ಚಳ್ಳಕೆರೆ: ನಿರಂತರ ಬರಗಾಲದಿಂದಾಗಿ ತಾಲೂಕಿನ ಜನರು ಕಂಗಾಲಾಗಿದ್ದಾರೆ. ತಾಲೂಕು ಕಚೇರಿಗೆ ಆಗಮಿಸಿದಾಗ ಅವರನ್ನು ವಿನಾಕಾಲ ಅಲೆದಾಡಿಸಲಾಗುತ್ತದೆ ಹಾಗೂ ಹಣಕ್ಕಾಗಿ ಪೀಡಿಸಿ ದೌರ್ಜನ್ಯ ಎಸಗಲಾಗುತ್ತಿದೆ ಎಂಬ ದೂರು ವ್ಯಾಪಕವಾಗಿದೆ. ಇದು ಮುಂದುವರೆದರೆ ಸಹಿಸಲಾಗದು ಎಂದು ಶಾಸಕ ಟಿ. ರಘುಮೂರ್ತಿ ಗುಡುಗಿದರು.
ಇಲ್ಲಿನ ತಾಲೂಕು ಕಚೇರಿ ಸೇರಿದಂತೆ ಹಲವಾರು ಕಚೇರಿಗಳಿಗೆ ಶನಿವಾರ ದಿಢೀರ್ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಅವರು ಮಾತನಾಡಿದರು.
ಆರಂಭದಲ್ಲಿ ಇಲ್ಲಿನ ಉಪ ನೋಂದಣಿ ಕಚೇರಿಗೆ ಆಗಮಿಸಿದ ಶಾಸಕರು, ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗವನ್ನು ತರಾಟೆಗೆ ತೆಗೆದುಕೊಂಡರು. ನಿಮ್ಮ ಕಚೇರಿಯಲ್ಲಿ ಸಾರ್ವಜನಿಕರಿಗೆ ಅನಗತ್ಯವಾಗಿ ಕಿರುಕುಳ ನೀಡುತ್ತಿರುವ ಬಗ್ಗೆ ಮಾಹಿತಿ ಬಂದಿದೆ. ಇದನ್ನು ಸರಿಪಡಿಸಿಕೊಂಡು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುವಂತೆ ತಾಕೀತು ಮಾಡಿದರು.
ಉಪ ಖಜಾನೆಗೂ ಭೇಟಿ ನೀಡಿ ಪರಿಶೀಲಿಸಿದರು. ವೃದ್ಧಾಪ್ಯ ವೇತನ, ವಿಧವಾ, ಅಂಗವಿಕಲ ವೇತನ ಮುಂತಾದವುಗಳನ್ನು ನಿಗದಿತ ಅವಧಿಯಲ್ಲೇ ಫಲಾನುಭವಿಗಳಿಗೆ ತಲುಪುವಂತೆ ಮಾಡಬೇಕು. ಎರಡ್ಮೂರು ತಿಂಗಳು ನೀವೇ ಹಣವನ್ನು ಇಟ್ಟುಕೊಂಡು ಪಾವತಿ ಮಾಡದೇ ಇದ್ದರೆ ಫಲಾನುಭವಿಗಳು ಜೀವನ ನಿರ್ವಹಣೆ ಮಾಡುವುದು ಹೇಗೆ ಎಂದು ಪ್ರಶ್ನಿಸಿದರು.
ತಾಲೂಕು ಕಚೇರಿಯ ಆಧಾರ್ ಕಾರ್ಡ್ ಶಾಖೆ, ವೃದ್ಧಾಪ್ಯ ವೇತನ ಮಂಜೂರು ಶಾಖೆ, ಆಹಾರ ಇಲಾಖೆ, ಪಹಣಿ ಶಾಖೆಗಳಿಗೆ ಭೇಟಿ ನೀಡಿದ ಪರಿಶೀಲಿಸಿದರು. ಸಾರ್ವಜನಿಕರಿಗೆ ಅನಗತ್ಯವಾಗಿ ಕಿರುಕುಳ ನೀಡುತ್ತಿರುವ ಬಗ್ಗೆ ಸಾಕಷ್ಟು ದೂರುಗಳಿವೆ. ಸರಿಯಾಗಿ ಕೆಲಸ ಮಾಡುವಂತೆ ಸಿಬ್ಬಂದಿ ವರ್ಗಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು. ಯಾರೇ ಆಗಲಿ ಸಾರ್ವಜನಿಕರನ್ನು ವಿನಾಕಾಲ ಅಲೆದಾಡಿಸಿದಲ್ಲಿ, ಹಣಕ್ಕಾಗಿ ಪೀಡಿಸಿದಲ್ಲಿ ಹಾಗೂ ಅವರ ಮೇಲೆ ದೌರ್ಜನ್ಯ ನಡೆಸಿದಲ್ಲಿ ಸಹಿಸಲಾಗದು. ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವ ಸಿಬ್ಬಂದಿಯನ್ನು ಕಚೇರಿಯಲ್ಲಿಟ್ಟುಕೊಳ್ಳಿ, ಕಾರ್ಯನಿರ್ವಹಿಸದ ಸಿಬ್ಬಂದಿಯನ್ನು ವರ್ಗಾವಣೆ ಮಾಡುವಂತೆ ಹಿರಿಯ ಅಕಾರಿಗಳಿಗೆ ಶಿಫಾರಸು ಮಾಡುವಂತೆ ತಹಶೀಲ್ದಾರ್‌ಗೆ ತಿಳಿಸಿದರು.
ಆಹಾರ ಇಲಾಖೆಯ ವಿಭಾಗಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಆಹಾರ ನಿರೀಕ್ಷಕ ರಂಗಸ್ವಾಮಿ ಮಾತನಾಡಿ, ಈ ತಿಂಗಳಲ್ಲಿ ಹೊಸ ಪಡಿತರ ಚೀಟಿಗಾಗಿ ಅರ್ಜಿಗಳು ಸಲ್ಲಿಕೆಯಾಗಿವೆ. 2100 ಅರ್ಜಿಗಳ ಪರಿಶೀಲನಾ ಕಾರ್ಯ ಮುಂದುವರೆದಿದೆ. ಶೀಘ್ರದಲ್ಲೆ ಎಲ್ಲರಿಗೂ ಪಡಿತರ ಚೀಟಿ ವಿತರಣೆ ಮಾಡಲಾಗುವುದು ಎಂದರು.
ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಆಹಾರ ಪದಾರ್ಥಗಳು ನ್ಯಾಯಬೆಲೆ ಅಂಗಡಿ ಮೂಲಕ ಯಾವ ರೀತಿ ಮಾರಾಟವಾಗುತ್ತಿವೆ ಎಂಬ ಬಗ್ಗೆ ನಿಗಾ ವಹಿಸಿ. ಪಡಿತರ ಚೀಟಿಗಳನ್ನು ತ್ವರಿತ ಗತಿಯಲ್ಲಿ ನೀಡುವಂತೆ ಶಾಸಕರು ಸೂಚನೆ ನೀಡಿದರು.
ಸರ್ವೆ ಇಲಾಖೆಗೆ ಭೇಟಿ ನೀಡಿದ ಶಾಸಕರು, ಗ್ರಾಮಾಂತರ ಪ್ರದೇಶದ ರೈತರು ತಮ್ಮ ಜಮೀನುಗಳ ಅಳತೆಗಾಗಿ ತಿಂಗಳಾನುಗಟ್ಟಲೇ ಓಡಾಡುತ್ತಾರೆ. ಯಾವ ರೈತರಿಗೂ ಅನ್ಯಾಯವಾಗದಂತೆ ಕಾನೂನು ಪ್ರಕಾರ ಕಾರ್ಯನಿರ್ವಹಿಸುವಂತೆ ಸರ್ವೆ ಅಧಿಕಾರಿ ಬಾಬುರೆಡ್ಡಿಗೆ ಸೂಚನೆ ನೀಡಿದರು.
ನಂತರ ಪೊಲೀಸ್ ಠಾಣೆಗೆ ತೆರಳಿದ ಅವರು, ಪಕ್ಕದಲ್ಲೇ ಮಿನಿ ವಿಧಾನಸೌಧ ಕಟ್ಟಡ ನಿರ್ಮಾಣವಾಗುತ್ತಿದೆ. ಹಾಗಾಗಿ ಠಾಣೆಯ ಮುಂಭಾಗದಲ್ಲಿ ವಿಶಾಲವಾದ ನಾಮಫಲಕ ಅಳವಡಿಸುವಂತೆ ಪಿಎಸ್‌ಐ ಕೆ. ಸತೀಶ್ ನಾಯ್ಕಗೆ ಸೂಚಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಎಂ. ಮಲ್ಲಿಕಾರ್ಜುನ, ನಗರಸಭಾ ಸದಸ್ಯರಾದ ರಮೇಶ್ ಗೌಡ, ಮಲ್ಲಿಕಾರ್ಜುನ, ತಾಪಂ ಸದಸ್ಯ ಜಿ. ವೀರೇಶ್, ಮ್ಯಾಡಂ ಶಿವಮೂರ್ತಿ, ಆರ್. ಪ್ರಸನ್ನಕುಮಾರ್, ಮಂಜುನಾಥ, ಸೈಯ್ಯದ್, ಹನುಮಂತಪ್ಪ ಮತ್ತಿತರರು ಇದ್ದರು.