ಚಳ್ಳಕೆರೆ: ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ವೈದ್ಯರ ಹುದ್ದೆ ಖಾಲಿ ಇದ್ದು, ಕೆಪಿಎಸ್‌ಸಿ ಮೂಲಕ ವೈದ್ಯರ ನೇಮಕ ತಡವಾಗುತ್ತಿದೆ. ಹಾಗಾಗಿ ಸ್ಥಳೀಯವಾಗಿ ಲಭ್ಯವಿರುವ ಎಂಬಿಬಿಎಸ್ ವೈದ್ಯರನ್ನು ಸೇವೆಗೆ ನಿಯೋಜಿಸಿಕೊಳ್ಳಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಅನುಮತಿ ನೀಡಲಾಗಿದೆ.
ಸುಮಾರು ಎರಡು ಸಾವಿರ ವೈದ್ಯರ ನೇಮಕಕ್ಕೆ ಚಿಂತನೆ ನಡೆದಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಬಿ. ಶ್ರೀರಾಮುಲು ಹೇಳಿದರು.
ಇಲ್ಲಿನ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ 6.40 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಸಾರ್ವಜನಿಕ ಸೇವೆಗೆ ಸಮರ್ಪಿಸಿ ಅವರು ಮಾತನಾಡಿದರು. ಆಸ್ಪತ್ರೆಗಳಲ್ಲಿ ವೈದ್ಯರೊಂದಿಗೆ ಸದಾ ಕಾಲ ರೋಗಿಯ ಸೇವೆಮಾಡುವ ಶುಶ್ರೂಷಕಿಯರು ಮತ್ತು ಇತರೆ ಸಿಬ್ಬಂದಿ ವರ್ಗದವರಿಗೂ ಇನ್ನೂ ಹೆಚ್ಚಿನ ವೇತನ ನೀಡಲು ಸರ್ಕಾರ ನಿರ್ಧರಿಸಿದೆ. ಎನ್‌ಆರ್‌ಎಚ್‌ಎಂ ಸೇರಿದಂತೆ ವಿವಿಧ ತಾತ್ಕಾಲಿಕ ಹುದ್ದೆಗಳಲ್ಲಿರುವ ಎಲ್ಲರಿಗೂ ಸಮಾನ ವೇತನವಾದ 17,500 ರೂ. ವೇತನ ನೀಡುವ ಚಿಂತನೆ ಇದೆ. ಸಿಬ್ಬಂದಿ ಕಾಯಂಗೊಳಿಸುವ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಹಿಂದೆ 2009 ರಲ್ಲಿ ನಾನು ಆರೋಗ್ಯ ಸಚಿವನಾಗಿದ್ದಾಗ 100 ಹಾಸಿಗೆಗಳ ಆಸ್ಪತ್ರೆ ಉದ್ಘಾಟಿಸಿದ್ದೆ. ಅಂದು ಡಿ. ಸುಧಾಕರ್ ಶಾಸಕರಾಗಿದ್ದರು. 10 ವರ್ಷಗಳ ನಂತರ ಮತ್ತೆ ಆರೋಗ್ಯ ಸಚಿವನಾಗಿ 30 ಹಾಸಿಗೆಗಳ ಆಸ್ಪತ್ರೆಯನ್ನು ಉದ್ಘಾಟಿಸಲು ಸಂತೋಷವಾಗುತ್ತಿದೆ. ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ವೈದ್ಯರು, ಸಿಬ್ಬಂದಿ ಜೊತೆಗೆ ಸುಸಜ್ಜಿತ ಪ್ರಯೋಗಾಲಯ, ರಕ್ತ ಪರೀಕ್ಷೆ ಕೇಂದ್ರ ಸೇರಿದಂತೆ ಎಲ್ಲಾ ಸೌಲಭ್ಯವನ್ನು ಶೀಘ್ರದಲ್ಲೇ ನೀಡುವುದಾಗಿ ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಟಿ. ರಘುಮೂರ್ತಿ ಮಾತನಾಡಿ, ಸರ್ಕಾರ ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಅಗತ್ಯ ಸೌಲಭ್ಯ ಒದಗಿಸಿಕೊಟ್ಟಿದೆ. ಯಾವುದೇ ರೋಗಿ ತೊಂದರೆಗೆ ಸಿಲುಕದಂತೆ ವೈದ್ಯರು ಹಾಗೂ ಸಿಬ್ಬಂದಿ ವರ್ಗ ಉತ್ತಮ ಚಿಕಿತ್ಸೆ ನೀಡುವ ಮೂಲಕ ಸಕಾರಾತ್ಮಕವಾಗಿ ಸ್ಪಂದಿಸಬೇಕು. ಕ್ಷೇತ್ರದಲ್ಲಿ ಜಿಟಿಟಿಸಿ, ಇಂಜಿನಿಯರಿಂಗ್, ಖಾಸಗಿ ಬಸ್‌ನಿಲ್ದಾಣ ಮುಂತಾದ ಕಾಮಗಾರಿಗಳ ಉದ್ಘಾಟನೆಯನ್ನು ಸಚಿವ ಶ್ರೀರಾಮುಲು ನೆರವೇರಿಸಬೇಕಿದೆ.
ಕ್ಷೇತ್ರದ ಅಭಿವೃದ್ಧಿಗೆ ಅಗತ್ಯವಿರುವ ಹಣವನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಪಾಲಾಕ್ಷ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಪಂ ಸದಸ್ಯರಾದ ಪ್ರಕಾಶಮೂರ್ತಿ, ಆನಂದ್, ಎನ್.ಓಬಳೇಶ್, ಓ.ಮಂಜುನಾಥ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮೀ, ನಗರಸಭಾ ಸದಸ್ಯರಾದ ಎಸ್. ಜಯಣ್ಣ, ವೆಂಕಟೇಶ್, ಪಾಲಮ್ಮ, ರಮೇಶ್ ಗೌಡ, ವೈ. ಪ್ರಕಾಶ್, ವಿರೂಪಾಕ್ಷಿ, ತಾಲೂಕು ಆರೋಗ್ಯಾಧಿಕಾರಿ ಡಾ| ಎನ್. ಪ್ರೇಮಸುಧಾ, ಆಡಳಿತಾಧಿಕಾರಿ ಡಾ| ಬಸವರಾಜು, ಮಂಜಪ್ಪ, ಅಮಿತ್ ಗುಪ್ತ, ಜಯಲಕ್ಷ್ಮೀ, ಶಮಾ ಪರ್ವಿನ್ ಉಪಸ್ಥಿತರಿದ್ದರು.