಮಹಾಭಿಷೇಕದೊಂದಿಗೆ ಆರಂಭ ವಾಗಿ ಪುಷ್ಪಯಾಗದೊಂದಿಗೆ ಸಂಪನ್ನವಾಗಲಿದೆ. ಬೆರಳೆಣಿಕೆಯ ಭಕ್ತರಷ್ಟೇ ಭಾಗವಹಿಸುವ ಕೃಷ್ಣರಾಜಮುಡಿ ಬ್ರಹ್ಮೋತ್ಸವ ಮಹಾರಾಜರ ಹೆಸರಲ್ಲಿ ಹತ್ತು ದಿನಗಳ ಕಾಲ ನಡೆಯುವ ಕರ್ನಾಟಕದ ಏಕೈಕ ಜಾತ್ರಾ ಮಹೋತ್ಸವವಾಗಿದೆ.

ಮಹಾರಾಜರ ವರ್ಧಂತಿ ಮಹಾಭಿಷೇಕ ಕಲ್ಯಾಣೋತ್ಸವ: ಜು.5ರಂದು ಬುಧವಾರ ಆಷಾಢ ದ್ವಿತೀಯ ಶ್ರವಣ ನಕ್ಷತ್ರ ಕೂಡಿದ ದಿನದಂದು ಮುಮ್ಮುಡಿ ಶ್ರೀಕೃಷ್ಣರಾಜ ಒಡೆಯರ್‌ ವರ್ಧಂತಿಯ ನಿಮಿತ್ತ ಮೂಲಮೂರ್ತಿ ಚೆಲ್ವ ತಿರುನಾರಾಯಣ ಸ್ವಾಮಿ ಮತ್ತು ಯೋಗನರಸಿಂಹ ಸ್ವಾಮಿಗೆ ಮಹಾಭಿಷೇಕ ಸಂಜೆ ಅಮ್ಮನವರ ಸನ್ನಿಧಿಯ ಸಭಾಂಗಣದಲ್ಲಿ ಉತ್ಸವ ಮೂರ್ತಿ ಚೆಲುವನಾರಾಯಣ ಸ್ವಾಮಿ ಮತ್ತು ಕಲ್ಯಾಣ ನಾಯಕಿ ಅಮ್ಮನವರಿಗೆ ಕಲ್ಯಾಣೋತ್ಸವ ನೆರವೇರಲಿದೆ. ಇದೇ ದಿನ ಅವಸರ-ರಕ್ಷಾ ಬಂಧನ ಮತ್ತು ದ್ವಜಪ್ರತೀಷ್ಠೆ ನಡೆಯಲಿದೆ.

Advertisement

ಜಾತ್ರಾ ಮಹೋತ್ಸವದ ವಿವರ: ಬ್ರಹ್ಮೋತ್ಸವದಲ್ಲಿ ಜು.6ರ ಬೆಳಗ್ಗೆ ಧ್ವಜಾರೋಹಣ, 8ರಂದು ಸಂಜೆ ನಾಗವಲ್ಲೀ ಮಹೋತ್ಸವ ನರಂದಾಳಿಕಾರೋಹಣ, 11ರಂದು ಸಂಜೆ ಗಜೇಂದ್ರಮೋಕ್ಷ, 12ರಂದು ಬೆಳಗ್ಗೆ ರಥೋತ್ಸವ, 14ರಂದು ಅವಭೃತ, ಪಟ್ಟಾಭಿಷೇಕ, ಪಡಿಮಾಲೆ ನೆರವೇರಲಿದೆ. ಈ ಜಾತ್ರಾ ಮಹೋತ್ಸವದಲ್ಲಿ ತೆಪ್ಪೋತ್ಸವ, ರಥೋತ್ಸವಗಳು ಸಾಂಕೇತಿಕ ಉತ್ಸವವಾಗಿ ಆಚರಿಸಲ್ಪಟ್ಟರೆ ಜಾತ್ರೆಯ ಎಲ್ಲ ಉತ್ಸವಗಳು ಸಹ ಆಡಂಬರವಿಲ್ಲದೆ ಅತ್ಯಂತ ಸರಳವಾಗಿ ನಡೆಯುತ್ತವೆ.

Advertisement

Udayavani is now on Telegram. Click here to join our channel and stay updated with the latest news.

Next