Advertisement

ಬರ -ಮಾಧ್ಯಮದ ಸವಾಲುಗಳು

03:45 AM Jan 09, 2017 | Harsha Rao |

ತೀವ್ರ ûಾಮದಿಂದ ಜನ ಸಂಕಷ್ಟದಲ್ಲಿದ್ದಾರೆ, ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದೆ. ದನಕರು ಕಸಾಯಿ ಖಾನೆಗೆ,  ರೈತರು ಗುಳೆ ಹೋಗುತ್ತಿದ್ದಾರೆಂದು ವರದಿ ಒಪ್ಪಿಸುವುದು ನಮಗೆ ಗೊತ್ತಿದೆ. ಈಗ ಇಷ್ಟೇ ಸಾಲುವುದಿಲ್ಲ, ಬರ ಗೆಲ್ಲುವ ತಂತ್ರಗಳನ್ನು ವಿವರಿಸಬೇಕಾಗುತ್ತದೆ. ಬರಗೆದ್ದ ರೈತರ ಬೆಳಕಿನಲ್ಲಿ ಇನ್ನುಳಿದವರಿಗೆ ಬದುಕುವ ದಾರಿ ತೋರಿಸುವ ಮಹತ್ವದ ಹೊಣೆ ನಮ್ಮ ಮೇಲಿದೆ.
 
ಮುಂಗಾರು ಸರಿಯಾಗಿ ಸುರಿದಿಲ್ಲ, ಹಿಂಗಾರು ಕೈಕೊಟ್ಟಿದೆ. ಬೆಳೆ ಕೊಯ್ಲಿನ ಕಾಲಕ್ಕೆ ಅಬ್ಬರದ ಮಳೆ ಸುರಿದು ಕಾಳು, ಮೇವುಗಳೆಲ್ಲ ನಷ್ಟವಾಗಿ ಬರದ ಸಂಕಷ್ಟ ಹೆಚ್ಚುವುದು ನಮಗೆಲ್ಲ ತಿಳಿದಿದೆ. ಜಾನುವಾರು ಮೇವಿನ ಅಭಾವ , ಕುಡಿಯುವ ನೀರಿನ ಕೊರತೆ, ಒಣಗಿದ ನದಿ, ವನ್ಯಜೀವಿಗಳ ಸಾವು ಢಾಳಾಗಿ ಬರದ ಚಿತ್ರ ಎದುರಿಡುತ್ತವೆ. 

Advertisement

ಭತ್ತ, ಕಬ್ಬು, ಅಡಿಕೆ ನೋಡಿದರೂ ಸಂಕಟ ದರ್ಶನ ಸಾಧ್ಯವಿದೆ. ಬರವನ್ನು ಜನರೆದುರು ಇಡುವಾಗ ನಾವು ಮಾಧ್ಯಮದವರು  ಬಿರುಕು ನೆಲ, ಸಣಕಲು ಎತ್ತು, ಆಗಸ ನೋಡುವ ರೈತರ ಚಿತ್ರ ಲಾಗಾಯ್ತಿನಿಂದ ಬಳಸುತ್ತಿದ್ದೇವೆ. ಬದುಕಿಗೆ ಗತಿಯಿಲ್ಲದೇ ಹಳ್ಳಿ ತೊರೆದು ವಲಸೆ ಹೊರಟ ಕುಟುಂಬಗಳು ದಾಖಲೆಗೆ ಸಿಲುಕುತ್ತವೆ. 

 ಬರ ಅವಲೋಕನ ಕುರಿತು ಸಚಿವರು, ಜಿಲ್ಲಾಧಿಕಾರಿಗಳು ಸಂಘಟಿಸುವ ಸಭೆಗಳಲ್ಲಂತೂ ಬರದ ಸಂಕಟ ಕತೆಗಿಂತ ಪರಿಹಾರದ ಹಣದ ಮೊತ್ತ ವಿಜೃಂಬಿಸುತ್ತದೆ. ಇದು ನೇರವಾಗಿ ಮಾಧ್ಯಮಗಳಲ್ಲಿ ಹರಿದಾಡುತ್ತದೆ. ಹಣ ಬಂದರೆ ಬರವೇ ಪರಿಹಾರವಾದಂತೆ, ಮಳೆ ಸುರಿದಂತೆ ವಿಚಿತ್ರ ಸಂಭ್ರಮ ಕಾಣಿಸುತ್ತದೆ. ದಿನವಿಡೀ ಕಚೇರಿಯ ಕಾಗದ ಪತ್ರ, ಸಭೆ, ಸುತ್ತೋಲೆ, ವರ್ಗಾವಣೆ, ಪ್ರಮೋಶನ್‌ಗಳಲ್ಲಿ ಮುಳುಗಿದ ಅಧಿಕಾರಿಗಳು ಗಿಳಿಪಾಠದಂತೆ ಅಂಕಿ ಸಂಖ್ಯೆಯ ವರದಿ ಒಪ್ಪಿಸುತ್ತಾರೆ. ಇವರ ವರದಿ ಹೇಗಿರುತ್ತದೆಂದರೆ ಮೇವಿನ ಲಭ್ಯತೆ ಸಾಕಷ್ಟಿದೆ, ಆದರೂ ತುರ್ತು ಅಗತ್ಯಕ್ಕೆ ಇಂತಿಷ್ಟು ಟನ್‌ ಬೇಕಾಗಬಹುದೆಂದು ಕಾಗದದ ಲೆಕ್ಕ ನೀಡುತ್ತಾರೆ. ಮುಂಗಾರಿಗೆ ಮುಂಚೆ ಈ ವರ್ಷ ಇಷ್ಟು ಲಕ್ಷ ಹೆಕ್ಟೇರ್‌ ಭತ್ತ, ಜೋಳ ಬೆಳೆಯುವ ಸಿದ್ಧತೆ ನಡೆದಿದೆಯೆಂದು ಕೃಷಿ ಆಯುಕ್ತರು ಘೋಷಿಸುವ ವರದಿಯಂತಿರುತ್ತದೆ. ಮಣ್ಣಿಗೆ ಇಳಿಯದ ಮಂದಿ ಹುಂಬು ಧೈರ್ಯದಲ್ಲಿ ಮಾತಾಡುವುದು ನಾಡಿನ  ದೊಡ್ಡ ಪವಾಡದಂತೆ ಗೋಚರಿಸುತ್ತದೆ. ಬರ ಸಭೆಗಳಲ್ಲಿಯೂ ಪ್ರತಿ ಜಿಲ್ಲೆಗೆ ಮೇವು, ಕುಡಿಯುವ ನೀರು, ಜನರಿಗೆ ಉದ್ಯೋಗ ನೀಡಲು ಎಷ್ಟು ಕೋಟಿ ಹಣ ಬಂದಿದೆಯೆಂದು  ಸಾರುತ್ತಾರೆ. ಅದರಲ್ಲಿಯೂ ಚುನಾವಣೆ ಎದುರಿದ್ದರೆ ಎಂಥ ಕಡು ಬರವನ್ನು  ಸರಕಾರ ಅಧಿಕಾರಿಗಳ ಮೂಲಕ ಕಾಗದ ಪತ್ರಗಳ ದಾಖಲೆಯಲ್ಲಿ ಮುಚ್ಚಲು ಹರಸಾಹಸ ನಡೆಸುತ್ತದೆ. ಜನರ ಕಷ್ಟ ಪರಿಹಾರಕ್ಕೆ ಸದಾ ಸನ್ನದ್ಧವಾಗಿದೆಯೆಂದು ಹೇಳಲು ಆಡಳಿತ ಪಕ್ಷ ಯಾವತ್ತೂ ಪ್ರಯತ್ನಿಸುತ್ತದೆ. ವಿರೋಧ ಪಕ್ಷಗಳು ತೀವ್ರತೆಯ ವಿವರಗಳನ್ನು ಹೆಚ್ಚಿಸಿ ಆಡಳಿತ ಪಕ್ಷ ಏನೂ ಮಾಡುತ್ತಿಲ್ಲವೆಂದು ಸಾಬೀತು ಪಡಿಸಲು ಮಾಧ್ಯಮ ಸಮರ ನಡೆಸುತ್ತವೆ. ನಿಜವಾಗಿ ಜನರ ಕತೆ ಏನಾಗಿದೆಯೆಂದು ನೋಡಬೇಕಾದವರು ನಾವುಗಳು.

 ಮಾಧ್ಯಮಗಳು ಬರ ಪರಿಸ್ಥಿತಿಯ ಕಣ್ಗಾವಲು ಕಾರ್ಯ ಮಾಡುತ್ತವೆ. ಬರ ಬಂದಾಗ ಚಿತ್ರ ಎದುರಿಡುವುದಷ್ಟೇ ಕೆಲಸವಲ್ಲ. ಮುಂಗಾರು ಮಳೆ ಕೊರತೆ ತಿಳಿದಾಗ ರೈತರಿಗೆ ಭವಿಷ್ಯದ ಜಲ ಸಂಕಟದ ಕುರಿತು ಮುನ್ನೆಚ್ಚರಿಕೆ ಮೂಡಿಸಲು ಪ್ರಯತ್ನಗಳು ಬೇಕು. ಹರಿಯುವ ನೀರನ್ನು ತಡೆಯಲು, ಕೆರೆ ತುಂಬಿಸಲು ಗಮನಸೆಳೆಯಬೇಕು. ಬೆಳೆ ಬದಲಾವಣೆ, ನೀರಿನ ಮಿತ ಬಳಕೆಯ ಜಾಗೃತಿ ಮೂಡಿಸಲು ಕೃಷಿ ನಿರ್ವಹಣೆಯ ಅನುಭವವೂ ಬೇಕಾಗುತ್ತದೆ. ಬರದ ವಿಚಾರದಲ್ಲಿ ಮಾಧ್ಯಮದ ಜನಕ್ಕೆ ಎಲ್ಲವೂ ತಿಳಿದಿರಬೇಕಾಗಿಲ್ಲ. ನಾವು ಸರ್ವಜ್ಞರಾಗಲು ಯಾವತ್ತೂ ಸಾಧ್ಯವಿಲ್ಲ. ಆದರೆ ರಾಜ್ಯದಲ್ಲಿ ಈ ವಿಚಾರದಲ್ಲಿ ಸರಿಯಾಗಿ ತಿಳಿದವರು ಯಾರೆಂದು ಗೊತ್ತಿರಬೇಕು. ಪರಿಣಿತರ, ತಜ್ಞರ ಒಡನಾಟವಿದ್ದಾಗ ಜಾnನ ಹರಿದು ಬರುತ್ತದೆ. ನೂರಾರು ಕಿಲೋ ಮೀಟರ್‌ ದೂರದ ಬೀದರ್‌, ಕಲಬುರಗಿ, ಬೆಳಗಾವಿಯ ರೈತರ ಪರಿಸ್ಥಿತಿ ಹೇಗಿದೆಯೆಂದು ಬೆಂಗಳೂರಲ್ಲಿ ಕುಳಿತ ಮಾಧ್ಯಮಕ್ಕೆ ತಿಳಿಯುವುದು ಈಗ ಸಾಧ್ಯವಿದೆ. ನಿರಂತರ ಸಂಪರ್ಕ ಕೌಶಲ್ಯ ಬೆಳೆಸಿಕೊಂಡು ಜಾಗೃತಿಯ ಕೆಲಸ ಮಾಡಬಹುದು. ಪ್ರವಾಸದಿಂದ ಪರಿಸ್ಥಿತಿಯ ಅರಿವು ಪಡೆದು ಜನರೆದುರು ಇಡಬಹುದು.

 ನಮ್ಮ ಹಳ್ಳಿಗಳಲ್ಲಿ 90-100 ವರ್ಷ ದಾಟಿದ ಹಿರಿಯರಿದ್ದಾರೆ. ಇವರು ಈ ನೆಲದ ಅತಿಹೆಚ್ಚು ಬರ ಕಂಡವರು, ಸಜ್ಜೆ ಬರ, ಬರಸಾಥ್‌ ಬರ ವಿವರಿಸಬಲ್ಲವರು. ಕಾಲದ ಬದುಕು, ಆಹಾರ, ಬರಗೆದ್ದ ದಾರಿಗಳ ಅಪೂರ್ವ ಜಾnನ ಸಂಪತ್ತು ಇವರಲ್ಲಿದೆ. ಬದು ನಿರ್ಮಿಸುವುದು, ಮರ ಬೆಳೆಸುವುದು, ಕೆರೆ, ಒಡ್ಡು ಹಾಕುವುದಕ್ಕೆ ಮಣ್ಣಿಗಿಳಿದವರ ಅನುಭವ ಬೇಕಾಗುತ್ತದೆ. ಮೇವಿನ ಕೊರತೆಯಾದಾಗ ಕಾಡು ಮರಗಿಡಗಳ ಸೊಪ್ಪಿನಲ್ಲಿ ದನಕರು ಬದುಕಿಸಿದ ತಂತ್ರ ತಿಳಿಯಲು ಸರಕಾರಿ ಕಾಗದ ಪತ್ರ ನೆರವಾಗುವುದಿಲ್ಲ. ಅತ್ಯಂತ ಕಡಿಮೆ ನೀರಿನಲ್ಲಿ ಬೆಳೆಯುವ ಸಿರಿಧಾನ್ಯಗಳು, ಬರದ ಕಾಲಕ್ಕೆ ಕೆರೆ ನೀರನ್ನು ಊರೆಲ್ಲ ಹಂಚಿ ಬದುಕುವ ಕೋಲಾರದ ಧಾಮಾಷಾ ಪದ್ಧತಿಗಳಿವೆ. ಬರದಲ್ಲಿ ಬದುಕು ಹೇಗಿತ್ತೆಂಬುದು ನಾಳಿನ ಜೀವನ ಮಾರ್ಗಕ್ಕೂ ಬೆಳಕಾಗುತ್ತದೆ. ಪ್ರತಿ ಬರವೂ ಪಾಠ ಕಲಿಯುವ ಅವಕಾಶವಾಗುತ್ತದೆ. ಕಳೆದ ವರ್ಷದ ಬರಕ್ಕೆ ನಾವು ಹೆಸರಿಟ್ಟಿಲ್ಲ, ರಾಜ್ಯ ಪ್ರವಾಸದ ಬಳಿಕ ಅದು ಟ್ಯಾಂಕರ್‌ ಬರವೆಂದು ನನಗನಿಸಿದೆ. ನದಿ, ತೆರೆದ ಬಾವಿಗಳು ಒಣಗಿದಾಗ ಕೊಳವೆ ಬಾವಿಯ ನೀರೆತ್ತಿ ಕುಡಿಯುವ ನೀರು ಹಂಚಲು ಎಲ್ಲೆಂದರಲ್ಲಿ ಟ್ಯಾಂಕರ್‌ಗಳು ಓಡಾಡಿವೆ.  

Advertisement

 ಬರದ ಬೇಸಿಗೆಯ ಉರಿಯಲ್ಲಿ ದೇಹ ತಂಪಾಗಿಸಲು ಕಾಡು ಸೊಪ್ಪಿನ ಬಂಪು(ಲೋಳೆ) ಕುಡಿಯುವುದು ಮನೆ ಮನೆಗೆ ತಿಳಿದಿರುವಷ್ಟು ಹವಾನಿಯಂತ್ರಿತ ಡಿಸಿ ಸಾಹೇಬರ ಕಚೇರಿಗೆ ತಿಳಿಯುವುದಿಲ್ಲ. ನೀರಿಲ್ಲದೇ  ತರಕಾರಿ ಬೆಳೆ ಇಲ್ಲ, ಮಾರುಕಟ್ಟೆಯಲ್ಲಿ ಖರೀದಿಸುವ ತಾಕತ್ತಿಲ್ಲದ ಸಂದರ್ಭದಲ್ಲಿ ಕಾಡು ಸೊಪ್ಪಿನ ಅಡುಗೆ ತಯಾರಿಸುವ ಜಾಣ್ಮೆ ಕಲಿಸಲು ಅಜ್ಜಿಯರು ಬೇಕು. ಹಸು ಸಾಕಿದರೆ ದಿನಕ್ಕೆ 300-350 ಲೀಟರ್‌ ನೀರು ಖರ್ಚಾಗುತ್ತದೆ. ಕುರಿ,ಮೇಕೆ ಸಾಕಿದರೆ 3-4 ಲೀಟರ್‌ ನೀರು ಸಾಕೆಂದು ಕೊಳವೆ ಬಾವಿಯಲ್ಲಿ ನೀರು ಹುಡುಕಲು ಸೋತ ಕೋಲಾರದ ಹಳ್ಳಿಗರಿಗೆ ಅರ್ಥವಾದಷ್ಟು ರಾಜ್ಯದ ಬೇರೆ ಯಾರಿಗೆ ತಿಳಿಯುತ್ತದೆ? ಜೈದರ್‌ ಹತ್ತಿಯ ಹೊಲದಲ್ಲಿ ಬ್ಯಾಡಗಿ ಮೆಣಸು, ಈರುಳ್ಳಿ, ಜೋಳ, ಕುಸುಬಿ ಪಡೆಯುವ ತಂತ್ರ ಗದಗದ ಎತ್ತಿನಹಳ್ಳಿಯವರಿಗೆ ಭೂಮಿ ಒಡನಾಟದಿಂದ ದೊರಕಿದೆ. ತೊಗರಿಯ ನಡುವೆ ಅಕ್ಕಡಿಯಲ್ಲಿ ಏನೆಲ್ಲ ಬೆಳೆಯಬಹುದೆಂಬ ಹಿರಿಯಜ್ಜನ ಪಾಠಗಳು ಶತಮಾನಗಳಿಂದ ಆಳಂದದ ರೈತರನ್ನು ಬದುಕಿಸಿವೆ. ಮಣ್ಣಿನಲ್ಲಿ ಏನೂ ಬೆಳೆಯದಿದ್ದರೂ ಹುರಳಿ, ಶೇಂಗಾ ಬೆಳೆಯುವುದು ಲೆಕ್ಕಾಚಾರದ ಪ್ರಕಾರ ನಷ್ಟವೆಂದು ಚಿತ್ರದುರ್ಗದ ಚೆಳ್ಳಕೆರೆಯ ರೈತರಿಗೆ ತಿಳಿದಿದೆ. ಆದರೆ ಬಂದಷ್ಟು ಬೆಳೆ ತೆಗೆದ ಬಳಿಕ ಉಳಿದ ಹೊಟ್ಟಿನಲ್ಲಿ ದನಕರು ಬದುಕುತ್ತವೆಂಬ ಅರಿವಿದೆ.

ಒಮ್ಮೆ ರೈತರು ಇಂಥ ತಂತ್ರ ಮರೆತು ಸರಕಾರದ ಬರಪರಿಹಾರವನ್ನೇ ನಂಬಿ ಕುಳಿತರೆ ಹಲವರ ಬಾಯಿಗೆ ಮಣ್ಣು ಬೀಳುತ್ತಿತ್ತು!  ಬರವನ್ನು ಸರಕಾರಿ ಕಾಗದ ಪತ್ರ, ಸಚಿವರ ಸಭೆ ಮೂಲಕ ಮಾತ್ರ ನೋಡಬೇಕಾಗಿಲ್ಲ. ಇದರ ಹೊರತಾದ ನೋಟಗಳಿಗೆ ಮಾಧ್ಯಮ ತೆರೆದುಕೊಳ್ಳಬೇಕಾಗಿದೆ. ಆರು ಇಂಚು ಮಣ್ಣು ಒದ್ದೆಯಾದರೆ ಇಡೀ ನಾಡಿನಲ್ಲಿ ಆಹಾರದ ಉತ್ಪಾದನೆ ಹೆಚ್ಚುತ್ತದೆ. ಇದು ಆರಿ ಹೋದಾಗ ಬೆಳೆಯುವವರು ಬೇಡುವ ದೈನ್ಯ ಸ್ಥಿತಿಗೆ ಕುಸಿಯುತ್ತಾರೆ. ಜಲದ ಕತೆ ಮಾಧ್ಯಮಕ್ಕೆ ಹಲವು ಮುಖಗಳನ್ನು ಪರಿಚಯಿಸುತ್ತದೆ.

 ದನಕರುಗಳಿಗೆ ನೀರು ಒದಗಿಸಲು ಟ್ಯಾಂಕರ್‌ ನಂಬಿದರೆ ಸಾಧ್ಯವಿಲ್ಲ. ನೀರಿನ ಸಮಸ್ಯೆಗೆ ಪರಿಹಾರ ಹುಡುಕಲು ಕೆರೆ ನಿರ್ಮಾಣವೂ ಮುಖ್ಯವಿದೆ. ಬರ ಪರಿಹಾರಕ್ಕೆ ಬಂದ ಹಣದಲ್ಲಿ ಕೆರೆಯ ಹೂಳು ತೆಗೆಯಬಹುದು. ಕೋಟ್ಯಂತರ ರೂಪಾಯಿ ಹಣ ಹೂಳು ತೆಗೆಯಲು ಬಂದರೂ ಕಚೇರಿಯ ಕಾಗದ ಪತ್ರಗಳು ಮೂರು ನಾಲ್ಕು ತಿಂಗಳು ಟೇಬಲ್‌ನಿಂದ ಟೇಬಲ್‌ ಸುತ್ತಾಡುತ್ತ ಕಟ್ಟಕಡೆಗೆ ಕೆಲಸದ ಆಜ್ಞೆ ಹೊರಬೀಳಲು ಮೇ ತಿಂಗಳು ಬರಬೇಕು. ಅಲ್ಲಿಗೆ ಬೇಸಿಗೆ ಮಳೆಯೂ ಆರಂಭವಾಗಿ ಹೂಳು ತೆಗೆಯುವ ಕೆಲಸ ಸಮರ್ಪಕವಾಗುವುದಿಲ್ಲ. ಇದೇ ಕಾರಣಕ್ಕೆ ಹಣದ ಮಂಜೂರಿ ಪ್ರಮಾಣಕ್ಕೂ, ಕೆಲಸದ ನಿರೀಕ್ಷೆಗೂ ಇತ್ತೀಚಿನ ವರ್ಷಗಳಲ್ಲಿ ವ್ಯತ್ಯಾಸ ಹೆಚ್ಚುತ್ತಿದೆ. ಜನಪ್ರತಿನಿಧಿಗಳು, ದೇಗುಲಗಳು ಹಾಗೂ ಉದ್ಯಮಿಗಳು ಜಲಕಾಯಕ್ಕೆ ಈಗ ಮುಂದಾಗಿದ್ದಾರೆ. ಸಿನೆಮಾ ನಟರು ಕೆರೆ ಕಾಯಕಕ್ಕೆ ಕೈಜೋಡಿಸಿದ್ದಾರೆ. ಇದು ಉತ್ತಮ ಬೆಳವಣಿಗೆಯಾಗಿದೆ. ಇದರಿಂದ ಕೆರೆ ಕೆಲಸದ ವೇಗ ಹೆಚ್ಚುತ್ತದೆ. ಸಮಸ್ಯೆ ಪರಿಹಾರಕ್ಕೆ ಸಾರ್ವಜನಿಕ ಪಾಲ್ಗೊಳ್ಳುವಿಕೆ ಬೆಳೆಯುತ್ತದೆ.. 

 ರಾಯಚೂರಿನ ಗ್ರಾಮೀಣ ಪತ್ರಿಕೆಯ ಸಂಪಾದಕರೊಬ್ಬರು ದಶಕಗಳ ಹಿಂದೆ ಹೇಳಿದ ಒಂದು ಘಟನೆ ನೆನಪಾಗುತ್ತಿದೆ. ಹಳ್ಳಿಯ ಗುಡಿಸಲುಗಳಿಗೆ ಬೆಂಕಿ ಬಿದ್ದಾಗ ಗ್ರಾಮೀಣ ವರದಿಗಾರ ಸುಮ್ಮನೆ ಚಿತ್ರ ತೆಗೆಯುತ್ತ, ವರದಿ ಬರೆಯುತ್ತ ಕೂಡ್ರಲಾಗುವುದಿಲ್ಲ. ಸಾಮಾಜಿಕ ಜವಾಬ್ದಾರಿ ಹೊತ್ತು ಬೆಂಕಿ ಆರಿಸಲು ಶ್ರಮಿಸಬೇಕಾಗುತ್ತದೆ. ಹೀಗಾಗಿ ಬೆಂಕಿ ಬಿದ್ದರೆ ಅವರು ವರದಿ ಬರೆಯುವುದು ತಡವಾಗುತ್ತದೆಂದು ವಿವರಿಸಿದ್ದರು. ಬರದ ಬೆಂಕಿ ಊರೆಲ್ಲ ಸುಡುವಾಗ ನಾಮ ಅಬ್ಬರದ ಚರ್ಚೆ, ಟೀಕೆ, ಆರೋಪಗಳಲ್ಲಿ ಕಾಲ ಕಳೆಯಲಾಗುವುದಿಲ್ಲ.  ತಪ್ಪು ಯಾರದ್ದೆಂದು ಹುಡುಕುವ ಸುದ್ದಿ ಹೊಡೆದಾಟದಲ್ಲಿ ಬಡವರು ನರಳುತ್ತಾರೆ, ಸಾಯುತ್ತಾರೆ. ಬರ ಮನುಕುಲವನ್ನಷ್ಟೇ ಅಲ್ಲ ಇಡೀ ಜೀವಸಂಕುಲವನ್ನು ಕಾಡುವ ಸುದ್ದಿಯಾಗಿದೆ. ಇದು ವರದಿ ಮಾಡಿ ಮುಗಿಸುವುದಲ್ಲ, ಪರಿಹಾರ ಮಾರ್ಗಕ್ಕೆ ಹಲವು ವಿಧಗಳಿಂದ ಪ್ರಯತ್ನಗಳು ಬೇಕು. ನಿಶ್ಚಿತವಾಗಿ ಬರ ಗೆಲ್ಲಲ್ಲು ಯಾವ ಯಾವ ಪ್ರದೇಶದಲ್ಲಿ ಏನೆಲ್ಲ ಕೆಲಸ ಮಾಡಬಹುದೆಂದು ಸ್ಪಷ್ಟವಾಗಿ ವಿವರಿಸಲು ಮಾಧ್ಯಮಗಳೇ ಮುಂಚೂಣಿಯಲ್ಲಿ ನಿಲ್ಲಬೇಕು. ಮಾಧ್ಯಮ ಕ್ಷೇತ್ರದಲ್ಲಿ ಸಿನೆಮಾ, ಆರ್ಥಿಕ, ರಾಜಕೀಯ ತಜ್ಞರಿದ್ದಂತೆ ಕೃಷಿ, ಜಲ ಜಾnನ ಪರಿಣಿತರ ಉತ್ತಮ ತಂಡ ಬೆಳೆಯಬೇಕು. 

 ಕೆರೆಯಲ್ಲಿ ನೀರು ಭರ್ತಿಯಾದಾಗ ಸುಂದರ ಚಿತ್ರ ತೆಗೆದು ಬರೆಯುವುದಕ್ಕೂ, ಕೆರೆ ನಿರ್ಮಾಣದ ಅಡ್ಡಿ, ಆತಂಕ, ಟೀಕೆಗಳನ್ನು ಸಹಿಸಿ ಅಭ್ಯುದಯದ ನಿಜ ಅನುಭವ ಪಡೆಯುವುದಕ್ಕೂ ವ್ಯತ್ಯಾಸವಿದೆ. ಕೆಲಸ ಆರಂಭಿಸಿದಾಗ ಟೀಕಿಸಲು ಜನರ ಜಾತ್ರೆ ನೆರೆಯುತ್ತದೆ. ಕೆಲಸ ಹೇಗೆ ಮಾಡಬೇಕೆಂದು ಹೇಳಲು, ಸ್ಥಳದಲ್ಲಿ ನಿಂತು ಉತ್ತಮ ಕಾರ್ಯಕ್ಕೆ ಸಮಯ ನೀಡುವವರು ಯಾರೂ ಇರುವುದಿಲ್ಲ. ಪತ್ರಿಕೆಗೆ ಕೆರೆ ಹೂಳು ತೆಗೆಯುವ ಕೆಲಸ ಹಾಳಾಗಿದೆಯೆಂದು ಹೇಳಿಕೆ ನೀಡುವವರು, ಮಾಹಿತಿ ಹಕ್ಕು ಕಾಯ್ದೆ ಬಳಸಿ ಹೋರಾಡುವವರು ಸಾಕಷ್ಟು ಜನ ಸಿಗಬಹುದು. ನಮಗೆ ಸಮಸ್ಯೆ ಹೇಳುವವರು ಯಾವತ್ತೂ ಸಿಗುತ್ತಾರೆ. ಬರಸಂಕಟದಲ್ಲಿ ನಮಗೆ ಪರಿಹಾರ ಹೇಳುವವರು, ಜನರಿಗೆ ಪ್ರೇರಣೆ ನೀಡುವವರು ಬೇಕಾಗಿದ್ದಾರೆ.  ಒಳ್ಳೆಯವರ ಮೌನ ಹಾಗೂ ಕುತಂತ್ರಿಗಳ ಗದ್ದಲದಲ್ಲಿ ನಮ್ಮ ವ್ಯವಸ್ಥೆ ಬಹಳ ನರಳುತ್ತಿದೆ. ಕೆಮೆರಾ ಎದುರು, ಪತ್ರಿಕೆಗಳ ಎದುರು ಸುಲಭದಲ್ಲಿ ಯಾರನ್ನೂ ಟೀಕಿಸಬಹುದು. ಆದರೆ ನಾವೇ ಸ್ವತಃ ಕೆಲಸ ಮಾಡಲು ಹೊರಟಾಗ ಮೊದಲ ಹೆಜ್ಜೆಯಲ್ಲಿಯೇ ಎಡವುತ್ತೇವೆ. ಆಗ ಸಮಸ್ಯೆಗಳ ಸತ್ಯ ದರ್ಶನವಾಗುತ್ತದೆ.

 ಬರಗೆಲ್ಲುವ ತಂತ್ರ ಅಳವಡಿಕೆಗೆ ಜನಜಾಗೃತಿ ಮೂಡಿಸುವುದರ ಜೊತೆ ಮಾಧ್ಯಮಗಳು ಸಾಮಾಜಿಕ ಕಳಕಳಿಯ ಕಾರ್ಯಗಳಿಗೆ ಜೊತೆಯಾಗಿ ನಿಲ್ಲಬೇಕು. ಕಡು ಬರದಲ್ಲಿಯೂ ನೆಮ್ಮದಿಯಲ್ಲಿರುವ ರೈತರು ಕೆಲವರಾದರೂ ಸಿಗುತ್ತಾರೆ.  ಜಲ ಸಂರಕ್ಷಣೆಯ ಮೂಲಕ ನೀರ ನೆಮ್ಮದಿಯಲ್ಲಿರುವವರು ದೊರೆಯುತ್ತಾರೆ. ಅವರ ಕೃಷಿ ನಿರ್ವಹಣೆಯ ಮಾದರಿ ಬೆಳಕು ನಾಡಿಗೆ ಪಾಠವಾಗಬೇಕು. ಕೆಲಸವನ್ನು ಮನಸ್ಸಿಗೆ, ಎದೆಗೆ ಹಚ್ಚಿಕೊಂಡಾಗ ಮಾತ್ರ ವಿಷಯಗಳು ಕಾಡುತ್ತವೆ.  ವರದಿ ಒಪ್ಪಿಸುವ, ಪರಿಸ್ಥಿತಿ ವಿವರಿಸುವ ಪ್ರಜ್ಞೆಯ ಆಚೆಗೂ ಅಭ್ಯುದಯ ಮಾಧ್ಯಮದ  ಹೆಜ್ಜೆ ಸಾಗಬೇಕು. ರಾಜ್ಯದ ಮೂಲೆ ಮೂಲೆಗೆ ಸಂಪರ್ಕ ಜಾಲ ವಿಸ್ತರಿಸಿಕೊಂಡು ಬರದಲ್ಲಿ ಬದುಕುವ ಮಾದರಿ ಪರಿಚಯಿಸಲು ಮಾಧ್ಯಮಗಳು ಮುಂದಾಗಬೇಕು. 

– ಶಿವಾನಂದ ಕಳವೆ

Advertisement

Udayavani is now on Telegram. Click here to join our channel and stay updated with the latest news.

Next