Advertisement
“ನಿಜಕ್ಕೂ ನಾನು ಅದೃಷ್ಟವಂತ ‘ – ಹೀಗೆ ಖುಷಿಯಿಂದ ಹೇಳಿಕೊಳ್ಳುತ್ತಾರೆ ಚಿಂತನ್. ಚಿಂತನ್ ಬೇರ್ಯಾರೂ ಅಲ್ಲ, “ಚಕ್ರವರ್ತಿ’ ಚಿತ್ರದ ನಿರ್ದೇಶಕರು. “ಚಕ್ರವರ್ತಿ’ ಅವರ ನಿರ್ದೇಶನದ ಚೊಚ್ಚಲ ಸಿನಿಮಾ. ಚೊಚ್ಚಲ ಸಿನಿಮಾದಲ್ಲೇ ಸ್ಟಾರ್ ನಟನ ಹಾಗೂ ಬಿಗ್‌ಬಜೆಟ್‌ನ ಸಿನಿಮಾ ನಿರ್ದೇಶಿಸಿದ ಖುಷಿ ಚಿಂತನ್‌ಗಿದೆ. ಅದಕ್ಕಿಂತ ಹೆಚ್ಚಾಗಿ ಈಗಾಗಲೇ ಸಿನಿಮಾ ಬಗ್ಗೆ ಹೆಚ್ಚುತ್ತಿರುವ ಕ್ರೇಜ್ ಕಂಡು ಚಿಂತನ್ ಖುಷಿಯಾಗಿದ್ದಾರೆ. “ಮೊದಲ ಸಿನಿಮಾದಲ್ಲೇ ಒಳ್ಳೆಯ ತಂಡ ಸಿಕ್ಕಿದೆ. ಎಲ್ಲರ ಪ್ರೋತ್ಸಾಹದಿಂದ ಸಿನಿಮಾ ನಾವು ಅಂದುಕೊಂಡಂತೆ ಬಂದಿದೆ. ದರ್ಶನ್ ಅಭಿಮಾನಿಗಳು ಏನು ಬಯಸುತ್ತಾರೋ ಆ ಎಲ್ಲಾ ಅಂಶಗಳು ಈ ಸಿನಿಮಾದಲ್ಲಿದೆ’ ಎನ್ನುತ್ತಾರೆ ಚಿಂತನ್. ಚಿಂತನ್, ದರ್ಶನ್ ಕ್ಯಾಂಪ್‌ಗೆ ಹೊಸದಾಗಿ ಸೇರಿಕೊಂಡವರಲ್ಲ. ಅನೇಕ ವರ್ಷಗಳಿಂದ ದರ್ಶನ್ ಸಿನಿಮಾಗಳಿಗೆ ಕೆಲಸ ಮಾಡಿಕೊಂಡು ಬಂದಿದ್ದಾರೆ.
ಈಗಾಗಲೇ “ಚಕ್ರವರ್ತಿ’ಯಲ್ಲಿ ದರ್ಶನ್ ಅವರ ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಂಡಿರುವ ಫೋಟೋಗಳು ರಾರಾಜಿಸುತ್ತಿವೆ. ಮೂರು ಗೆಟಪ್ ಗಳಲ್ಲಿ ದರ್ಶನ್ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದು, ಮೂರಕ್ಕೆ ಮೂರೂ ಗೆಟಪ್‌ಗ್ಳನ್ನು ಅಭಿಮಾನಿಗಳು ಇಷ್ಟಪಟ್ಟಿದ್ದಾರೆ. ಅಷ್ಟಕ್ಕೂ ಒಂದೇ ಸಿನಿಮಾದಲ್ಲಿ ದರ್ಶನ್ ಮೂರು ಅವತಾರವೆತ್ತಲು ಕಾರಣವೇನು ಎಂದರೆ ಕಥೆ ಎಂದು ಉತ್ತರಿಸುತ್ತಾರೆ ಚಿಂತನ್.
Related Articles
Advertisement
ಅದು ಇಂಟರ್‌ನ್ಯಾಶನಲ್ ಲೆವೆಲ್‌ನ ಡಾನ್. ಒಬ್ಬ ಸಾಮಾನ್ಯ ವ್ಯಕ್ತಿ ಪರಿಸ್ಥಿತಿಯಿಂದಾಗಿ ಹೇಗೆ ಡಾನ್ ಆಗುತ್ತಾನೆ ಮತ್ತು ಅದಕ್ಕೆ ಕಾರಣವಾಗುವ ಅಂಶಗಳೇನೂ ಎಂಬುದನ್ನು ಇಲ್ಲಿ ಹೇಳಲಾಗಿದೆ. ತನ್ನ ಸುತ್ತಲ ಪರಿಸರದಲ್ಲಿ ಡಾನ್ ಆಗಿ ಮೆರೆಯುತ್ತಿದ್ದ ವ್ಯಕ್ತಿ ಮುಂದೆ ಹೇಗೆ ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆಯುತ್ತಾನೆ, ವಿದೇಶಗಳಲ್ಲೂ ತನ್ನ ಸಾಮ್ರಾಜ್ಯವನ್ನು ಹೇಗೆ ವಿಸ್ತರಿಸುತ್ತಾನೆ ಎಂಬ ಅಂಶ ಇಲ್ಲಿ ತುಂಬಾ ಕುತೂಹಲಕಾರಿಯಾಗಿದೆ’ ಎನ್ನುತ್ತಾರೆ ಚಿಂತನ್. ಹಾಗಾದರೆ ಇದು ಔಟ್ ಅಂಡ್ ಔಟ್ ಆ್ಯಕ್ಷನ್ ಸಿನಿಮಾನಾ ಎಂಬ ಪ್ರಶ್ನೆ ಬರುತ್ತದೆ. ಅದಕ್ಕೆ ಉತ್ತರ ಖಂಡಿತಾ ಅಲ್ಲ, ಇದೊಂದು ಫ್ಯಾಮಿಲಿ ಎಂಟರ್‌ಟೈನರ್ ಎನ್ನುತ್ತಾರೆ ಅವರು. “ಚಿತ್ರದಲ್ಲಿ ಮಾಸ್ ಹಾಗೂ ಕ್ಲಾಸ್ ಪ್ರೇಕ್ಷಕರಿಗೆ ಬೇಕಾಗುವಂತಹ ಅಂಶಗಳಿವೆ. ಇಲ್ಲಿ ಸೆಂಟಿಮೆಂಟ್‌ಗೂ ಹೆಚ್ಚು ಒತ್ತುಕೊಡಲಾಗಿದೆ. ಆರಂಭದಲ್ಲಿ ಲವ್, ಮದುವೆ … ಹೀಗೆ ಫ್ಯಾಮಿಲಿ ಡ್ರಾಮಾ ಕೂಡಾ ಇದೆ. ಖಂಡಿತಾ ಇದು ಪ್ರೇಕ್ಷಕರಿಗೆ ಇಷ್ಟವಾಗುತ್ತದೆ. ಆ ಕಾರಣದಿಂದಲೇ ಇಲ್ಲಿ ತುಂಬಾ ಮೆಲೋಡಿ ಹಾಡುಗಳಿವೆ. ಹೊಸದಾಗಿ ಮದುವೆಯಾದ ಗಂಡ-ಹೆಂಡತಿಯ ನಡುವಿನ ಪ್ರೀತಿ ಸೇರಿದಂತೆ ಸಾಕಷ್ಟು ಸೂಕ್ಷ್ಮ ಅಂಶಗಳನ್ನು ಇಲ್ಲಿ ಹೇಳಲಾಗಿದೆ’ ಎಂದು ಸಿನಿಮಾ ಬಗ್ಗೆ ಹೇಳುತ್ತಾರೆ ಚಿಂತನ್. ಮೊದಲೇ ಹೇಳಿದಂತೆ ಚಿತ್ರದಲ್ಲಿ ದರ್ಶನ್ ಇಂಟರ್‌ನ್ಯಾಶನಲ್ ಲೆವೆಲ್‌ನ ಡಾನ್. ಹಾಗಾಗಿ, ಮಲೇಷ್ಯಾ ಹಾಗೂ ಥಾಯ್ಲೆಂಡ್‌ಗಳಲ್ಲಿ 20 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ಒಬ್ಬ ಡಾನ್ ಬೇರೆ ದೇಶಗಳಲ್ಲೂ ತನ್ನ ಸಾಮ್ರಾಜ್ಯವನ್ನು ಹೇಗೆ ವಿಸ್ತರಿಸಿರುತ್ತಾನೆ ಎಂಬುದನ್ನು ಇಲ್ಲಿ ತೋರಿಸಲಾಗಿದೆಯಂತೆ.
ಮೊದಲ ಚಿತ್ರದಲ್ಲಿ ಬಹುತಾರಾಗಣಚಿಂತನ್ ಖುಷಿಗೆ ಮತ್ತೂಂದು ಕಾರಣವೆಂದರೆ ಚಿತ್ರದ ತಾರಾಬಳಗ. ಮೊದಲ ಚಿತ್ರದಲ್ಲೇ ದರ್ಶನ್‌ರಂತಹ ಸ್ಟಾರ್ ನಟನಿಗೆ ಸಿನಿಮಾ ಮಾಡಿದ ಖುಷಿ ಒಂದು ಕಡೆಯಾದರೆ ಮೊದಲ ಸಿನಿಮಾದಲ್ಲಿ ಬಹುತಾರಾಗಣ ಸಿಕ್ಕ ಖುಷಿ ಮತ್ತೂಂದು ಕಡೆ. ಚಿತ್ರದಲ್ಲಿ ದೀಪಾ ಸನ್ನಿಧಿ ನಾಯಕಿಯಾದರೆ, ಸೃಜನ್ ಲೋಕೇಶ್, ಆದಿತ್ಯ, ಯಶಸ್, ಕುಮಾರ್ ಬಂಗಾರಪ್ಪ, ಚಾರುಲತಾ, ಶರತ್ ಲೋಹಿತಾಶ್ವ, ದಿನಕರ್ ತೂಗುದೀಪ ಸೇರಿದಂತೆ ಅನೇಕರು ಈ ಚಿತ್ರದಲ್ಲಿ ನಟಿಸಿದ್ದಾರೆ. ಮೊದಲ ಚಿತ್ರದಲ್ಲೇ ಇಷ್ಟೊಂದು ಮಂದಿ ಕಲಾವಿದರ ಜೊತೆ ಕೆಲಸ ಮಾಡಿದ ಖುಷಿ ಚಿಂತನ್‌ಗಿದೆ. “ಇಂತಹ ಅವಕಾಶ ಎಲ್ಲರಿಗೂ ಸಿಗಲ್ಲ. ಆದರೆ ನನಗೆ ಮೊದಲ ಸಿನಿಮಾದಲ್ಲೇ ಸಿಕ್ಕಿದೆ. ದರ್ಶನ್ ಸೇರಿದಂತೆ ಪ್ರತಿಯೊಬ್ಬರ ಪ್ರೋತ್ಸಾಹದಿಂದ ಸಿನಿಮಾ ನನ್ನ ಕಲ್ಪನೆಯಂತೆ ಮೂಡಿಬಂದಿದೆ’ ಎಂದು ಹೇಳುತ್ತಾರೆ. ಈ ಚಿತ್ರದ ಮೂಲಕ ದರ್ಶನ್ ಸಹೋದರ ದಿನಕರ್ ತೂಗುದೀಪ ಕೂಡಾ ಬಣ್ಣ ಹಚ್ಚಿದ್ದಾರೆ. “ದಿನಕರ್ ವಿಲನ್ ಆಗಿ ನಟಿಸಿದ್ದಾರೆ. ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಒಬ್ಬ ಒಳ್ಳೆಯ ವಿಲನ್ ಸಿಗುತ್ತಾರೆ ಎಂಬ ವಿಶ್ವಾಸವಿದೆ’ ಎನ್ನುತ್ತಾರೆ ಚಿಂತನ್. ಇನ್ನು, ನಿರ್ಮಾಪಕ ಸಿದ್ಧಾಂತ್ ಬಗ್ಗೆ ಹೇಳಲು ಚಿಂತನ್ ಮರೆಯುವುದಿಲ್ಲ. “ಒಬ್ಬ ನಿರ್ದೇಶಕನಾಗಿ ನಾನು ಏನೇ ಕನಸು ಕಂಡಿರಬಹುದು. ಅದನ್ನು ತೆರೆಮೇಲೆ ತರುವಲ್ಲಿ ನಿರ್ಮಾಪಕನ ಸಹಕಾರ ತುಂಬಾ ಮುಖ್ಯವಾಗುತ್ತದೆ. ಆ ನಿಟ್ಟಿನಲ್ಲಿ ನಿರ್ಮಾಪಕ ಸಿದ್ಧಾಂತ್ ಅವರ ಸಿನಿಮಾ ಪ್ರೀತಿಯನ್ನು ಮೆಚ್ಚಲೇಬೇಕು. ಸಿನಿಮಾ ಇವತ್ತು ಇಷ್ಟೊಂದು ಅದ್ಧೂರಿಯಾಗಿ ಮೂಡಿಬಂದಿದೆ ಎಂದರೆ ಅದಕ್ಕೆ ಕಾರಣ ಸಿದ್ಧಾಂತ್. ನಿರ್ದೇಶಕನಾಗಿ ನಾನು ಕೇಳಿದ್ದೆಲ್ಲವನ್ನು ನೀಡಿದ್ದಾರೆ’ ಎನ್ನುತ್ತಾರೆ. “ಚಕ್ರವರ್ತಿ’ ಚಿತ್ರ ಏಪ್ರಿಲ್ 14 ರಂದು ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ. ಈಗಾಗಲೇ ಬಿಝಿನೆಸ್ ವಿಷಯದಲ್ಲೂ “ಚಕ್ರವರ್ತಿ’ ಸುದ್ದಿ ಮಾಡುತ್ತಿದ್ದು, ಸುಮಾರು 350 ರಿಂದ 400 ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. “ಸಿನಿಮಾದ ನಿರೀಕ್ಷೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಚಿತ್ರ ಆ ನಿರೀಕ್ಷೆಯ ಮಟ್ಟವನ್ನು ತಲುಪುತ್ತದೆ ಎಂಬ ವಿಶ್ವಾಸವಿದೆ’ ಎನ್ನುವುದು ಚಿಂತನ್ ಮಾತು.