Advertisement

ಕುಡಿಯುವ ನೀರಿನ ನಿರ್ವಹಣೆಯೇ ಸವಾಲು

06:22 PM Apr 27, 2019 | Team Udayavani |

 

Advertisement

ಪಡುಪಣಂಬೂರು, ಎ. 26: ಇಲ್ಲಿನ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಪಡುಪಣಂಬೂರು ಗ್ರಾಮದಲ್ಲಿ ಕುಡಿಯುವ ನೀರಿನ ನಿರ್ವಹಣೆಯೇ ಸವಾಲಾಗಿದ್ದು, ನೀರಿನ ಸಂಪರ್ಕ ಪಡೆದವನ್ನು ಸುಧಾರಿಸಲು ಪಂಚಾಯತ್‌ನ ನೀರಿನ ಸಮಿತಿ ಹರಸಾಹಸವನ್ನೇ ಮಾಡುತ್ತಿದೆ.

ಪಡುಪಣಂಬೂರು ಕುಡಿಯುವ ನೀರು ನಿರ್ವಹಣೆ ಸಮಿತಿಯಲ್ಲಿ 204 ಗ್ರಾಹಕ‌ರು ಸಂಪರ್ಕ ಪಡೆದಿದ್ದಾರೆ. ಕಲ್ಲಾಪು ಹಾಗೂ ಪಡುಪಣಂಬೂರು ಪ್ರದೇಶದಲ್ಲಿ ಒಟ್ಟು ಮೂರು ಕೊಳವೆ ಬಾವಿಯ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಕನಿಷ್ಠ ಎರಡು ದಿನಕ್ಕೊಮ್ಮೆಯಾದರೂ ಹೊಂದಾಣಿಕೆಯಲ್ಲಿ ನೀರು ನೀಡುತ್ತಿರುವುದರಿಂದ ಗ್ರಾಹಕರ ಒತ್ತಡ ಅಷ್ಟೇನು ಇಲ್ಲವಾಗಿದೆ. ಇನ್ನು ಮೇ, ಜೂನ್‌ ತಿಂಗಳಿನಲ್ಲಿ ನೀರಿನ ಸಾಮರ್ಥ್ಯ ಕ್ಷಿಣಿಸುವಾಗ ಸಮಸ್ಯೆ ಇನ್ನಷ್ಟು ಕಾಡುವ ಸಾಧ್ಯತೆ ಇದ್ದರೂ ಸಹ ಸಮಿತಿ ಹಾಗೂ ಪಂಚಾಯತ್‌ ಜವಾಬ್ದಾರಿಯುತವಾಗಿ ನಿರ್ವಹಿಸಲಿದೆ ಎನ್ನುವ ವಿಶ್ವಾಸ ಗ್ರಾಮಸ್ಥರದ್ದು.

ಆಮೆಗತಿಯ ಕಾಮಗಾರಿ:

ವರ್ಷದ ಹಿಂದೆ ಹೆದ್ದಾರಿಗಾಗಿ ಎರಡು ಉಪಯುಕ್ತ ಟ್ಯಾಂಕ್‌ಗಳನ್ನೇ ಕೆಡವಿದ್ದರಿಂದ ಕಳೆದ ಒಂದು ವರ್ಷದಿಂದ ನೀರನ್ನು ನೇರವಾಗಿ ಕೊಳವೆ ಪಂಪ್‌ನಿಂದಲೇ ನಿರ್ವಹಿಸಲಾಗುತ್ತಿದೆ. ಎಂಆರ್‌ಪಿಎಲ್ನ ನೆರವಿನಿಂದ ಟ್ಯಾಂಕ್‌ ನಿರ್ಮಾಣಗೊಳ್ಳುತ್ತಿದ್ದರೂ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

Advertisement

ಕಲ್ಲಾಪು ಪ್ರದೇಶದಲ್ಲಿರುವ ಒಂದು ಕೊಳವೆ ಬಾವಿಯಲ್ಲಿ ಈಗಾಗಲೇ ಉಪ್ಪಿನ ಅಂಶ ಕಂಡು ಬಂದಿದ್ದು, ಇಲ್ಲಿಗೆ ನೇರವಾಗಿ ಪಡುಪಣಂಬೂರು ಪ್ರದೇಶದ ಕೊಳವೆ ಬಾವಿಯಿಂದಲೇ ಸಂಪರ್ಕ ನೀಡಲಾಗಿದೆ.

ಪಡುಪಣಂಬೂರು ಪ್ರದೇಶದಲ್ಲಿನ ಬಾಂದ ಕೆರೆ, ಶಾಲೆ ಕೆರೆ, ದಡ್ಡಿ ಕೆರೆಗಳಿದ್ದು ಇದನ್ನು ಅಭಿವೃದ್ಧಿ ಪಡಿಸಿದಲ್ಲಿ ನೀರಿನ ಒಳ ಹರಿವು ಹೆಚ್ಚಾಗಬಹುದು. ಈ ಬಗ್ಗೆ ಪಂಚಾಯತ್‌ನ ಆಡಳಿತವು ಮುಂದಾಗಬೇಕು ಎಂದು ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ. ಅಲ್ಲದೇ ಗ್ರಾಮಸ್ಥರಿಗೆ ಮಳೆ ಕೊಯ್ಲು ಬಗ್ಗೆ ಪಂಚಾಯತ್‌ ಇನ್ನಷ್ಟು ಹೆಚ್ಚು ಜಾಗೃತಿ ಮೂಡಿಸಬೇಕಾದ ಆವಶ್ಯಕತೆ ಇದೆ.

ಬೇಸಿಗೆಯಲ್ಲಿ ಉಂಟಾಗುವ ನೀರಿನ ಕೊರತೆಯ ಬಗ್ಗೆ ವರದಿ ಮಾಡಿ ಅದಕ್ಕೆ ಶಾಶ್ವತ ಪರಿಹಾರ ಒದಗಿಸುವಲ್ಲಿ ‘ಉದಯವಾಣಿ-ಸುದಿನ’ ಮುಂದಾಗಿದ್ದು ಇದಕ್ಕೆ ಅನುಗುಣವಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಜನರು ಅನುಭವಿಸುತ್ತಿರುವ ನೀರಿನ ಬವಣೆಗಳನ್ನು ತಿಳಿಸುವ ಒಂದು ಪ್ರಯತ್ನ.

 

•ನರೇಂದ್ರ ಕೆರೆಕಾಡು

Advertisement

Udayavani is now on Telegram. Click here to join our channel and stay updated with the latest news.

Next