ಚಳ್ಳಕೆರೆ: ಕಳೆದ 10 ವರ್ಷಗಳಿಂದ ತಾಲೂಕಿನಾದ್ಯಂತ ಮಳೆಯಿಲ್ಲದೇ, ಕೆರೆ, ಕಟ್ಟೆಗಳು ಒಣಗಿ ಹೋಗಿದ್ದವು. ವರುಣನ ಕೃಪೆ ಇಲ್ಲದೆ ಎಲ್ಲರ ಬದುಕು ಕತ್ತಲಲ್ಲೇ ಮುಳುಗಿ ಹೋಗಿತ್ತು. ಈ ವರ್ಷ ಯುಗಾದಿ ಹಬ್ಬದ ನಂತರ ನಡೆಯುವ ಜಾತ್ರೆ, ಉತ್ಸವ ಹಾಗೂ ದೇವರ ಪೂಜೆ ಕಾರ್ಯಕ್ರಮಗಳಲ್ಲಿ ಮಳೆಗಾಗಿ ಪ್ರತಿಯೊಂದು ಹಂತದಲ್ಲೂ ಸಾವಿರಾರು ಸಂಖ್ಯೆಯ ಭಕ್ತರು ಬೇಡಿಕೊಳ್ಳುತ್ತಿದ್ದರು. ತಾಲೂಕಿನಲ್ಲಿ ಯಾವುದೇ ಪ್ರದೇಶದಲ್ಲಿ ಯಾವುದೇ ಧಾರ್ಮಿಕ ಕಾರ್ಯಕ್ರಮ ನಡೆದರೂ ಅಲ್ಲಿನ ಜನರ ಏಕೈಕ ಬೇಡಿಕೆ ಎಂದರೆ ಮಳೆಗಾಗಿ ದೇವರನ್ನು ಪ್ರಾರ್ಥಿಸುವುದಾಗಿದೆ.
ಕಳೆದ ಸೆಪ್ಟೆಂಬರ್, ಅಕ್ಟೋಬರ್ ತಿಂಗಳಲ್ಲಿ ತಾಲೂಕಿನಾದ್ಯಂತ 650 ಮಿಮೀ ಮಳೆಯಾಗಿದ್ದು, ಇದು ಹಿಂದಿನ ಎಲ್ಲ ದಾಖಲೆಗಳನ್ನು ಮೀರಿದೆ. ವಿಶೇಷವಾಗಿ ನೆರೆಯ ಜಿಲ್ಲೆಗಳಾದ ಚಿಕ್ಕಮಗಳೂರು, ದಾವಣಗೆರೆ, ಶಿವಮೊಗ್ಗ ಭಾಗಗಳಲ್ಲಿ ಉತ್ತಮ ಮಳೆಯಾಗಿದ್ದು, ಅಲ್ಲಿನ ಕೆಲವು ಕೆರೆ ಕಟ್ಟೆಗಳು ಒಡೆದು ಹೋಗಿ ನಿರೀಕ್ಷೆಗೂ ಮೀರಿ ನೂರಾರು ಟಿಎಂಸಿ ನೀರು ನಿರಂತರವಾಗಿ ಜಿಲ್ಲೆಗೆ ಹರಿದು ಬಂದ ಪರಿಣಾಮವಾಗಿ ಚಳ್ಳಕೆರೆ ತಾಲೂಕಿನ ಬೊಂಬೇರಹಳ್ಳಿ, ಚೌಳೂರು ಮತ್ತು ಪರಶುರಾಮಪುರ ಬ್ಯಾರೇಜ್‌ಗಳಲ್ಲಿ ನೀರು ದಾಸ್ತಾನಾಗಿದ್ದು, ಜನರಲ್ಲಿ ಸಂತೋಷ ಉಂಟು ಮಾಡಿತು.
ಬೊಂಬೇರಹಳ್ಳಿ, ಚೌಳೂರು ಬ್ಯಾರೇಜ್ ತುಂಬಿ ಹರಿದರೆ ಪರಶುರಾಮಪುರ ಬ್ಯಾರೇಜ್ ಮಾತ್ರ ತುಂಬಿ ಹರಿಯದಿದ್ದರೂ ಸಾಕಷ್ಟು ಪ್ರಮಾಣದಲ್ಲಿ ನೀರು ದಾಸ್ತಾನಾಗಿದ್ದು, ಈ ಭಾಗದ ಸಾವಿರಾರು ಎಕರೆ ಪ್ರದೇಶಗಳ ತೋಟಗಳು, ಜಮೀನುಗಳು, ಹಸಿರಿನಿಂದ ಕಂಗೊಳಿಸುತ್ತಿದ್ದರೆ ಈ ಭಾಗದಲ್ಲಿರುವ ವಿಶೇಷವಾಗಿ ಬ್ಯಾರೇಜ್ ಪಾತ್ರದ ಸುತ್ತಮುತ್ತಲಿರುವ ನೂರಾರು ಬೋರ್‌ವೆಲ್‌ಗಳು ರಿಚಾರ್ಜ್ ಆಗಿ ಜಮೀನಿಗೆ ಸಾಕಾಗುವಷ್ಟು ನೀರು ನೀಡುವಲ್ಲಿ ಸಮರ್ಥವಾಗಿವೆ. ಸದರಿ ಮೂರು ಬ್ಯಾರೇಜ್‌ಗಳು ಸಹ ಪ್ರಸ್ತುತ ವರ್ಷದಲ್ಲೇ ತುಂಬಿದ್ದು, ಬರದ ನಾಡಿನಲ್ಲಿ ಗಂಗೆಯ ದರ್ಶನವಾಗಿ ಹಸಿರು ನಾಡು ಎಂದು ಹೆಸರು ಪಡೆಯುವ ಸಂದರ್ಭ ಒದಗಿ ಬಂದ ಹಿನ್ನೆಲೆಯಲ್ಲಿ ಕ್ಷೇತ್ರದ ಶಾಸಕ ಟಿ.ರಘುಮೂರ್ತಿಯವರು ಮೂರು ಕಡೆ ಬ್ಯಾರೇಜ್ ನಿರ್ಮಿಸಿ ಅಂತರ್ಜಲ ಅಭಿವೃದ್ಧಿಗೆ ಕಾರಣಕರ್ತರಾದ ಹಿನ್ನೆಲೆಯಲ್ಲಿ ಚಿತ್ರದುರ್ಗದ ಡಾ.ಶಿವಮೂರ್ತಿ ಮುರುಘಾ ಶರಣರು, ಸಾಣೇಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿಯವರೂ ಸೇರಿದಂತೆ ಹಲವಾರು ಸ್ವಾಮಿಗಳು ಈ ಪ್ರದೇಶಕ್ಕೆ ಆಗಮಿಸಿ ರೈತರ ಸಂತಸ ವ್ಯಕ್ತಪಡಿಸಿ ಉತ್ಸಾಹ ತುಂಬಿದರು.
ಪ್ರಸ್ತುತ ತಾಲೂಕಿನ ಪರಶುರಾಮಪುರ ಹೋಬಳಿಯ ಮೂರು ಬ್ಯಾರೇಜ್‌ಗಳ ವ್ಯಾಪ್ತಿಯಲ್ಲಿ ಸಮೃದ್ಧ ನೀರು ದಾಸ್ತಾನಾಗಿದ್ದು, ಈ ಭಾಗದ ಎಲ್ಲಾ ಬೋರ್‌ವೆಲ್‌ಗಳು ನೀರಿನಿಂದ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದ್ದು, ರೈತರ ಬಯಸುವ ಪ್ರಮಾಣದಲ್ಲಿ ನೀರು ಸಿಗುತ್ತಿದ್ದು, ಕೃಷಿ ಚಟುವಟಿಕೆಗಳಿಗೆ ಹೆಚ್ಚು ಉತ್ತೇಜನ ದೊರಕಿದೆ.
ಈ ಭಾಗದಲ್ಲಿ ರೈತರು ಈಗಾಗಲೇ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದು, ತಮ್ಮ ಜಮೀನುಗಳಿಗೆ ಅವಶ್ಯವಿರುವ ಬೀಜ ಹಾಗೂ ಗೊಬ್ಬರ ಖರೀದಿಯಲ್ಲಿ ಉತ್ಸಾಹಕರಾಗಿದ್ಧಾರೆ. ಒಟ್ಟಿನಲ್ಲಿ ಬಯಲು ಸೀಮೆಯ ಬರಡು ನಾಡಿನ ಜನತೆಗೆ ಹಸಿರು ಸಿರಿಯ ಸೃಷ್ಟಿಯ ಪ್ರಕೃತಿ ಮಾತೆ ಸೊಬಗನ್ನು ಅನುಭವಿಸಲು ಸಾಧ್ಯವಾಗಿದೆ.
ಮುಂದಿನ ದಿನಗಳಲ್ಲಾದರೂ ಈ ಭಾಗದ ರೈತರು ಉತ್ತಮ ಬೆಳೆ ಬೆಳೆದು ತಮ್ಮ ಎಲ್ಲಾ ಸಮಸ್ಯೆ ನಿವಾರಣೆಯಾಗಲಿ ಎಂದು ಈ ಭಾಗದ ಜನರು ಪ್ರಾರ್ಥಿಸುತ್ತಾರೆ.