Advertisement

ದೇವರ ಎತ್ತುಗಳಿಗೆ ನೀರಿನ ಬರ

12:53 PM Jan 16, 2020 | Naveen |

ಚಳ್ಳಕೆರೆ: ತಾಲೂಕಿನ ನನ್ನಿವಾಳಗ್ರಾಮ ಪಂಚಾಯತ್‌ ವ್ಯಾಪ್ತಿಯಬೊಮ್ಮದೇವರಹಟ್ಟಿಯಲ್ಲಿರುವ ದೇವರ ಎತ್ತುಗಳು ಕುಡಿಯುವ ನೀರಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

Advertisement

ಬೊಮ್ಮದೇವರ ‌ಹಟ್ಟಿಯಲ್ಲಿ ಈಗಾಗಲೇ 300ಕ್ಕೂ ಹೆಚ್ಚು ಜಾನುವಾರುಗಳಿದ್ದು, ಕಳೆದ ಒಂದು ತಿಂಗಳಿನಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಪ್ರತಿ ನಿತ್ಯ ಕಿಲಾರಿಗಳು ದೇವರ ಜಾನುವಾರುಗಳಿಗೆ ಬೇರೆ ಕಡೆಯಿಂದ ನೀರು ತಂದು ಬೊಗಸೆಯಲ್ಲೇ ನೀರನ್ನು ಕುಡಿಸಿ ಅವುಗಳ ಜೀವ ರಕ್ಷಣೆ ಮಾಡುತ್ತಿದ್ದಾರೆ. ಕಿಲೋಮೀಟರ್‌ ಗಟ್ಟಲೆ ಅಲೆಯುವ ದೇವರ ಎತ್ತುಗಳು ದಣಿವಾಗಿ ಬಾಯಾರಿದಾಗ ನೀರಿಗಾಗಿ ಅಂಗಲಾಚುತ್ತವೆ.

ಆ ಸಂದರ್ಭದಲ್ಲಿ ಕಿಲಾರಿಗಳು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹುಡುಕಾಡಿ ನೀರನ್ನು ತಂದು ಸ್ವಲ್ಪ ಕುಡಿಸಿ ದಣಿವಾರಿಸುತ್ತಿದ್ದಾರೆ. ಕಳೆದ ಒಂದು ತಿಂಗಳಿನಿಂದ ಕಿಲಾರಿಗಳಾದ ಪಾಲಯ್ಯ, ಚಿನ್ನಯ್ಯ, ಜೋಗಯ್ಯ ನೀರು ಒದಗಿಸಲು ಪಡುತ್ತಿರುವ ಪರಿಪಾಟಲು ದೇವರಿಗೇ ಪ್ರೀತಿ.

ಬೊಮ್ಮದೇವರಹಟ್ಟಿಯ ದೇವರ ಎತ್ತುಗಳು ವಾಸವಾಗಿರುವ ಜಾಗದಲ್ಲಿ ಎರಡು ಕೊಳವೆಬಾವಿಗಳಿಂದ ನೀರಿನ ತೊಟ್ಟಿಗಳಿಗೆ ನೀರು ಪೂರೈಕೆಮಾಡಲಾಗುತ್ತಿತ್ತು. ಕಳೆದ ಕೆಲವು ತಿಂಗಳ ಹಿಂದೆ ಬಂದ ಮಳೆಯಿಂದಾಗಿ ನೀರು ಸಮೃದ್ಧವಾಗಿ ಲಭ್ಯವಿತ್ತು. ಆದರೆ ನೀರು ಸರಬರಾಜು
ಮಾಡಲು ಬೆಸ್ಕಾಂ ಕೆಲವೇ ಅಡಿಗಳ ದೂರದಲ್ಲಿ ವಿದ್ಯುತ್‌ ಸಂಪರ್ಕಕ್ಕೆ ಹಾಕಿರುವ ಟ್ರಾನ್ಸ್‌ಫಾರ್ಮರ್‌ ಸುಟ್ಟು ಹೋಗಿ ತಿಂಗಳು ಕಳೆದಿದೆ. ಈ ಬಗ್ಗೆ ಕಿಲಾರಿಗಳು ಹಾಗೂ ಗ್ರಾಮಸ್ಥರು ತಹಶೀಲ್ದಾರ್‌, ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳು ಮತ್ತು ಬೆಸ್ಕಾಂ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಟಾನ್ಸ್‌ಫಾರ್ಮರ್‌ ದುರಸ್ತಿ ಮಾಡಿಸುವಂತೆ ಒತ್ತಾಯಿಸಿದ್ದಾರೆ.

ಟಾನ್ಸ್‌ಫಾರ್ಮರ್‌ ಸುಟ್ಟು ಹೋದ ಕಾರಣ ದೇವರ ಎತ್ತುಗಳಿಗೆ ಕುಡಿಯುವ ನೀರಿನ ಅಭಾವ ಎದುರಾಗಿದೆ. ಕೂಡಲೇ ಟಾನ್ಸ್ ಫಾರ್ಮರ್‌ ದುರಸ್ತಿ ಮಾಡಿಸಿ
ಅಥವಾ ಬದಲಾಯಿಸಿ ಎಂದು ಮನವಿ ಮಾಡಿದ್ದರೂ ಅಧಿಕಾರಿಗಳು ಮಾತ್ರ ಸ್ಥಳಕ್ಕೆ ಭೇಟಿ ನೀಡದೆ ನಿರ್ಲಕ್ಷ್ಯ ತಾಳಿದ್ದಾರೆ. ಹಾಗಾಗಿ ಜಾನುವಾರುಗಳು ಕುಡಿಯುವ ನೀರಿಗಾಗಿ ಪರಿತಪಿಸುವ ಸ್ಥಿತಿ ಉಂಟಾಗಿದೆ.

Advertisement

ಕಿಲಾರಿಗಳಿಗೆ ಜಾನುವಾರುಗಳನ್ನು ರಕ್ಷಿಸಿಕೊಳ್ಳುವುದೇ ಸವಾಲಾಗಿ ಪರಿಣಮಿಸಿದೆ. ಇಷ್ಟೆಲ್ಲ ಆದರೂ ಬೆಸ್ಕಾಂ ಅಧಿಕಾರಿಗಳು ಮಾತ್ರ ಟ್ರಾನ್ಸ್ ಫಾರ್ಮರ್‌ ದುರಸ್ತಿ ಮಾಡಿಸದೆ ನಿರ್ಲಕ್ಷ್ಯ ತಾಳಿರುವುದು ಕಿಲಾರಿಗಳು ಹಾಗೂ ಗ್ರಾಮಸ್ಥರ ಬೇಸರಕ್ಕೆ ಕಾರಣವಾಗಿದೆ.

„ಕೆ.ಎಸ್‌. ರಾಘವೇಂದ್ರ

Advertisement

Udayavani is now on Telegram. Click here to join our channel and stay updated with the latest news.

Next