Advertisement

ರಾಕ್‌ಬಾಲ್‌ ಸಾಧಕನಿಗೆ ಹಣ ಹೊಂದಿಸುವುದೇ ಸವಾಲು

06:00 PM Apr 03, 2018 | Team Udayavani |

ಪುತ್ತೂರು : ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ರಾಕ್‌ಬಾಲ್‌ ಆಟಗಾರರು ಅಂತಾರಾಷ್ಟ್ರೀಯ ಸ್ಪರ್ಧೆಗೆ ತೆರಳುತ್ತಿದ್ದಾರೆ. ಇದರಲ್ಲಿ ಕರಾವಳಿಯ ಪ್ರತಿಭೆ ವಿನೀತ್‌ ಶೆಟ್ಟಿ ಕೂಡ ಇದ್ದು, ಸಿದ್ಧತೆ, ತರಬೇತಿ ಹಾಗೂ ಪ್ರಯಾಣಕ್ಕೆ ಹಣ ಹೊಂದಿಸುವುದೇ ಅವರಿಗೆ ಸವಾಲಾಗಿದೆ.

Advertisement

ವಿನೀತ್‌ ಶೆಟ್ಟಿ ಅವರು ಕಟಪಾಡಿ ಕೆವಿಎಸ್‌ಎಂ ಕಾಲೇಜಿನಲ್ಲಿ ಅಂತಿಮ ವರ್ಷದ ಬಿ.ಕಾಂ. ವ್ಯಾಸಂಗ ಮಾಡುತ್ತಿದ್ದಾರೆ. ವಾಲಿಬಾಲ್‌ ಆಟದಲ್ಲಿ ತೊಡಗಿಸಿಕೊಂಡಿದ್ದ ಇವರನ್ನು ರಾಕ್‌ಬಾಲ್‌ ಆಟ ಆಕರ್ಷಿಸಿದೆ. ರಾಕ್‌ಬಾಲ್‌ ಹಾಗೂ ವಾಲಿಬಾಲ್‌ ಆಟಗಳು ಪರಸ್ಪರ ಸಾಮ್ಯ ಹೊಂದಿರುವುದರಿಂದ ಮೊದಲ ಆಟದಲ್ಲೇ ತಂಡಕ್ಕೆ ಆಯ್ಕೆಯಾದರು. ತಂಡದಲ್ಲಿ ಐದು ಜನರಿದ್ದು, ಎಪ್ರಿಲ್‌ ತಿಂಗಳಿನಲ್ಲಿ ಶ್ರೀಲಂಕಾದ ಕೊಲಂಬೋದಲ್ಲಿ ನಡೆಯುವ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಆಡಲಿದ್ದಾರೆ.

ರಾಕ್‌ಬಾಲ್‌ ಅಮೆರಿಕದ ಆಟ. ಭಾರತದಲ್ಲಿ ದೆಹಲಿ ಹಾಗೂ ಪಂಜಾಬ್‌ನಲ್ಲಿ ಮಾತ್ರ ಆಡುತ್ತಾರೆ. ರಾಜ್ಯದಲ್ಲಿ 3-4 ವರ್ಷದಿಂದ ಪ್ರಚಲಿತದಲ್ಲಿದೆ. ಹಿಂದಿನ ವರ್ಷ ರಾಜ್ಯದ ತಂಡ ರಾಷ್ಟ್ರೀಯ ಪಂದ್ಯದಲ್ಲಿ ಕಾಣಿಸಿಕೊಂಡಿತ್ತು. ಆದರೆ ಅಂತಾರಾಷ್ಟ್ರೀಯ ಮಟ್ಟಕ್ಕೆ ಹೋಗಲು ಸಾಧ್ಯವಾಗಿರಲಿಲ್ಲ. ಆದರೆ ಈ ಕೊರತೆಯನ್ನು ವಿನೀತ್‌ ಶೆಟ್ಟಿ ತಂಡ ನೀಗಿಸಿದೆ.

ಹೈದರಾಬಾದ್‌ನಲ್ಲಿ ನಡೆದ ರಾಷ್ಟ್ರೀಯ ಪಂದ್ಯದಲ್ಲಿ ಪ್ರಥಮ ಸ್ಥಾನ ಪಡೆದು, ಕೊಲಂಬೋದಲ್ಲಿ ನಡೆಯುವ ಸ್ಪರ್ಧೆಗೆ ತಂಡ ಆಯ್ಕೆಯಾಗಿದೆ. ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ಹೇರಿರುವ ಕಾರಣದಿಂದ ಇನ್ನೂ ದಿನಾಂಕ ನಿಗದಿಯಾಗಿಲ್ಲ. ಅಷ್ಟರಲ್ಲಿ ಸಾಕಷ್ಟು ಹಣ ಹೊಂದಿಸಿಕೊಳ್ಳುವ ಅನಿವಾರ್ಯತೆ ವಿನೀತ್‌ ಶೆಟ್ಟಿ ಎದುರಿದೆ.

ಹಣ ಹೊಂದಿಸಲು ಪರದಾಟ
ಕಾಪುವಿನಲ್ಲಿ ನರ್ಸರಿ ನೋಡಿಕೊಳ್ಳುತ್ತಿರುವ ಜಗನ್ನಾಥ ಡಿ. ಶೆಟ್ಟಿ ಹಾಗೂ ಯಶೋದಾ ಶೆಟ್ಟಿ ದಂಪತಿಯ ಪುತ್ರ ವಿನೀತ್‌. ಇವರ ಅಣ್ಣ ಉದ್ಯೋಗ ನಿಮಿತ್ತ 3 ತಿಂಗಳ ಹಿಂದಷ್ಟೇ ದುಬೈ ಹಾದಿ ಹಿಡಿದಿದ್ದಾರೆ. ರಾಜ್ಯ ಅಮೆಚೂರ್‌ ರಾಕ್‌ಬಾಲ್‌ ಅಸೋಸಿಯೇಶನ್‌ಗೆ 40 ಸಾವಿರ ರೂ. ಹಣ ಕಟ್ಟಬೇಕು. ಉಳಿದಂತೆ ಕನಿಷ್ಠ 20 ಸಾವಿರ ರೂ. ಇತರ ಖರ್ಚುಗಳಿವೆ. ಪಂದ್ಯಾಟಕ್ಕೆ ಮೊದಲು ಬೆಂಗಳೂರಿನಲ್ಲಿ ನಡೆಯುವ ತರಬೇತಿಯಲ್ಲಿ ಪಾಲ್ಗೊಳ್ಳಬೇಕಿದೆ. ಸಾಕಷ್ಟು ಹಣದ ಅಗತ್ಯವಿದ್ದು, ಅದನ್ನು ಹೊಂದಿಸುವ ಶಕ್ತಿಯಿಲ್ಲದೆ ದಾನಿಗಳ ನಿರೀಕ್ಷೆಯಲ್ಲಿದೆ ವಿನೀತ್‌ ಕುಟುಂಬ. ದಾನಿಗಳು ವಿಜಯಾ ಬ್ಯಾಂಕ್‌ನಲ್ಲಿರುವ ತಾಯಿ ಯಶೋದಾ ಅವರ ಖಾತೆಗೆ (ನಂ. 111601011003380) ಹಣ ಪಾವತಿಸಬಹುದು. ಐಎಫ್‌ಎಸ್‌ಸಿ ಕೋಡ್‌ ವಿಐಜೆ 80001116.

Advertisement

ಶೀಘ್ರದಲ್ಲೇ  ಶ್ರೀಲಂಕಾಗೆ
ವಾಲಿಬಾಲ್‌ ಆಟ ಆಡುತ್ತಿರುವುದರಿಂದ ರಾಕ್‌ಬಾಲ್‌ ಆಟಕ್ಕೆ ಸುಲಭವಾಗಿ ಆಯ್ಕೆಗೊಂಡಿದ್ದೇನೆ. ಇದೇ ತಿಂಗಳಲ್ಲಿ ಶ್ರೀಲಂಕಾಗೆ ತೆರಳಬೇಕಿದೆ. ಆದರೆ ಮನೆಯ ಪರಿಸ್ಥಿತಿಯಲ್ಲಿ ಹಣ ಹೊಂದಿಸಲು ಕಷ್ಟವಾಗುತ್ತಿದೆ. ಆದ್ದರಿಂದ ದಾನಿಗಳಿಗಾಗಿ ಹುಡುಕಾಡುತ್ತಿದ್ದೇವೆ.
– ವಿನೀತ್‌ ಶೆಟ್ಟಿ, ಕಾಪು

ಬಹುಮುಖ ಪ್ರತಿಭೆ
ಕ್ರೀಡಾ ಕ್ಷೇತ್ರದ ಜತೆ ಜತೆಗೆ ಸಿನಿರಂಗದಲ್ಲೂ ವಿನೀತ್‌ ಗುರುತಿಸಿಕೊಂಡಿದ್ದಾರೆ. ಪದವಿ ವ್ಯಾಸಂಗದ ಜತೆಗೆ “ಬಲೆ ತೆಲಿಪಾಲೆ’ ಸೀಸನ್‌ 5ರಲ್ಲಿ ಕಾಣಿಸಿಕೊಂಡಿದ್ದರು. ಇನ್ನಷ್ಟೇ ತೆರೆ ಕಾಣಬೇಕಾಗಿರುವ “ಗಂಧದ ಕುಡಿ’ ಸಿನಿಮಾದ ಕನ್ನಡ ಮತ್ತು ಹಿಂದಿ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. “ದೇಯಿ ಬೈದ್ಯೆàತಿ’ ಸಿನಿಮಾದಲ್ಲಿ ಬೇಟೆಗೆ ಹೋಗುವ ದೃಶ್ಯದಲ್ಲಿ, “ಸೂಜಿದಾರ’ ಹಾಗೂ “ಬೆಲ್‌ ಬಾಟಂ’ನಲ್ಲಿ ಜ್ಯೂನಿಯರ್‌ ಕಲಾವಿದನಾಗಿ ದುಡಿದಿದ್ದಾರೆ.

  ಗಣೇಶ್‌ ಎನ್‌. ಕಲ್ಲರ್ಪೆ

Advertisement

Udayavani is now on Telegram. Click here to join our channel and stay updated with the latest news.

Next