Advertisement

ಕಂಬಳಿ ನೇಯ್ಗೆಗೆ ಆಧುನಿಕ ಸ್ಪರ್ಶ

12:07 PM Jul 15, 2019 | Naveen |

ಚಳ್ಳಕೆರೆ: ಕಂಬಳಿ ನೇಯ್ಗೆಗೆ ಆಧುನಿಕ ಸ್ಪರ್ಶ ನೀಡಿ ಮಾರುಕಟ್ಟೆಗೆ ಒದಗಿಸಲು ಚಿಂತನೆ ನಡೆದಿದೆ ಎಂದು ಕೇಂದ್ರ ಉಣ್ಣೆ ಕೈಮಗ್ಗ ನಿಗಮದ ಎನ್‌ಐಡಿ ಸ್ವಯಂ ಸೇವಾ ಸಂಸ್ಥೆಯ ನಿರ್ದೇಶಕಿ ನಿತ್ಯಾ ಅಮರನಾಥ ಹೇಳಿದರು.

Advertisement

ಇಲ್ಲಿನ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಬಳಿಯ ಕಂಬಳಿ ಮಾರುಕಟ್ಟೆಗೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಕೆಲವೇ ಜಿಲ್ಲೆಗಳಲ್ಲಿ ಮಾತ್ರ ಉಣ್ಣೆ ಕೈಮಗ್ಗ ನಿಗಮದ ಮೂಲಕ ನೇಕಾರರು ಸ್ವತಃ ಕೈಯಲ್ಲಿ ಕಂಬಳಿ ನೇಯ್ದ ಮಾರಾಟ ಮಾಡುತ್ತಿದ್ದಾರೆ. ಬದಲಾದ ಕಾಲಘಟ್ಟದಲ್ಲಿ ನೇಯ್ದ ಕಂಬಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಲಭ್ಯವಾಗಿದೆ. ಹೀಗಾಗಿ ಉಣ್ಣೆ ಕೈಮಗ್ಗಕ್ಕೆ ಆಧುನಿಕ ಸ್ಪರ್ಶ ನೀಡಲಾಗುತ್ತಿದೆ ಎಂದು ತಿಳಿಸಿದರು.

ಗ್ರಾಮೀಣ ಭಾಗಗಳ ಉಣ್ಣೆ ಕೈಮಗ್ಗದ ಅಭಿವೃದ್ಧಿ ಹಿನ್ನೆಲೆಯಲ್ಲಿ ನವದೆಹಲಿಯ ನಮ್ಮ ಸಂಸ್ಥೆಯ ಹಲವಾರು ಪರಿಣಿತ ಪ್ರತಿನಿಧಿಗಳು ರಾಜ್ಯದ ಕೆಲವು ಜಿಲ್ಲೆಗಳಿಗೆ ನಿಯೋಜನೆಗೊಂಡಿದ್ದು, ನಾನು ಸಹ ಚಿತ್ರದುರ್ಗ ಜಿಲ್ಲೆಗೆ ನಿಯೋಜನೆಯಾಗಿದ್ದು, ಜಿಲ್ಲೆಯಾದ್ಯಂತ ಪ್ರವಾಸ ನಡೆಸಿ ಉಣ್ಣೆ ಕೈಮಗ್ಗ ಅಭಿವೃದ್ಧಿ ಕುರಿತಂತೆ ಚರ್ಚಿಸಿ ಉತ್ತಮ ಗುಣಮಟ್ಟದ ಕಂಬಳಿ ತಯಾರಿಕೆಯ ಬಗ್ಗೆ ನೇಕಾರರಿಗೆ ಮಾರ್ಗದರ್ಶನ ಮತ್ತು ತರಬೇತಿ ನೀಡಲಾಗುವುದು ಎಂದರು.

ತಾಲ್ಲೂಕಿನ ಗೊರ‌್ಲಕಟ್ಟೆ, ಚನ್ನಗಾನಹಳ್ಳಿ, ಓಬಳಾಪುರ, ನೇರ‌್ಲಕುಂಟೆ, ಚೌಳೂರು, ಕಾಮಸಮುದ್ರ, ಮೊಳಕಾಲ್ಮೂರು ತಾಲೂಕಿನ ಕೋನಸಾಗರ, ಕೊಂಡ್ಲಹಳ್ಳಿ ಗ್ರಾಮಗಳ ಕೈಮಗ್ಗದಲ್ಲಿ ಕಂಬಳಿ ನೇಕಾರರು ಕಾರ್ಯನಿರ್ವಹಣೆ ಪರಿಶೀಲಿಸಿದರು.

ಸಂಸ್ಥೆಯ ರೇಷ್ಮ ವಿಭಾಗದ ಮತ್ತೂರ್ವ ಸಂಚಾಲಕಿ ಮೀನಾನಾಯ್ಕ ಮಾತನಾಡಿ, ಉಣ್ಣೆ ಕೈಮಗ್ಗವನ್ನು ಆಧುನಿಕತೆಗೊಳಿಸಿದಲ್ಲಿ ಮಾತ್ರ ಉತ್ತಮ ಮಾರುಕಟ್ಟೆ ದೊರೆಯಲಿದೆ. ಇತ್ತೀಚಿನ ದಿನಗಳಲ್ಲಿ ಕೈಯಲ್ಲಿ ತಯಾರಾಗುವ ಕಂಬಳಿ ಖರೀದಿಸಲು ಖರೀದಿದಾರರು ಮುಂದೆ ಬರುತ್ತಿಲ್ಲ. ವೈಜ್ಞಾನಿಕವಾಗಿ ನೇಯ್ದ ಕಂಬಳಿಗಳು ಮಾತ್ರ ಸುಧಿಧೀರ್ಘ‌ ಬಾಳಿಕೆ ಜೊತೆಗೆ ಉತ್ತಮ ಆರೋಗ್ಯವನ್ನು ನೀಡುವ ಸಾಮರ್ಥ್ಯ ಹೊಂದಿವೆ. ಎಚ್ಐಸಿ ಯೋಜನೆಯಡಿ ಕಂಬಳಿ ಮಾರುಕಟ್ಟೆಯ ಪುನಶ್ಚೇತನಕ್ಕೆ ನಿರ್ಧರಿಸಲಾಗಿದೆ ಎಂದರು.

Advertisement

ಕರ್ನಾಟಕ ರಾಜ್ಯ ಉಣ್ಣೆ ಮಹಾಮಂಡಲದ ರಾಜ್ಯಾಧ್ಯಕ್ಷ ಎನ್‌.ಜಯರಾಂ ಮಾತನಾಡಿ, ಕಳೆದ ಹಲವಾರು ದಶಕಗಳಿಂದ ಅಸ್ಥಿತ್ವದಲ್ಲಿರುವ ಇಲ್ಲಿನ ಕಂಬಳಿ ಮಾರುಕಟ್ಟೆ ಹೆಚ್ಚು ಲಾಭವನ್ನು ಗಳಿಸಲು ಸಾಧ್ಯವಾಗುತ್ತಿಲ್ಲ. ಇತ್ತೀಚಿನ ದಿನಗಳಲ್ಲಿ ಯಂತ್ರಗಳ ಸಹಾಯದಿಂದ ಕಂಬಳಿಗಳ ಉತ್ಪಾದನೆಯಾಗುತ್ತಿದ್ದು, ಇದು ಪರ್ಯಾಯವಾಗಿ ನೇಕಾರರಿಗೆ ಆರ್ಥಿಕ ಹೊಡೆತ ನೀಡುತ್ತಿದೆ. ಗ್ರಾಮೀಣ ಭಾಗಗಳಲ್ಲಿ ವಾರಕ್ಕೆ ಐದಾರು ಕಂಬಳಿ ನೇಯಲು ಮಾತ್ರ ನೇಕಾರನಿಗೆ ಸಾಧ್ಯ. ಅದೂ ಸಹ ಮಾರುಕಟ್ಟೆಯಲ್ಲಿ ಬಿಕರಿಯಾಗದಿದ್ದರೆ. ಅವನ ಸಮಯ ವ್ಯರ್ಥ ಜೀವನ ನಿರ್ವಹಿಸಲು ಕಷ್ಟಕರವಾಗುತ್ತದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಜವಳಿ ನಿಗಮದ ಸರ್ಕಾರೇತರ ಸಂಸ್ಥೆ ಎನ್‌ಐಡಿ ನೇಕಾರರ ಸಮಸ್ಯೆಗಳ ಬಗ್ಗೆ ಅಧ್ಯಯನ ನಡೆಸಿ ಗುಣಮಟ್ಟದ ಕಂಬಳಿ ತಯಾರಿಕೆ ಬಗ್ಗೆ ಮಾಹಿತಿ ನೀಡಲು ಬಂದಿರುವುದು ಸಂತಸ ತಂದಿದೆ ಎಂದರು.

ಈಗಾಗಲೇ ಎಲ್ಲಾ ನೇಕಾರರಿಗೂ ಮಾಹಿತಿ ನೀಡಿದ್ದು, ತರಬೇತಿ ನೀಡಲಾಗುವುದು. ಇದರಿಂದ ಕಡಿಮೆ ಅವಧಿಯಲ್ಲಿ ಗುಣಮಟ್ಟದ ಕಂಬಳಿ ತಯಾರಿಕೆಗೆ ಅವಕಾಶ ದೊರಯಲಿದ್ದು, ಮಾರುಕಟ್ಟೆಯಲ್ಲೂ ಸಹ ಹೆಚ್ಚಿನ ಬೆಲೆ ಸಿಗಲಿದೆ. ಕೇಂದ್ರ ಸರ್ಕಾರ ಈ ಹಿಂದೆ ಮಿಲಿಟರಿ ಮತ್ತು ಪೊಲೀಸ್‌ ಇಲಾಖೆಗೆ ಕೈಯಲ್ಲಿ ನೇಯ್ದ ಕಂಬಳಿ ಖರೀದಿಸುತ್ತಿದ್ದು, ಈ ಪರಂಪರೆ ಮುಂದುವರೆಯಬೇಕು ಎಂದರು.

ಜಿಲ್ಲಾ ಡಿಸಿಸಿ ಬ್ಯಾಂಕ್‌ನ ನೂತನ ನಿರ್ದೇಶಕ ಸೂರನಗಳ್ಳಿ ಕೆ.ಜಗದೀಶ್‌, ಚಿಕ್ಕಮಧುರೆಯ ಬಿ.ಮಲ್ಲಿಕಾರ್ಜುನಪ್ಪ, ಓಬಯ್ಯನಹಟ್ಟಿಯ ಚಿದಾನಂದಪ್ಪ, ಪರಶುರಾಮಪುರದ ಮಹಾಲಿಂಗಪ್ಪ, ಚಿಕ್ಕಮಧುರೆಯ ಚಂದ್ರಣ್ಣ, ಓಬಳಾಪುರದ ಸಿದ್ದೇಶ್‌, ಗೊರ‌್ಲಕಟ್ಟೆಯ ಅಜ್ಜಣ್ಣ ಮುಂತಾದವರು ಉಪಸ್ಥಿತರಿದ್ದರು. ಕಾರ್ಯದರ್ಶಿ ಪಾತಲಿಂಗಪ್ಪ ಸ್ವಾಗತಿಸಿದರು. ಸಹ ಕಾರ್ಯದರ್ಶಿ ಗಂಗಾಧರ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next