Advertisement
ಕೊರೊನಾ ಕಾರಣಕ್ಕೆ ಬಹುತೇಕ ಶಾಲೆಗಳು ಒಂದು ವರ್ಷ ಸಂಪೂರ್ಣ ಸ್ಥಗಿತಗೊಂಡಿದ್ದವು. ಆದರೂ ದಾಖಲಾತಿ ಪ್ರಕ್ರಿಯೆ ಮಾತ್ರ ನಿಂತಿರಲಿಲ್ಲ. ಆದರೆ, ಈ ವರ್ಷ ಶಾಲೆಗಳು ಬಹುತೇಕ ಆರಂಭಗೊಂಡಿದ್ದು, ದಾಖಲಾತಿಯಲ್ಲಿ ಹೆಸರಿದ್ದರೂ ಮಕ್ಕಳು ಶಾಲೆಗೆ ಬರುತ್ತಿಲ್ಲ. ಶಿಕ್ಷಣ ಇಲಾಖೆ ಮಾಹಿತಿ ಪ್ರಕಾರ 2020-2021ರಲ್ಲಿ 456 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದರೆ, 2021-2022ನೇ ಸಾಲಿನಲ್ಲಿ 1,966 ಮಕ್ಕಳು ಹೊರಗುಳಿದಿರುವ ಮಾಹಿತಿ ಇದೆ. ಅದರಲ್ಲಿ ಬಹುತೇಕ ಮಕ್ಕಳು ಕೆಲಸಗಳಿಗೆ ಹೋಗುತ್ತಿದ್ದಾರೆ ಎನ್ನುವುದು ಇತ್ತ ಬಾಲ ಕಾರ್ಮಿಕ ಇಲಾಖೆಗೂ ಹೆಚ್ಚುವರಿ ಕೆಲಸ ತಂದಿಟ್ಟಿದೆ.
Related Articles
Advertisement
ಹತ್ತಿ ಬೆಳೆಯೇ ಕಂಟಕ
ಜಿಲ್ಲೆಯಲ್ಲಿ ಬಾಲ ಕಾರ್ಮಿಕ ಪದ್ಧತಿಗೆ ಕಂಟಕವಾಗಿರುವುದೇ ಹತ್ತಿ ಬೆಳೆ. ಪ್ರತಿ ವರ್ಷ ಹತ್ತಿ ಸೀಜನ್ ಶುರುವಾಗುತ್ತಿದ್ದಂತೆ ಮಕ್ಕಳು ಶಾಲೆಯಿಂದ ದೂರವಾಗುತ್ತಾರೆ. ಅಲ್ಲದೇ, ಹತ್ತಿ ಬಿಡಿಸಲು ದೊಡ್ಡವರಿಗಿಂತ ಮಕ್ಕಳೇ ಸೂಕ್ತ ಎನ್ನುವ ಕಾರಣಕ್ಕೆ ಕೆಲ ಮಧ್ಯವರ್ತಿಗಳು ಮಕ್ಕಳನ್ನು ಕರೆದುಕೊಂಡು ಹೋಗುತ್ತಾರೆ. ಆಟೋಗಳಲ್ಲಿ ಟಾಪ್ ಮೇಲೆ ಮಕ್ಕಳನ್ನು ಕೂಡಿಸಿಕೊಂಡು ಜಿಲ್ಲೆ ಮಾತ್ರವಲ್ಲದೇ ನೆರೆಯ ತೆಲಂಗಾಣ, ಆಂಧ್ರದ ಗಡಿ ಗ್ರಾಮಗಳಿಗೆ ಕರೆದುಕೊಂಡು ಹೋಗುತ್ತಾರೆ. ಇದನ್ನು ಗಮನಿಸಿ ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳು ಪರಿಣಾಮಕಾರಿಯಾಗಿ ಕ್ರಮ ಕೈಗೊಳ್ಳುವುದಿಲ್ಲ ಎನ್ನುವುದು ಪ್ರಜ್ಞಾವಂತರ ಆರೋಪ. ಅಲ್ಲದೇ, ಈ ಬಾರಿ ಕೆಜಿ ಹತ್ತಿ ಬಿಡಿಸಿದರೆ 10-12 ರೂ. ಸಿಗುತ್ತಿದ್ದ ಕಾರಣ ಪಾಲಕ, ಪೋಷಕರೇ ಮಕ್ಕಳನ್ನು ಶಾಲೆ ಬಿಡಿಸಿ ಹತ್ತಿ ಬಿಡಿಸಲು ಕಳುಹಿಸುತ್ತಿರುವ ಪ್ರಸಂಗಗಳು ಹೆಚ್ಚಾಗಿ ನಡೆದಿವೆ.
ಕೊರೊನಾ ಕಾರಣಕ್ಕೆ ಈ ಬಾರಿ ಸರ್ಕಾರಿ ಶಾಲೆಯಲ್ಲಿ ದಾಖಲಾತಿ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ. ಆದರೆ, ಗ್ರಾಮೀಣ ಭಾಗದಲ್ಲಿ ಕೆಲವೊಮ್ಮೆ ಮಕ್ಕಳು ಶಾಲೆಗೆ ಬಾರದೆ ಹೊಲ ಮನೆ ಕೆಲಸಗಳಿಗೆ ಹೋಗುತ್ತಾರೆ. ಅಲ್ಲಿನ ಶಿಕ್ಷಕರಿಗೆ ಪಾಲಕರ ಮನವೊಲಿಸುವಂತೆ ತಿಳಿಸಲಾಗಿದೆ. -ವೃಷಭೇಂದ್ರಯ್ಯ, ಡಿಡಿಪಿಐ, ರಾಯಚೂರು
ಜಿಲ್ಲೆಯಲ್ಲಿ ಬಾಲ ಕಾರ್ಮಿಕ ಸಂಖ್ಯೆ ಹೆಚ್ಚಾಗಿಲ್ಲ. ಆದರೆ, ಶಾಲೆ ಬಿಟ್ಟ ಮಕ್ಕಳ ಸಂಖ್ಯೆ ಹೆಚ್ಚಾಗಿರಬಹುದು. ಶಾಲೆ ಬಿಟ್ಟ ಮಕ್ಕಳನ್ನೆಲ್ಲ ನಾವು ಬಾಲ ಕಾರ್ಮಿಕರು ಎನ್ನಲಾಗದು. ಅಲ್ಲದೇ, ನಮ್ಮ ಇಲಾಖೆ ನಿರಂತರ ದಾಳಿ ಮಾಡುವುದು, ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಸಾಕಷ್ಟು ಪ್ರಕರಣಗಳನ್ನು ದಾಖಲಿಸಿ ವಾಹನಗಳನ್ನು ಸೀಜ್ ಮಾಡಲಾಗಿದೆ. -ರವಿಕುಮಾರ್, ಬಾಲ ಕಾರ್ಮಿಕ ಯೋಜನೆ ಕಾರ್ಯಕ್ರಮ ವ್ಯವಸ್ಥಾಪಕ