Advertisement
ಶಹಬಾಜ್ ಷರೀಫ್ ನೇತೃತ್ವದಲ್ಲಿ ಸರಕಾರ ರಚಿಸಲು ವಿಪಕ್ಷಗಳ ಒಕ್ಕೂಟ ತೀರ್ಮಾನಿಸಿದ್ದು, ಸೋಮವಾರ ಅವರು ಅಧಿಕೃತವಾಗಿ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಆದರೆ ಈ ಬೆಳವಣಿಗೆಗಳ ಬಗ್ಗೆ ಕಿಡಿಕಾರಿರುವ ಇಮ್ರಾನ್ ಖಾನ್ ಸೋಮವಾರ ತಮ್ಮ ಪಕ್ಷ ಪಾಕಿಸ್ಥಾನ್ ತೆಹ್ರಿಕ್-ಇ-ಇನ್ಸಾಫ್ನ ಎಲ್ಲ ಸಂಸದರು ರಾಜೀನಾಮೆ ನೀಡಲಿದ್ದಾರೆ ಎಂದು ಘೋಷಿಸಿದ್ದಾರೆ. ಅಲ್ಲದೆ ಶಹಬಾಜ್ ವಿರುದ್ಧ ಪಿಟಿಐಯ ಮಾಜಿ ಸಚಿವ ಶಾ ಮಹಮ್ಮದ್ ಖುರೇಷಿ ಸ್ಪರ್ಧಿಸಲಿದ್ದಾರೆ ಎಂದಿದ್ದಾರೆ.
ರವಿವಾರದ ಪ್ರಮುಖ ಬೆಳವಣಿಗೆಯಾಗಿ ಬಿಲಾವಲ್ ಭುಟ್ಟೋ ನೇತೃತ್ವದ ಪಾಕಿಸ್ಥಾನ ಪೀಪಲ್ಸ್ ಪಾರ್ಟಿ ಮತ್ತು ವಿಪಕ್ಷಗಳ ಇತರ ಮುಖಂಡರೆಲ್ಲ ಸೇರಿ ಶಹಬಾಜ್ ಷರೀಫ್ ಅವರನ್ನು ಮೈತ್ರಿಕೂಟದ ಮುಖಂಡರನ್ನಾಗಿ ಆಯ್ಕೆ ಮಾಡಿದ್ದಾರೆ. ಜತೆಗೆ ಪ್ರಧಾನಮಂತ್ರಿ ಹುದ್ದೆಗೆ ಅವರು ನಾಮಪತ್ರ ಸಲ್ಲಿಸಿದ್ದಾರೆ. ಇಸ್ಲಾಮಾಬಾದ್‌ನಲ್ಲಿ ನಡೆದ ಸಭೆಯಲ್ಲಿ ಶಹಬಾಜ್ ಷರೀಫ್ ಅವರನ್ನು ವಿಪಕ್ಷಗಳ ಮುಖಂಡರನ್ನಾಗಿ ಆಯ್ಕೆ ಮಾಡಲಾಯಿತು. ಪಾಕಿಸ್ಥಾನ ಪೀಪಲ್ಸ್ ಪಾರ್ಟಿಯ ಹಿರಿಯ ಮುಖಂಡ ಆಸಿಫ್ ಅಲಿ ಜರ್ದಾರಿಯವರು ಷರೀಫ್ ಅವರ ಹೆಸರನ್ನು ಸೂಚಿಸಿದ್ದಾರೆ. ಪಾಕಿಸ್ಥಾನ ಸಂಸತ್ತಿನ ಕೆಳಮನೆ ನ್ಯಾಷನಲ್ ಅಸೆಂಬ್ಲಿಯ ವಿಶೇಷ ಕಲಾಪವನ್ನು ಸೋಮವಾರ ಆಯೋಜಿಸಲಾಗಿದೆ. ಅದರಲ್ಲಿ ಶಹಬಾಜ್ ಷರೀಫ್ ಅವರನ್ನು ಸರಕಾರದ ಮುಖ್ಯಸ್ಥರನ್ನಾಗಿ ಆಯ್ಕೆ ಮಾಡಲಾಗುತ್ತದೆ. 342 ಮಂದಿ ಸಂಸದರಿರುವ ನ್ಯಾಷನಲ್ ಅಸೆಂಬ್ಲಿಯಲ್ಲಿ ಬಹುಮತಕ್ಕೆ 172 ಮಂದಿಯ ಬೆಂಬಲ ಬೇಕು. ಸದ್ಯಕ್ಕೆ ವಿಪಕ್ಷಗಳ ಮೈತ್ರಿಕೂಟಕ್ಕೆ ಅದು ಖಚಿತವಾಗಿ ಸಿಗಲಿದೆ.
Related Articles
ಹೊಸ ಸರಕಾರದಲ್ಲಿ ಸಂಸದ, ದಿ| ಬೆನಜೀರ್ ಭುಟ್ಟೋ ಅವರ ಪುತ್ರ ಬಿಲಾವಲ್ ಭುಟ್ಟೋ ವಿದೇಶಾಂಗ ಸಚಿವರಾಗಲಿದ್ದಾರೆ ಎಂಬ ವದಂತಿ ಇದೆ. ಮುಂದಿನ ವರ್ಷದ ಆಗಸ್ಟ್‌ನಲ್ಲಿ ಸಂಸತ್ ಚುನಾವಣೆ ನಡೆಯಲಿದ್ದು, ಪಾಕಿಸ್ಥಾನದ ನೂತನ ಪ್ರಧಾನಿಗೆ ಸವಾಲಿನ ಮೇಲೆ ಸವಾಲು ಇದೆ. ಆರ್ಥಿಕ ಪರಿಸ್ಥಿತಿ ಹಳಿಗೆ ತರುವುದು, ನಾಲ್ವರು ಸ್ವತಂತ್ರ ಸಂಸದರಿಗೆ ಸರಕಾರದಲ್ಲಿ ಸ್ಥಾನ ನೀಡುವುದರ ಸಹಿತ ಹಲವು ಪರಿಸ್ಥಿತಿಗಳು ಶಹಬಾಜ್‌ಗೆ ಸವಾಲೊಡ್ಡಲಿವೆ.
Advertisement
ಸ್ವಾತಂತ್ರ್ಯ ಸಂಗ್ರಾಮಕ್ಕೆ ಕರೆಅಧಿಕಾರ ಕಳೆದುಕೊಂಡಿರುವ ಇಮ್ರಾನ್ ಖಾನ್ ಈಗ ದೇಶದಲ್ಲಿ ಸ್ವಾತಂತ್ರ್ಯ ಸಂಗ್ರಾಮ ನಡೆಸುವ ಮಾತನಾಡಿದ್ದಾರೆ. ವಿದೇಶಿ ಶಕ್ತಿಗಳ ಕೈವಾಡದಿಂದಲೇ ಅಧಿಕಾರ ಕಳೆದುಕೊಳ್ಳಬೇಕಾ ಯಿತು ಎಂದು ಇಮ್ರಾನ್ ದೃಢವಾಗಿ ನಂಬಿದ್ದು, “ಸದ್ಯ ಪಾಕಿಸ್ಥಾನ ಐತಿಹಾಸಿಕ ಹೊಸ್ತಿಲಲ್ಲಿ ನಿಂತಿದೆ. ಪೂರ್ಣ ಪ್ರಮಾಣದ ಸ್ವಾತಂತ್ರ್ಯ ಹೊಂದಿರುವ ದೇಶದಲ್ಲಿ ಜೀವಿಸ ಬೇಕೋ ಅಥವಾ ವಿದೇಶೀ ರಾಷ್ಟ್ರದ ನಿಯಂತ್ರಣ ಇರುವ ಸರಕಾರದ ಜತೆಗೆ ಇರಬೇಕೋ ಎಂಬ ಬಗ್ಗೆನಿರ್ಧರಿಸಬೇಕಾಗಿದೆ. ನನ್ನ ನೇತೃತ್ವದ ಸರಕಾರ ಪತನಗೊಳ್ಳುವುದರೊಂದಿಗೆ ದೇಶದಲ್ಲಿ ಸ್ವಾತಂತ್ರ್ಯ ಸಂಗ್ರಾಮ ಆರಂಭವಾಗಲಿದೆ’ ಎಂದಿದ್ದಾರೆ. ತಮ್ಮ ನೇತೃತ್ವದ ಸರಕಾರ ಹೊಂದಿದ್ದ ಸ್ವತಂತ್ರ ವಿದೇಶಾಂಗ ನೀತಿ ಸಹಿಸಲಾಗದೆ, ವಿದೇಶಿ ಶಕ್ತಿ ವಿಪಕ್ಷಗಳ ಜತೆಗೆ ಕೈಜೋಡಿಸಿ ಅವಿಶ್ವಾಸ ಗೊತ್ತುವಳಿ ಮಂಡಿಸಿ ಸೋಲಾಗುವಂತೆ ಮಾಡಿತು ಎಂದು ದೂರಿದ್ದಾರೆ. ಸಂಸದರ ರಾಜೀನಾಮೆ:ಇಮ್ರಾನ್ ಪಕ್ಷದ ಬೆದರಿಕೆ
ಪಾಕಿಸ್ಥಾನ ಮುಸ್ಲಿಂ ಲೀಗ್- ನವಾಜ್‌ನ ನಾಯಕ ಶಹಬಾಜ್ ಷರೀಫ್ ಅವರನ್ನು ಪ್ರಧಾನಿ ಹುದ್ದೆಗೆ ನಾಮಪತ್ರ ಸಲ್ಲಿಸಲು, ಸ್ಪರ್ಧಿಸಲು ಅನುವು ಮಾಡಿಕೊಟ್ಟರೆ ಸಂಸದರೆಲ್ಲರೂ ರಾಜೀನಾಮೆ ನೀಡಲಿದ್ದಾರೆ- ಇಂಥ ಒಂದು ಬೆದರಿಕೆಯನ್ನು ಪಾಕಿಸ್ಥಾನ ತೆಹ್ರೀಕ್- ಇ-ಇನ್ಸಾಫ್ ಒಡ್ಡಿದೆ. ಸರಕಾರ ಪತನಗೊಂಡ ಬಳಿಕ ಮೊದಲ ಬಾರಿಗೆ ನಡೆದ ಸಭೆಯಲ್ಲಿ ಮುಂದಿನ ಕಾರ್ಯತಂತ್ರಗಳನ್ನು ಮಾಜಿ ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದಲ್ಲಿ ಚರ್ಚಿಸಲಾಯಿತು. ಅದರಲ್ಲಿ ಸಂಸದರ ಸಾಮೂಹಿಕ ರಾಜೀನಾಮೆ ಬಗ್ಗೆಯೂ ಚರ್ಚಿಸಲಾಗಿದೆ. “ವಿದೇಶಿ ಶಕ್ತಿಯೊಂದು ಆಯ್ಕೆ ಮಾಡಿದ, ವಿದೇಶದಿಂದ ಆಮದಾಗಿರುವ ಸರಕಾರದಲ್ಲಿ ಶೆಹಬಾದ್ ಷರೀಫ್ ನಾಯಕರಾಗಲಿದ್ದಾರೆ ಎನ್ನುವುದೇ ಪಾಕಿಸ್ಥಾನಕ್ಕೆ ಅವಮಾನದ ಸಂಗತಿ’ ಎಂದು ಸಂಸದ ಫವಾದ್ ಚೌಧರಿ ಹೇಳಿದ್ದಾರೆ. ಆದರೆ ಈ ಆರೋಪಗಳನ್ನು ನ್ಯಾಷನಲ್ ಅಸೆಂಬ್ಲಿಯ ಸೆಕ್ರೆಟೇರಿಯಟ್ ತಿರಸ್ಕರಿಸಿದೆ. ಇದೇ ವೇಳೆ ಈಗಾಗಲೇ ವರದಿಯಾದಂತೆ ಡೆಪ್ಯುಟಿ ಸ್ಪೀಕರ್ ಖಾಸಿಂ ಸೂರಿ ರಾಜೀನಾಮೆ ನೀಡಿಲ್ಲ. ಸೋಮವಾರದ ವಿಶೇಷ ಅಧಿವೇಶನವನ್ನು ಅವರೇ ನಡೆಸಿ ಕೊಡಲಿದ್ದಾರೆ. ಶಹಬಾಜ್‌ಗೆ “ರಜೆ’ ರಕ್ಷಣೆ
ಪಾಕಿಸ್ಥಾನದ ನಿಯೋಜಿತ ಪ್ರಧಾನಿ ಶಹಬಾಜ್ ಮತ್ತು ಪುತ್ರ ಹಮ್ಜಾ ಅವರು 14 ಬಿಲಿಯನ್ ಡಾಲರ್ ಮೌಲ್ಯದ ಅಕ್ರಮ ಹಣ ಸಾಗಾಟ ಪ್ರಕರಣ ಸಂಬಂಧ ವಿಶೇಷ ಕೋರ್ಟ್‌ನ ಮುಂದೆ ಹಾಜರಾಗಬೇಕು. ಆದರೆ ಈ ಪ್ರಕರಣದ ತನಿಖಾಧಿಕಾರಿಯಾಗಿರುವ ಫೆಡರಲ್ ಇನ್‌ವೆಸ್ಟಿಗೇಶನ್ ಏಜೆನ್ಸಿಯ ಅಧಿಕಾರಿ ಮೊಹಮ್ಮದ್ ರಿಜ್ವಾನ್ ಅನಿರ್ದಿಷ್ಟಾವಧಿಯ ವರೆಗೆ ರಜೆ ಮೇಲೆ ಹೋಗಿದ್ದಾರೆ. ಇಮ್ರಾನ್ ಸರಕಾರ ಪತನವಾಗುತ್ತಿದ್ದಂತೆ ರಜೆಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ಇದಕ್ಕೆ ಒಪ್ಪಿಗೆಯೂ ಸಿಕ್ಕಿದೆ. ಹೀಗಾಗಿ ತನಿಖೆ ಸ್ಥಗಿತವಾಗಿದ್ದು, ಅಧಿಕಾರಿಯ ರಜೆ ಶಹಬಾಜ್‌ಗೆ ರಕ್ಷಣೆ ನೀಡಿದೆ. ಬೇಕಾಗಿಲ್ಲ ಕಹಿ ದಿನಗಳು
ಪ್ರಧಾನಿ ಹುದ್ದೆಗೆ ನಾಮಪತ್ರ ಸಲ್ಲಿಸುವ ಮೊದಲು ಮಾತನಾಡಿದ ಶಹಬಾಜ್ ಷರೀಫ್, “ಸಂವಿಧಾನದ ಪರವಾಗಿ ನಿಂತವರೆಲ್ಲರಿಗೂ ಧನ್ಯವಾದಗಳು’ ಎಂದರು. ಹಿಂದಿನ ಕಹಿ ಘಟನೆಗಳು ಅಗತ್ಯವಿಲ್ಲ. ನಿಕಟಪೂರ್ವ ಸರಕಾರದ ವಿರುದ್ಧ ಪ್ರತೀಕಾರದ ಕ್ರಮಗಳಿಲ್ಲ ಎಂದರು. ಇಂದು ಹೈಕೋರ್ಟ್ ವಿಚಾರಣೆ
ಇಮ್ರಾನ್ ಮತ್ತು ಅವರ ಸಂಪುಟದಲ್ಲಿ ಸಚಿವರಾಗಿದ್ದವರು ದೇಶ ಬಿಟ್ಟು ತೆರಳಬಾರದು. ವಿದೇಶ ಪ್ರಯಾಣಕ್ಕೆ ತಡೆಯೊಡ್ಡ ಬೇಕು ಎಂದು ಕೋರಿ ಇಸ್ಲಾಮಾಬಾದ್ ಹೈಕೋರ್ಟ್‌ನಲ್ಲಿ ಸಲ್ಲಿಕೆಯಾಗಿರುವ ಅರ್ಜಿ ಸೋಮವಾರ ವಿಚಾರಣೆಗೆ ಬರಲಿದೆ. ಜತೆಗೆ ಅವರು ಹೈಕೋರ್ಟ್, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಿಗೆ ಬೆದರಿಕೆ ಪತ್ರ ಬರೆದಿದ್ದಾರೆ ಎಂಬ ಮತ್ತೂಂದು ಆರೋಪದ ಬಗ್ಗೆಯೂ ವಿಚಾರಣೆ ನಡೆಯಲಿದೆ. ಇಮ್ರಾನ್, ಮಾಜಿ ಸಚಿವ ಫವಾದ್ ಚೌಧರಿ, ಶಾ ಮೆಹಮೂದ್ ಖುರೇಷಿ, ಮಾಜಿ ಡೆಪ್ಯುಟಿ ಸ್ಪೀಕರ್ ಖಾಸಿಂ ಸೂರಿ ಅವರನ್ನು ದೇಶ ಬಿಟ್ಟು ತೆರಳದಂತೆ ನಿಷೇಧವಿರುವವರ ಪಟ್ಟಿಗೆ ಸೇರಿಸಬೇಕು ಎಂದು ಅರಿಕೆ ಮಾಡಿಕೊಳ್ಳಲಾಗಿದೆ. ಶಹಬಾಜ್ ಷರೀಫ್ ಅವರನ್ನು ಪ್ರಧಾನಿ ಹುದ್ದೆಗೆ ಆಯ್ಕೆ ಮಾಡಿದ್ದೇವೆ. ಅವರಿಗೆ ನಮ್ಮ ಬೆಂಬಲ ಇದೆ.
– ಬಿಲಾವಲ್ ಭುಟ್ಟೋ,ಪಿಪಿಪಿ ನಾಯಕ