Advertisement
ಅಂದರೆ ಸಾಮಾನ್ಯ ಕಾಲಕ್ಕಿಂತ 20 ದಿನ ಮೊದಲೇ ಬೇಸಿಗೆ ಆರಂಭವಾಗಿದೆ. ಒಂದೊಮ್ಮೆ ಜೂನ್‌ನಲ್ಲಿ ಆರಂಭವಾಗಬೇಕಾದ ಮುಂಗಾರು ಕಳೆದ ವರ್ಷದಂತೆ ಎರಡು ವಾರಗಳ ಕಾಲ ಮುಂದೆ ಹೋದರೆ ಈ ಬಾರಿ ಬೇಸಿಗೆ ಕಾಲದ ಅವಧಿ ನಾಲ್ಕು ತಿಂಗಳಿಗಿಂತ ಹೆಚ್ಚಾಗಲಿದೆ. ಈಗಾಗಲೇ ಬಿಸಿಲಿನ ತೀವ್ರತೆ ಏರಿಕೆಯಾಗಿದ್ದು, ನೀರಿನ ಅಭಾವವೂ ಅಲ್ಲಲ್ಲಿ ಕಾಣಿಸಿಕೊಳ್ಳಲಾರಂಭಿಸಿದ್ದು, ಪರಿಸ್ಥಿತಿಯನ್ನು ಜಲಮಂಡಳಿ ಹೇಗೆ ನಿರ್ವಹಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.
Related Articles
Advertisement
ಬಿಬಿಎಂಪಿಯ 110 ಹಳ್ಳಿಗಳಲ್ಲಿ ಅಂತರ್ಜಲ ಕುಸಿದಿದ್ದು, ಬಹಳಷ್ಟು ಕೊಳವೆಬಾವಿಗಳು ಬತ್ತಿ ಹೋಗುವ ಸಾಧ್ಯತೆ ಇರುತ್ತದೆ. ಜತೆಗೆ ಕುಡಿಯುವ ನೀರು ಯೋಜನೆಯಡಿ ಕೊಳವೆ ಮೂಲಕ ನೀರು ಪೂರೈಕೆಯಾಗುವ 29 ಹಳ್ಳಿಗಳಿಗೂ ವಿತರಣೆಯಲ್ಲಿ ವ್ಯತ್ಯಯವಾಗುವ ಆತಂಕ ಮೂಡಿದೆ.
ಸವಾಲಾಗಿ ಸ್ವೀಕರಿಸಿ, ಅಗತ್ಯ ಸಿದ್ಧತೆ: ಪ್ರತಿ ವರ್ಷದಂತೆಯೇ ಈ ಬಾರಿಯೂ ಬೇಸಿಗೆ ಎದುರಿಸಲು ಜಲಮಂಡಳಿ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದು, ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಜಲಮಂಡಳಿ ಅಧ್ಯಕ್ಷ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.
ಈ ಕುರಿತು “ಉದಯವಾಣಿ’ಗೆ ಮಾಹಿತಿ ನೀಡಿದ ಅವರು, ಮುಂದಿನ ಜೂನ್‌ವರೆಗೂ ಪರಿಸ್ಥಿತಿ ನಿರ್ವಹಣೆಗೆ ಅಗತ್ಯವಿರುವಷ್ಟು 6 ಟಿಎಂಸಿ ನೀರು ಈಗಾಗಲೇ ಕಾವೇರಿ ಹಾಗೂ ಕಬಿನಿ ಜಲಾಶಯದಲ್ಲಿ ಲಭ್ಯವಿದೆ. ನಿತ್ಯ ನಗರಕ್ಕೆ 1,350 ದಶಲಕ್ಷ ಲೀ. ನೀರು ಪೂರೈಕೆ ಮಾಡುತ್ತಿದ್ದು, ಬೇಸಿಗೆ ಹಿನ್ನೆಲೆ ಬೇಡಿಕೆ ಹೆಚ್ಚಾದರೆ 1,450 ದಶಲಕ್ಷ ಲೀ.ವರೆಗೂ ಪೂರೈಸಬಹುದಾಗಿದೆ.
ಜತೆಗೆ ಜಲಮಂಡಳಿಯ 63 ಟ್ಯಾಂಕರ್‌ಗಳಿದ್ದು, ಅವುಗಳು ಬೇಸಿಗೆ ಅವಧಿಯಲ್ಲಿ ನಿರಂತರ ಸೇವೆ ಸಲ್ಲಿಸಲಿವೆ. ಮುಖ್ಯವಾಗಿ ವಾಣಿಜ್ಯ ಬಳಕೆಗಳಿಗಿಂತ ಸಾರ್ವಜನಿಕ ವಲಯದ ಬಳಕೆಗೆ ಆದ್ಯತೆ ನೀಡಲಾಗುತ್ತದೆ ಎಂದು ತಿಳಿಸಿದರು.
ವಿಶೇಷ ಅಧಿಕಾರಿಗಳು: ಈ ಬಾರಿ ವಲಯವಾರು ವಿಶೇಷ ಅಧಿಕಾರಿಗಳು ಸ್ಥಳದಲ್ಲಿದ್ದುಕೊಂಡು ನೀರಿನ ನಿರ್ವಹಣೆ ಹಾಗೂ ವಿತರಣೆಯಲ್ಲಿ ಯಾವುದೇ ಸಮಸ್ಯೆಯಾಗದಂತೆ ನಿಗಾ ವಹಿಸಬೇಕು ಎಂದು ಸೂಚಿಸಲಾಗಿದೆ. 110 ಹಳ್ಳಿಗಳಲ್ಲಿ ಯಾವುದೇ ಹಳ್ಳಿಗಳಲ್ಲಿ ಕೊಳವೆಬಾವಿಗಳು ಬತ್ತಿ ಹೋಗಿ ನೀರಿನ ಅಭಾವ ಉಂಟಾದರೆ ಟ್ಯಾಂಕರ್‌ನಿಂದ ಪೂರೈಸುವಂತೆ ಸೂಚಿಸಲಾಗಿದೆ.
ಉಳಿದಂತೆ ನೀರನ್ನು ಪಂಪ್ ಮಾಡುವ ಸಂದರ್ಭದಲ್ಲಿ ವಿದ್ಯುತ್ ವ್ಯತ್ಯಯವಾದರೆ ನೀರು ನಷ್ಟವಾಗುವ ಸಾಧ್ಯತೆ ಹೆಚ್ಚಿದ್ದು, ಸಮಯಕ್ಕೆ ಸರಿಯಾಗಿ ಪೂರೈಕೆಯಲ್ಲಿ ತುಸು ವ್ಯತ್ಯಯವಾಗಬಹುದು. ಈ ಹಿಂದೆ ಸತತ ಬರಗಾಲದ ದಿನವನ್ನು ನಿಭಾಯಿಸಿರುವ ಅನುಭದ ಆಧಾರದ ಮೇಲೆ ಮುಂದಿನ ಪರಿಸ್ಥಿತಿ ನಿಭಾಯಿಸಲಾಗುವುದು ಎಂದು ಜಲಮಂಡಳಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ಜಲಮಂಡಳಿ ಪಾಲಿಗೆ ವರದಾನ: 110 ಹಳ್ಳಿಗಳಿಗೆ ನೀರು ಪೂರೈಸುವ ಯೋಜನೆಯಡಿ ಸದ್ಯ 29 ಹಳ್ಳಿಗಳಲ್ಲಿ ನೀರಿನ ಸಂಪರ್ಕಕ್ಕೆ ಜಲಮಂಡಳಿ ಅರ್ಜಿ ಆಹ್ವಾನಿಸಿದೆ. ಆದರೆ, ಹೊಸ ಸಂಪರ್ಕಕ್ಕೆ ಶುಲ್ಕ- ವೆಚ್ಚ ದುಬಾರಿ, ಪ್ರತಿ ತಿಂಗಳು ಬಿಲ್ ಪಾವತಿಸಬೇಕು ಎಂಬ ಕಾರಣಗಳಿಂದ ಆ ಹಳ್ಳಿಗಳ ಜನ ಜಲಮಂಡಳಿ ನೀರು ಪಡೆಯಲು ಹಿಂದೇಟು ಹಾಕುತ್ತಿದ್ದರು. ಈವರೆಗೂ ಸುಮಾರು ನಾಲ್ಕೈದು ಸಾವಿರ ಮಂದಿಯಷ್ಟೇ ಸಂಪರ್ಕ ಪಡೆದಿದ್ದಾರೆ. ಇದೀಗ ಕುಡಿಯುವ ನೀರಿನ ಅಗತ್ಯತೆ ಹಿನ್ನೆಲೆಯಲ್ಲಿ ಹೆಚ್ಚು ಮಂದಿ ಸಂಪರ್ಕ ಪಡೆಯುವ ಲೆಕ್ಕಾಚಾರದಲ್ಲಿ ಜಲಮಂಡಳಿ ಇದೆ.
ಮುಂದಿನ ಮೂರ್‍ನಾಲ್ಕು ತಿಂಗಳಿಗೆ ಅಗತ್ಯವಿರುವ 6 ಟಿಎಂಸಿ ನೀರು ಕೆಆರ್‌ಎಸ್ ಹಾಗೂ ಕಬಿನಿ ಜಲಾಶಯದಲ್ಲಿ ಸಂಗ್ರಹವಿದೆ. ನಗರದಲ್ಲಿ ಅಗತ್ಯವಿರುವ ಕಡೆ ಟ್ಯಾಂಕರ್ ಸೇವೆ ಹೆಚ್ಚಿಸಲಾಗುವುದು. ಸಾರ್ವಜನಿಕರ ಸಮಸ್ಯೆಗಳಿಗೆ ಅಧಿಕಾರಿಗಳು ತ್ವರಿತವಾಗಿ ಸ್ಪಂದಿಸುವಂತೆ ಸೂಚಿಸಲಾಗಿದ್ದು, ಬೆಂಗಳೂರಿನ ಜನತೆ ಯಾವುದೇ ಆತಂಕ ಪಡುವ ಅಗತ್ಯವಿಲ್ಲ.-ತುಷಾರ್ ಗಿರಿನಾಥ್, ಜಲಮಂಡಳಿ ಅಧ್ಯಕ್ಷ * ಜಯಪ್ರಕಾಶ್ ಬಿರಾದಾರ್