ಸೋಲು ಸಾಮಾನ್ಯ ವಿಷಯವೇ ಆದರೂ ಒಪ್ಪಿಕೊಳ್ಳಲು ಮನಸ್ಸು ಹಿಂದೆ ಸರಿಯುತ್ತದೆ. ಕೆಲವೊಮ್ಮೆ ಸೋಲನ್ನೊಪ್ಪಿಕೊಂಡ ಬಳಿಕ ಅದು ಯಾಕೆ, ಹೇಗೆ ಎಂಬ ಆತ್ಮ ವಿಮರ್ಶೆಪಟ್ಟು ಆಗಿರುವ ತಪ್ಪಿನಿಂದ ಪಾಠ ಕಲಿತು ಮುನ್ನಡೆದರೆ ಯಾವುದೂ ಕಷ್ಟವಲ್ಲ. ಪರಿಸ್ಥಿತಿ ಹೇಗೆ ಇರಲಿ ಸಮಯಕ್ಕೆ ತಲೆಬಾಗಿ ಶರಣಾಗಿ ಬಿಡುವುದಲ್ಲ. ಬದಲಾಗಿ ನಮ್ಮ ಮುಂದಿರುವ ಸಮಯವನ್ನು ಸದ್ಬಳಿಸಿಕೊಂಡು ಗುರಿ ಮುಟ್ಟುವಲ್ಲಿಯೇ ಇರುವುದು ನಿಜವಾದ ಗೆಲುವು.
ಪ್ರತಿ ಬಾರಿಯೂ ಗೆಲುವಿನಲ್ಲಿ ಹೆಜ್ಜೆ ಹಾಕಿದೆವು ಎಂದಾದಲ್ಲಿ ಪ್ರತಿ ಗೆಲುವೂ ನಮಗೆ ಸುಖ ನೆಮ್ಮದಿಯನ್ನು ಕರುಣಿಸುತ್ತದೆ ಎಂಬ ಕಲ್ಪನೆ ತಪ್ಪು. ಏಕೆಂದರೆ ಒಂದೇ ಪ್ರಯತ್ನದಲ್ಲಿ ನಾವು ಗೆಲುವು ಸಾಧಿಸಿದೆವು ಎಂದಾದ ಪಕ್ಷದಲ್ಲಿ ನಮಗೆ ಸಿಗುವ ಜೀವನಾನುಭವಗಳು ತೀರಾ ಕಡಿಮೆ.ಜತೆಗೆ ಪ್ರತಿ ಬಾರಿಯೂ ಗೆಲುವು ನಮ್ಮದೇ ಆಗುತ್ತಿದ್ದರೆ ಕೊನೆಗೊಮ್ಮೆ ಗೆಲುವುಗಳೂ ತೀರಾ ಸಪ್ಪೆಯೆನಿಸುವ ಸಾಧ್ಯತೆ ಹೆಚ್ಚು. ಬದಲಾಗಿ ಸೋಲಿನ ಬಳಿಕ ಗೆಲುವಿದೆಯಲ್ಲ ಅದು ನಮಗೆ ಬದುಕುವುದಕ್ಕೆ ಬೇಕಾದ ಅನುಭವ, ಪರಿಶ್ರಮ ತಿಳಿಸಿಕೊಡುತ್ತದೆ. ಸತತ ಪರಿಶ್ರಮದಿಂದ ಪಡೆದ ಗೆಲುವು ಮತ್ತೂಂದು ಗುರಿಯನ್ನು ಹೇಗೆ ತಲುಪುವುದು ಎನ್ನುವ ನಿಟ್ಟಿನಲ್ಲಿ ಯೋಜನೆಗಳನ್ನು ಹಾಕುವಲ್ಲಿ ನಮಗೆ ಸಹಾಯ ಮಾಡುತ್ತದೆ.
ಇನ್ನು ಕೆಲಸದ ಯೋಜನೆ ಆರಂಭದಿಂದ ಅಂತ್ಯದವರೆಗೆ ನನ್ನಿಂದಾದ ಸಂಪೂರ್ಣ ಪ್ರಯತ್ನ ಮಾಡುವುದರಲ್ಲಿ ಯಶಸ್ಸಿನ ಗುಟ್ಟು ಅಡಗಿದೆ. ಮಾಡುವ ಕೆಲಸದಲ್ಲಿ ನಮ್ಮ ಪ್ರಾಮಾಣಿಕತೆಯಿಂದ ಸಿಗುವ ಯಶಸ್ಸಿನ ಪ್ರಮಾಣವೂ ನಿರ್ಧಾರವಾಗುವುದು. ಬೇಗ ಗಮ್ಯ ತಲುಪುವ ನಿಟ್ಟಿನಲ್ಲಿ ಅಡ್ಡ ದಾರಿಯ ಕೈ ಹಿಡಿದರೆ ನಮಗೆ ಕ್ಷಣಿಕ ಸಂತೋಷ ಸಿಗುತ್ತದೆ ಅಷ್ಟೇ. ಕ್ಷಣಿಕ ಸಂತೋಷವಷ್ಟೇ ನಮ್ಮ ಪಾಲಿಗೆ ಸಿಗುತ್ತದೆ. ಅದ್ದರಿಂದ ನಾವು ಹೆಜ್ಜೆ ನಡೆವ ಹಾದಿಯ ಮೇಲೆಯೂ ನಮ್ಮ ಗಮನವಿದ್ದಲ್ಲಿ ಸಿಗುವ ಯಶಸ್ಸಿಗೂ ಅರ್ಥ ಬರುತ್ತದೆ.
ಇನ್ನು ನಾವು ನಿಜವಾದ ನಮ್ಮವರನ್ನು ಕಂಡುಕೊಳ್ಳುವುದಕ್ಕೆ ಸಹಾಯ ಮಾಡುವುದೂ ನಮ್ಮ ಸೋಲುಗಳೇ. ಗೆದ್ದಾಗ ಎಲ್ಲರೂ ನಮ್ಮ ಹಿಂದೆ ಬಂದರೆ, ಸೋಲಿನಲ್ಲಿ ಕೇವಲ ನಮ್ಮ ಮೆಲೆ ನಿಜವಾದ ಕಾಳಜಿ ಹೊಂದಿದವರಷ್ಟೇ ನಮ್ಮ ಜತೆಗೆ ಹೆಜ್ಜೆ ಇಡುತ್ತಾರೆ. ಕಣ್ಣೀರು ಒರೆಸುವಲ್ಲಿ ಪ್ರಯತ್ನ ಮಾಡುತ್ತಾರೆ. ಮತ್ತೆ ನಮ್ಮ ಹೆಗಲಿಗೆ ಹೆಗಲು ಕೊಟ್ಟು ಗೆಲುವಿನ ಪತದತ್ತ ಸಾಗುವುದಕ್ಕೆ ಸಹಾಯ ಮಾಡುತ್ತಾರೆ.
ಸೋಲು ನಮ್ಮ ಬದುಕಿಗೆ ಅನುಭವಗಳ ಪಾಠವನ್ನು ತಿಳಿಸಿಕೊಡುವ ವಿಶ್ವವಿದ್ಯಾಲಯವೇ ಸರಿ. ಆದ್ದರಿಂದ ಸೋಲಿಗೆ ಸೋಲುವುದಲ್ಲ . ಬದಲಾಗಿ ಸವಾಲೊಡ್ಡಿ. ಮತ್ತೆ ಗೆಲುವಿನ ಹಣತೆ ಹಚ್ಚುವುದಕ್ಕೆ ಇದೇ ನಮಗೆ ಬತ್ತಿ. ಆತ್ಮ ವಿಶ್ವಾಸವೇ ತೈಲ. ದಿಟ್ಟ ಹೆಜ್ಜೆ ಇಡುವ ಛಲ ಬೆಳಗುವುದು ಆಗಲೇ.
– ಭುವನ ಬಾಬು, ಪುತ್ತೂರು