ಚಳ್ಳಕೆರೆ: ಗೋಶಾಲೆಗಳಿಗೆ ಸಾಗಿಸುವ ಟ್ರ್ಯಾಕ್ಟರ್‌ನಲ್ಲಿ ಭಾರವಾದ ಕಲ್ಲುಗಳು ಮತ್ತು ಮೇವಿಗೆ ನೀರು ಹಾಕಿ ಸರಬರಾಜು ಮಾಡುತ್ತಿದ್ದಾರೆ ಎಂಬುದನ್ನು ರೈತರು ಪತ್ತೆ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಈ ಬಗ್ಗೆ ಪತ್ರಿಕೆಗೆ ಮಾಹಿತಿ ನೀಡಿದ ರೈತ ಮುಖಂಡ ಟಿ.ಮಂಜುನಾಥ ಮತ್ತು ತಂಡ ಶನಿವಾರ ಬೆಳಗ್ಗೆ ಇಲ್ಲಿನ ಎಜಿ ರಸ್ತೆಯಲ್ಲಿನ ಸರ್ಕಾರಿ ಗೋಶಾಲೆಗೆ ಟ್ರ್ಯಾಕ್ಟರ್ ಮೂಲಕ ಮೇವು ಸರಬರಾಜು ಆಗುತ್ತಿದ್ದ ಸಂದರ್ಭದಲ್ಲಿ ಅನುಮಾನಗೊಂಡ ಇವರು ಟ್ರ್ಯಾಕರ್ ನಿಲ್ಲಿಸಿ ತಪಾಸಣೆ ನಡೆಸಿದಾಗ ಮೇವಿನ ಜತೆಯಲ್ಲಿ ಸುಮಾರು ಎರಡು ಟನ್‌ನಷ್ಟು ಕಲ್ಲುಗಳು ಹಾಗೂ ಮೇವಿಗೆ ನೀರು ಹಾಕಿ ಸರಬರಾಜು ಮಾಡುತ್ತಿರುವುದು ಕಂಡು ಬಂದಿದ್ದು, ಕೂಡಲೇ ಟ್ರ್ಯಾಕ್ಟರ್ ತಡೆದು ತಹಶೀಲ್ದಾರ್‌ಗೆ ಮಾಹಿತಿ ನೀಡಿದ್ಧಾರೆ.
ತಹಶೀಲ್ದಾರ್ ಎಂ.ಮಲ್ಲಿಕಾರ್ಜುನ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ರೈತರು ಮಾಡಿದ ಆರೋಪದಲ್ಲಿ ಸತ್ಯಾಂಶವಿದ್ದು, ಕೂಡಲೇ ಟ್ರ್ಯಾಕ್ಟರ್ ಚಾಲಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಜಾನುವಾರುಗಳಿಗೆ ನಿತ್ಯ ನಿಗದಿತ ಪ್ರಮಾಣದಲ್ಲೇ ಮೇವು ನೀಡಬೇಕು. ಯಾವುದೇ ಕಾರಣಕ್ಕೂ ಮೇವಿಗೆ ನೀರು ಹಾಕುವುದು. ಕಲ್ಲು ಇಟ್ಟು ಹೆಚ್ಚು ತೂಕ ತೋರಿಸುವುದನ್ನು ಮಾಡಿದರೆ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರಲ್ಲದೆ ಪ್ರಕರಣ ದಾಖಲಿಸಿ ಬಂಧಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ರೈತ ಗಾದ್ರಿಪಾಲಯ್ಯ, ಒಬಯ್ಯ, ಪಾಲಯ್ಯ, ಬಸವರಾಜು ಮಾತನಾಡಿ, ಕಳೆದ ಹಲವು ತಿಂಗಳಿಂದ ಗೋಶಾಲೆಗೆ ಮೇವು ಸರಬರಾಜಾಗುತ್ತಿದ್ದು, ಈ ಬಗ್ಗೆ ಜಾನುವಾರುಗಳಿಗೆ ಸಮರ್ಪಕವಾಗಿ ಮೇವು ವಿತರಿಸಲಾಗುತ್ತಿದೆ ಎಂದು ಹೇಳಲಾಗಿತ್ತಾದರೂ ಕೆಲವೊಮ್ಮೆ ಜಾನುವಾರುಗಳಿಗೆ ಮೇವು ಸಿಗುತ್ತಿರಲಿಲ್ಲ. ಇದದಿಂದ ಅನುಮಾನಗೊಂಡ ನಾವುಗಳು ಶನಿವಾರ ಬೆಳಗ್ಗೆ ರಸ್ತೆಯಲ್ಲೇ ಕಾದಿದ್ದು, ಬಂದ 7 ಲೋಡ್ ಮೇವನ್ನು ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ ಎಂದರು.
ತಹಶೀಲ್ದಾರ್ ಎಂ.ಮಲ್ಲಿಕಾರ್ಜುನ್ ಗೋಶಾಲೆಯ ಮೇಲ್ತುವಾರಿ ಗ್ರಾಮ ಲೆಕ್ಕಿಗ ರಾಘವೇಂದ್ರ ಅವರಿಗೆ ಪ್ರತಿಲೋಡ್ ಮೇವನ್ನು ಪರಿಶೀಲಿಸಬೇಕು. ಗುತ್ತಿಗೆದಾರ, ಸರ್ಕಾರಿ ಅಧಿಕಾರಿ ಸಮಕ್ಷಮದಲ್ಲಿ ತೂಕ ಮಾಡಿಸಿ ಲಿಖೀತ ಮೂಲಕ ಬರೆದು ಮೇವಿನಲ್ಲಿ ತೇವಾಂಶ ಅಡಕವಾಗಿದೆ ಎಂಬ ಬಗ್ಗೆ ಪರಿಶೀಲಿಸಬೇಕೆಂದು ಸೂಚಿಸಿದರು.
ತಾಲೂಕಿನ ಯಾವ ಭಾಗದಲ್ಲೂ ಕಳೆದ ಒಂದೆರಡು ವರ್ಷಗಳಿಂದ ಮೇವು ಇಲ್ಲ. ಬರ ಹಿನ್ನೆಲೆಯಲ್ಲಿ ತಾಲೂಕಿನ ಸಾವಿರಾರು ಜಾನುವಾರುಗಳು ನಿತ್ಯ ಮೇವು ಮತ್ತು ನೀರಿಗಾಗಿ ಪರಿತಪಿಸುತ್ತಿದ್ದು, ಸಾರ್ವಜನಿಕರ ಒತ್ತಾಯದ ಮೇರೆಗೆ ತಾಲೂಕಾಡಳಿತ ನಿತ್ಯ ಮೇವು ವಿತರಿಸುತ್ತಿದ್ದು, ಅದರಲ್ಲೂ ಸಹ ಮೇವಿನಲ್ಲಿ ಕಲ್ಲು, ನೀರು ಹಾಕಿ ತೂಕ ಹೆಚ್ಚಿಸುವ ಮೂಲಕ ಸರ್ಕಾರಕ್ಕೆ ಮೋಸಗೊಳಿಸುವ ಯತ್ನ ನಡೆದಿದ್ದು, ಇದನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು.
•
ಸಿ.ಪಿ.ಮಹೇಶ್‌ಕುಮಾರ್,
ಸಿದ್ದೇಶ್, ಗೋವು ಪಾಲಕರು.