Advertisement

“ಆನ್‌ಲೈನ್‌ನಲ್ಲಿ ಭಾಷೆಯ ಬೋಧನೆ ಸವಾಲಿನ ಕೆಲಸ’

04:52 PM Aug 04, 2021 | Team Udayavani |

ಮುಂಬಯಿ: ಭಾಷೆ ಎನ್ನುವುದು ಜೀವಂತವಾದುದು. ಭಾಷೆಯ ಒಡಲೊಳಗೆ ಒಂದು ಸಂಸ್ಕೃತಿ ನೆಲೆಸಿರುತ್ತದೆ. ಜಗತ್ತಿನ ಅತೀ ಪ್ರಾಚೀನ ಭಾಷೆಗಳಲ್ಲಿ ಕನ್ನಡವೂ ಒಂದು. ಕನ್ನಡ ಭಾಷೆಯ ಹಿರಿಮೆ-ಗರಿಮೆಯನ್ನು ಆಳವಾಗಿ ಆನ್‌ಲೈನ್‌ ಮೂಲಕ ಕಲಿಸುವುದು ಕಠಿನವಾದ ಸವಾಲಿನ ಕೆಲಸ ಎಂದು ಮುಂಬಯಿ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ. ಎನ್‌. ಉಪಾಧ್ಯ ಅಭಿಪ್ರಾಯಪಟ್ಟರು.

Advertisement

ಕಲಿನ ಕ್ಯಾಂಪಸ್‌ ವಿದ್ಯಾನಗರಿಯ ರಾನಡೆ ಭವನದ ಕನ್ನಡ ವಿಭಾಗದಲ್ಲಿ ಅವರು ಇತ್ತೀಚೆಗೆ ಕನ್ನಡ ವಿಭಾಗದ ಮೂಲಕ ಆನ್‌ಲೈನ್‌ನಲ್ಲಿ ಕನ್ನಡವನ್ನು ಕಲಿಸಿದ ಗೀತಾ ಮಂಜುನಾಥ್‌ ಅವರನ್ನು ಶಾಲು ಹೊದೆಸಿ ಗ್ರಂಥ ಗೌರವ ನೀಡಿ ಮಾತನಾಡಿ,ಭಾಷೆಯ ಕಲಿಕೆ ತುಂಬಾ ಸವಾಲಿನದು. ಕನ್ನಡೇತರರಿಗೆ ಕನ್ನಡ ಕಲಿಸುವುದು ಸಾಮಾನ್ಯದ ಸಂಗತಿಯಲ್ಲ. ಕೊರೊನಾ ಕಾಲದಲ್ಲಿ ಕಂಪ್ಯೂಟರ್‌ ಮೂಲಕ ಅಂತರ್ಜಾಲವನ್ನು ಬಳಸಿಕೊಂಡು ಕನ್ನಡವನ್ನು ಲೀಲಾಜಾಲವಾಗಿ ಕಲಿಸಿದ ಗೀತಾ ಮಂಜುನಾಥ್‌ ಅವರ ಶ್ರಮ ಸಾರ್ಥಕವಾಗಿದೆ. ಭಾಷೆಯನ್ನು ಕಲಿಸುವಾಗ ಅಧ್ಯಾಪಕರು ಕ್ರಿಯಾಶೀಲರಾಗಿ ಹೊಸ ಹೊಸ ತಂತ್ರಗಳನ್ನು ಹಾಗೂ ವಿಧಾನಗಳನ್ನು ಅಳವಡಿಸಿಕೊಂಡರೆ ಕಲಿಕೆಯಲ್ಲಿ ಉತ್ಸಾಹ ಮೂಡುತ್ತದೆ. ಈ ಕೆಲಸವನ್ನು ಗೀತಾ ಮಂಜುನಾಥ್‌ ಅವರು ಯಶಸ್ವಿಯಾಗಿ ಮಾಡಿದ್ದಾರೆ ಎಂದು ತಿಳಿಸಿದರು.

ಗೀತಾ ಮಂಜುನಾಥ್‌ ಮಾತನಾಡಿ, ವಿಭಾಗದ ಮೂಲಕ ಆನ್‌ಲೈನ್‌ನಲ್ಲಿ ಕನ್ನಡ ಕಲಿಸಿದ್ದು ನನಗೆ ಹೊಸ ಅನುಭವ ನೀಡಿದೆ. ತಾಂತ್ರಿಕತೆಯ ಇತಿಮಿತಿಗಳ ನಡುವೆ, ಹಲಗೆ, ಬಳಪದ ಬದಲು ವಿಶೇಷ ಪರಿಕರಗಳನ್ನು ಇಟ್ಟುಕೊಂಡು, ಕಂಪ್ಯೂಟರ್‌ ಪರದೆಯ ಮೂಲಕವೇ ವಿದ್ಯಾರ್ಥಿಗಳೊಂದಿಗೆ ಸಂವಹನ ಮಾಡುತ್ತಾ ಭಾಷೆ ಕಲಿಸುವುದು ಕಷ್ಟವೇನೋ ಸರಿ. ಆದರೆ ಕೊರೊನಾ ಸಂಕಷ್ಟದ ಕಾಲ ನಮಗೆಲ್ಲ ಇಂತಹ ಅನೇಕ ಹೊಸ ಸಾಧ್ಯತೆಗಳನ್ನು ತೆರೆದಿಟ್ಟಿದೆ. ಆರಂಭದಲ್ಲಿ ಕಷ್ಟವೆನಿಸಿದರೂ ಇಷ್ಟುಪಟ್ಟು ಮಾಡುತ್ತಾ ಹೋದಾಗ ಆನ್‌ಲೈನ್‌ನಲ್ಲಿ ಬಹಳ
ಸುಲಭವಾಗಿ ಕನ್ನಡ ಹೇಳಿಕೊಡಬಹುದು ಎಂದು ಅನಿಸಿದ್ದು ನಿಜ. ಮನೆಯಲ್ಲೇ ಕುಳಿತು ಆಸಕ್ತಿಯಿಂದ ಕಲಿಯುವವರಿಗೆ ಆನ್‌ಲೈನ್‌ ತರಗತಿಗಳು ಒಂದು ಉತ್ತಮ ಅವಕಾಶವಾಗಿದೆ ಎಂದು ಅಭಿಪ್ರಾಯಪಟ್ಟು, ಮೊದಲ ಬಾರಿಗೆ ಆನ್‌ಲೈನ್‌ ತರಗತಿ ನಡೆಸಲು ಅವಕಾಶ ಮಾಡಿಕೊಟ್ಟು ಪ್ರೋತ್ಸಾಹಿಸಿದ ಡಾ| ಉಪಾಧ್ಯ ಹಾಗೂ ಕಾಲಕಾಲಕ್ಕೆ ಸೂಕ್ತ ಸಲಹೆ ಸೂಚನೆ ನೀಡಿ ಸಹಕರಿಸಿದ ಡಾ| ಪೂರ್ಣಿಮಾ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.

ಚಿತ್ರಕಲಾವಿದ ಜಯ ಸಿ. ಸಾಲ್ಯಾನ್‌, ದಿನಕರ ನಂದಿ ಚಂದನ್‌, ಸುಶೀಲಾ ಎಸ್‌. ದೇವಾಡಿಗ, ರೇಖಾ ಮಾನೆ ಉಪಸ್ಥಿತರಿದ್ದರು.ವಿಭಾಗದ ಪ್ರಾಧ್ಯಾಪಕಿ ಡಾ| ಪೂರ್ಣಿಮಾ ಎಸ್‌. ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.ಕನ್ನಡ ಕಲಿಯಲು ಆಸಕ್ತಿ ಹೊಂದಿರುವವರು ಮುಂಬಯಿ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಡಾ| ಜಿ. ಎನ್‌. ಉಪಾಧ್ಯ(9220212578), ಡಾ| ಪೂರ್ಣಿಮಾ ಶೆಟ್ಟಿ (9594553402),ಗೀತಾ ಮಂಜುನಾಥ್‌ (8369653432) ಅವರನ್ನು ಸಂಪರ್ಕಿಸಲು ವಿಭಾಗವು ಪ್ರಕಟನೆಯಲ್ಲಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next