Advertisement

ವಿನಯ್ ಡೈರಿಯಲ್ಲಿ ‘ಯಜಮಾನ’ನ ಭರ್ಜರಿ ಬಂಡಿ ಸವಾರಿ

10:01 PM Aug 14, 2020 | Hari Prasad |

ಧಾರವಾಡ: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಹೇಳಿ ಕೇಳಿ ಪ್ರಾಣಿ ಪ್ರೇಮಿ.

Advertisement

ಅವರ ಸ್ವಂತ ಫಾರ್ಮ್ ನಲ್ಲಿ ವಿವಿಧ ತಳಿಯ ದನಗಳು, ಎತ್ತುಗಳು, ಕುದುರೆಗಳು ಸೇರಿದಂತೆ ವಿವಿಧ ರೀತಿಯ ಪ್ರಾಣಿ ಪಕ್ಷಿಗಳನ್ನು ಸಾಕುತ್ತಿದ್ದಾರೆ.

ಇಷ್ಟು ಮಾತ್ರವಲ್ಲದೇ ದರ್ಶನ್ ಅವರು ವನ್ಯ ಜೀವಿಗಳ ಕುರಿತಾಗಿಯೂ ಅಪಾರವಾದ ಕಾಳಜಿಯನ್ನು ಹೊಂದಿರುವ ಒಬ್ಬ ನಟನಾಗಿ ತಮ್ಮ ಅಭಿಮಾನಿಗಳಿಗೆ ಮಾದರಿಯಾಗಿದ್ದಾರೆ.

ಇಂತಹ ಪ್ರಾಣಿ ಪ್ರಿಯ ಸ್ವಭಾವದ ದರ್ಶನ್ ಅವರು ಧಾರವಾಡ ನಗರದ ಹೊರವಲಯದಲ್ಲಿ ಇರುವ ಮಾಜಿ ಸಚಿವ ವಿನಯ ಕುಲಕರ್ಣಿ ಅವರ ‘ವಿನಯ್  ಡೈರಿ’ಗೆ ಭೇಟಿ ನೀಡಿ ಕೆಲ ಸಮಯ ಕಳೆದರು.

ಕೋವಿಡ್ 19 ಸೋಂಕಿನ ಹಿನ್ನಲೆಯಲ್ಲಿ ಬೆಂಗಳೂರಿನಿಂದ ದೂರ ಉಳಿದು ಉತ್ತರ ಕರ್ನಾಟಕದ ಪ್ರೇಕ್ಷಣೀಯ ಸ್ಥಳ ಪ್ರವಾಸ ಕೈಗೊಂಡಿರುವ ದರ್ಶನ್ ಅವರು ಶುಕ್ರವಾರದಂದು ವಿನಯ್ ಡೈರಿಯಲ್ಲಿ ವಾಸ್ತವ್ಯ ಹೂಡಿದ್ದರು.

Advertisement

ಬೆಳಗ್ಗೆಯಿಂದಲೇ ಡೈರಿಯಲ್ಲಿನ ಹೈನೋದ್ಯಮ, ಹೊಸ ತಳಿಯ ಆಕಳು ಮತ್ತು ಜಾನುವಾರುಗಳನ್ನು ವೀಕ್ಷಣೆ ಮಾಡಿದ ದರ್ಶನ್ ಬಳಿಕ ಆಂಧ್ರದ ಭರ್ಜರಿ ತಳಿ ಹೋರಿಗಳನ್ನು ಹೂಡಿದ ಖಾಲಿಗಾಡಾದಲ್ಲಿ ಹತ್ತಿ ಡೈರಿಯ ಸುತ್ತ ಸುತ್ತಾಡಿ ಸಂಭ್ರಮಿಸಿದರು. ಈ ವೇಳೆ ಅವರ ಅಭಿಮಾನಿಗಳು ಕೂಡ ಅವರಿಗೆ ಸಾಥ್ ಕೊಟ್ಟಿದ್ದು ವಿಶೇಷವಾಗಿತ್ತು.


ಮಾಜಿ ಸಚಿವ ವಿನಯ್‌ರೊಂದಿಗೆ ಹಲವಾರು ವರ್ಷಗಳ ಸ್ನೇಹ ಹೊಂದಿರುವ ದರ್ಶನ, ಉತ್ತರ ಕರ್ನಾಟಕದ ಭಾಗಕ್ಕೆ ಬಂದಾಗಲೆಲ್ಲ ವಿನಯ್ ಡೈರಿಗೆ ಸಾಮಾನ್ಯವಾಗಿ ಭೇಟಿ ನೀಡುತ್ತಿರುತ್ತಾರೆ.

ಇತ್ತ ನಟ ದರ್ಶನ್ ಅವರು ಡೈರಿಯಲ್ಲಿದ್ದಾರೆ ಎನ್ನುವ ಸುದ್ದಿ ಸುತ್ತಲಿನ ಹಳ್ಳಿಗಳಿಗೆ ಹರಡುತ್ತಿದ್ದಂತೆಯೇ ಅವರ ಸಾವಿರಾರು ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ನೋಡಲು ಡೈರಿಯತ್ತ ಆಗಮಿಸಿದರು.

ಆದರೆ ಕೋವಿಡ್ 19 ಮುನ್ನೆಚ್ಚರಿಕೆಯ ಹಿನ್ನೆಲೆಯಲ್ಲಿ ದರ್ಶನ್ ಅವರ ಭೇಟಿ ಅಭಿಮಾನಿಗಳಿಗೆ ಸಾಧ್ಯವಾಗದೇ ನಿರಾಶೆ ಉಂಟಾಯಿತು. ಪ್ರಾರಂಭದಲ್ಲಿ ದಚ್ಚು ತಮ್ಮ ಕೆಲ ಅಭಿಮಾನಿಗಳೊಂದಿಗೆ ಫೋಟೋ ತೆಗೆಸಿಕೊಂಡರು. ಆದರೆ ಬಳಿಕ ಅಭಿಮಾನಿಗಳು ಹೆಚ್ಚಿನ ಪ್ರಮಾಣದಲ್ಲಿ ಬರತೊಡಗಿದ್ದರಿಂದ ಅವರನ್ನೆಲ್ಲಾ ಫಾರ್ಮ್ ಹೊರಗಡೆಯೇ ತಡೆಯಲಾಯಿತು.

ವಿನಯ್ ಡೈರಿಯಲ್ಲಿ ಮೇಕೆ ಖರೀದಿಸಿದ ದರ್ಶನ್
ಪ್ರಾಣಿ ಪ್ರಿಯರಾಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ ಅವರು ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಒಡೆತನದ ಧಾರವಾಡ ಹೊರವಲಯದಲ್ಲಿನ ವಿನಯ್ ಡೈರಿ ಯಿಂದ ಶುಕ್ರವಾರ ಮೇಕೆಯೊಂದನ್ನು ಖರೀದಿಸಿದ್ದಾರೆ.

ದೇಶದಲ್ಲೇ ಅತೀ ದೊಡ್ಡ ಡೈರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಡೈರಿಗೆ ಶುಕ್ರವಾರ ಭೇಟಿಕೊಟ್ಟ ದರ್ಶನ್, ಇಲ್ಲಿ ವೈಜ್ಞಾನಿಕ ವಿಧಾನದಿಂದ ಸಾಕಾಣಿಕೆ ಮಾಡಲಾಗಿರುವ ಜಮುನಾ ಪುರಿ ತಳಿಯ 25ಕ್ಕೂ ಹೆಚ್ಚು ಮೇಕೆಗಳನ್ನು ಖರೀದಿಸಿ ತಮ್ಮ ಮೈಸೂರು ಫಾರ್ಮ್ ಗೆ ಕೊಂಡೊಯ್ದರು.

ಈ ವೇಳೆ ಮಾತನಾಡಿದ ದರ್ಶನ್, ನಾನು ಮೇಕೆ ಖರೀದಿಸಲು ಇಲ್ಲಿಗೆ ಬಂದಿದ್ದೇನೆ. ವಿನಯ್ ನನ್ನ ಆತ್ಮೀಯರು, ನಮ್ಮದು ಅವರದು ಹಳೆಯ ಗೆಳೆತನ, ಅವರ ಡೈರಿಯಲ್ಲಿ ಎತ್ತಿನಗಾಡಿ, ಕುದರೆ ಸವಾರಿ ಮಾಡುವುದು ನನಗೆ ಬಹಳ ಇಷ್ಟ ಎಂದರು.

ನಂತರ ಮಾತಾನಾಡಿದ ಮಾಜಿ ಸಚಿವ ವಿನಯ್ ಕುಲಕರ್ಣಿ, ದರ್ಶನ ಪ್ರಾಣಿ ಪ್ರಿಯರಾಗಿದ್ದು ನಮ್ಮ ಡೈರಿಯಿಂದ ಜಮುನಾ ಪುರಿ ತಳಿಯ ಮೇಕೆಗಳನ್ನು ಖರೀದಿಸಿದ್ದಾರೆ. ಅವರು ಜೀವನದಲ್ಲಿ ಕಷ್ಟಪಟ್ಟು ಮೇಲೆ ಬಂದಿದ್ದಾರೆ. ಅವರು ನಟರಾಗೊ ಮುಂಚೆ ಹೈನುಗಾರಿಕೆ ಮಾಡಿದ್ದರು. ಅವರ ತಂದೆ ಕಾಲದಿಂದಲೂ ನಾವು ಆತ್ಮೀಯರು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next