ಚಳ್ಳಕೆರೆ: ಪ್ರಸ್ತುತ ವರ್ಷದ ಮುಂಗಾರು ಈಗಾಗಲೇ ಪ್ರಾರಂಭವಾಗಿದೆ. ಎಲ್ಲೆಡೆ ಉತ್ತಮ ಹದ ಮಳೆಯಾದ ಹಿನ್ನೆಲೆಯಲ್ಲಿ ರೈತರು ತಮ್ಮ ಕೃಷಿ ಚಟುವಟಿಕೆ ಆರಂಂಭಿಸಿದ್ದು, ಬಿತ್ತನೆ ಕಾರ್ಯಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ರೈತರಿಗೆ ಬಿತ್ತನೆ ಬೀಜ ಹಾಗೂ ಕೃಷಿ ಪರಿಕರ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಕೃಷಿ ಇಲಾಖೆಯ ಉಪ ಕೃಷಿ ನಿರ್ದೇಶಕ-2 ಪ್ರಭಾಕರ್ ತಿಳಿಸಿದರು.
ಇಲಾಖೆ ಆವರಣದಲ್ಲಿ ತಾಲೂಕಿನ ರೈತರಿಗೆ ಸಬ್ಸಿಡಿ ದರದಲ್ಲಿ ವಿತರಣೆ ಮಾಡುವ ಶೇಂಗಾ ಬೀಜ ಹಾಗೂ ಇತರೆ ಬೀಜಗಳನ್ನು ವಿತರಿಸುವ ಸಂದರ್ಭದಲ್ಲಿ ರೈತರಿಗೆ ಅನೇಕ ಉಪಯುಕ್ತ ಮಾಹಿತಿ ನೀಡಿದರು. ಪ್ರಸ್ತುತ ಸ್ಥಿತಿಯಲ್ಲಿ ಎಲ್ಲರೂ ಸಹ ತಮ್ಮ ಜಮೀನುಗಳಿಗೆ ಶೇಂಗಾ ಬೀಜವನ್ನು ಬಿತ್ತಲು ಹೆಚ್ಚು ಉತ್ಸಾಹಕರಾಗಿದ್ದು, ಶೇಂಗಾದ ಜೊತೆಗೆ ಇತರೆ ಬೀಜಗಳನ್ನು ಬಿತ್ತುವಂತೆ ಮನವಿ ಮಾಡಿದರು. ರೈತರು ತಮ್ಮ ಯಾವುದೇ ಸಮಸ್ಯೆಗಳಿದ್ದಲ್ಲಿ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವಂತೆ ಮನವಿ ಮಾಡಿದರು.
ತಾಪಂ ಅಧ್ಯಕ್ಷೆ ವಿಜಯಲಕ್ಷ್ಮೀ ಬಿತ್ತನೆ ಬೀಜ ವಿತರಿಸಿ ಮಾತನಾಡಿ, ಕೃಷಿ ಇಲಾಖೆ ಯಾವುದೇ ಸಂದರ್ಭದಲ್ಲೂ ರೈತರಿಗೆ ಕೊರತೆ ಉಂಟಾಗದಂತೆ ಜಾಗ್ರತೆ ವಹಿಸಬೇಕು ಎಂದರು. ಸಹಾಯಕ ಕೃಷಿ ನಿರ್ದೇಶಕ ಡಾ| ಮೋಹನ್‌ಕುಮಾರ್ ಮಾತನಾಡಿ, ತಾಲೂಕಿನಾದ್ಯಂತ ಒಟ್ಟು 85 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡುವ ಅವಕಾಶವಿದೆ. ಈಗಾಗಲೇ ಸುಮಾರು 11 ಸಾವಿರ ಕ್ವಿಂಟಲ್ ಶೇಂಗಾ ಬಿತ್ತನೆ ಬೀಜ ದಾಸ್ತಾನು ಮಾಡಲಾಗಿದೆ. ತಾಲ್ಲೂಕಿನ 10 ರೈತ ಸಂಪರ್ಕ ಕೇಂದ್ರಗಳಲ್ಲಿ ಬೀಜಗಳನ್ನು ವಿತರಿಸಲಾಗುವುದು ಎಂದರು. ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ಆಂಜನೇಯ, ಸದಸ್ಯರಾದ ಎಚ್.ಸಮರ್ಥರಾಯ, ರಂಜಿತಾ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.