ಕಲಬುರಗಿ: ಕನಿಷ್ಠ ವೇತನ ಹಾಗೂ ಬಡ್ತಿ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳಿಗಾಗಿ ಆಗ್ರಹಿಸಿ ರಾಜ್ಯ ಗ್ರಾಪಂ ನೌಕರರ ಸಂಘದ ನೇತೃತ್ವದಲ್ಲಿ ಗ್ರಾಪಂ ನೌಕರರು ಜಿಪಂ ಚಲೋ ಚಳವಳಿ ನಡೆಸಿದರು.
ಜಿಪಂ ಸಿಇಒ ಮೂಲಕ ಪಂಚಾಯತಿ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿದ ಪ್ರತಿಭಟನಾಕಾರರು, ಗ್ರಾಪಂ ನೌಕರರಿಗೆ ಇಎಫ್‌ಎಂಎಸ್ ಮೂಲಕ ವೇತನ ಪಾವತಿ ಕ್ರಮ ಸ್ವಾಗತಾರ್ಹವಾಗಿದೆ. ಆದರೂ ಅನುಮೋದಿತ ಸಿಬ್ಬಂದಿಗಳಿಗೆ ಮಾತ್ರ ಈ ಆದೇಶ ಸೀಮಿತವಾಗಿದ್ದು ಎಲ್ಲರಿಗೂ ಈ ಸೌಲಭ್ಯ ವಿಸ್ತರಿಸಬೇಕು ಎಂದು ಆಗ್ರಹಿಸಿದರು.
ಈ ಮೊದಲು ಸರ್ಕಾರ ಕನಿಷ್ಠ ಕೂಲಿ ನೀಡುವ ನಿರ್ಧಾರ ಕೈಗೊಂಡಿತ್ತು. ಆದರೂ ಸರ್ಕಾರ ಹೊರಡಿಸಿದ ಪತ್ರ ಎಲ್ಲ ನೌಕರರಿಗೆ ಕನಿಷ್ಠ ವೇತನ ಕಡ್ಡಾಯ ಎಂಬ ನಿಯಮಕ್ಕೆ ವಿರುದ್ಧವಾಗಿದೆ. 2016ರ ಮಾರ್ಚ್ 9ರಲ್ಲೇ ಅನುಮೋದನೆಗೂ ಕನಿಷ್ಠ ಕೂಲಿ ಪಾವತಿಗೂ ಸಂಬಂಧವಿಲ್ಲ ಎಂಬಂತಾಗಿದೆ. ಆದ್ದರಿಂದ ಬಾಕಿ ಉಳಿದ ವೇತನವನ್ನು ತೆರಿಗೆ ಸಂಗ್ರಹದಲ್ಲೇ ಶೇ. 40ರಷ್ಟು ವೇತನ ಪಾವತಿಸಬೇಕು ಎಂದು ಒತ್ತಾಯಿಸಿದರು.
2014ರ ಸೆ. 10ಕ್ಕೂ ಮೊದಲು ನೇಮಕವಾದ ಎಲ್ಲ ಸಿಬ್ಬಂದಿಗಳನ್ನು (ಕನಿಷ್ಠ 10 ವರ್ಷಗಳ ಸೇವೆ ಸಲ್ಲಿಸಿದವರಿಗೆ) ಒಂದು ಸಲಕ್ಕೆ ಅನುಮೋದನೆ ನೀಡಬೇಕು. ಈ ಬಗ್ಗೆ ಪ್ರಸ್ತಾವನೆ ಸಲ್ಲಿಸದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು.
ಬಿಲ್ ಕಲೆಕ್ಟರ್, ಗುಮಾಸ್ತರ ಬಡ್ತಿಯ ಶೈಕ್ಷಣಿಕ ಅರ್ಹತೆಯನ್ನು ಎಸ್‌ಎಸ್‌ಎಲ್‌ಸಿ ಬದಲು ಪಿಯುಸಿ ಎಂದು ಪರಿಗಣಿಸಿ ನೋಟಿಫಿಕೇಶನ್ ಹೊರಡಿಸಿದೆ. ಇದರಿಂದ ಎಸ್‌ಎಸ್‌ಎಲ್‌ಸಿಯ ಸುಮಾರು 4 ಸಾವಿರ ನೌಕರರು ಬಡ್ತಿ ಹೊಂದದೆ ತೊಂದರೆಗೆ ಈಡಾಗಿದ್ದು, ಈ ನಿಬಂಧನೆ ತೆಗೆದುಹಾಕುವಂತೆ ಒತ್ತಾಯಿಸಿದರು.
ಜಿಲ್ಲಾಧ್ಯಕ್ಷ ಬಾಬುರಾವ ಧುತ್ತರಗಾಂವ, ಶಿವಾನಂದ ಕವಲಗಾ, ಉಮಾಶಂಕರ ಕಡಣಿ ಹಾಗೂ ವಿವಿಧೆಡೆಯಿಂದ ಆಗಮಿಸಿದ್ದ ಗ್ರಾಪಂ ನೌಕರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.