ಚಳ್ಳಕೆರೆ: ಕಳೆದ ಏಪ್ರಿಲ್ನಲ್ಲಿ ನಡೆದ ಎಸ್‌ಎಸ್‌ಎಲ್ಸಿ ಪರೀಕ್ಷೆಯಲ್ಲಿ ಜಿಲ್ಲೆ ಉತ್ತಮ ಸ್ಥಾನ ಪಡೆದಿದೆ. ಇನ್ನೂ ಉತ್ತಮ ಸ್ಥಾನವನ್ನು ಪಡೆಯುವ ನಿಟ್ಟಿನಲ್ಲಿ ಆರಂಭದಿಂದಲೇ ಗುಣಾತ್ಮಕ ಶಿಕ್ಷಣ ನೀಡುವ ಮೂಲಕ ಜಿಲ್ಲೆಯ ಎಸ್‌ಎಸ್‌ಎಲ್ಸಿ ಪರೀಕ್ಷೆ ಫಲಿತಾಂಶ ಸುಧಾರಣೆಗೆ ಮುಂದಾಗಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ. ರೇವಣಸಿದ್ದಪ್ಪ ಕರೆ ನೀಡಿದರು.
ಇಲ್ಲಿನ ರೋಟರಿ ಬಾಲಭವನದಲ್ಲಿ ಶನಿವಾರ ನಡೆದ ಮೊಳಕಾಲ್ಮೂರು ಮತ್ತು ಚಳ್ಳಕೆರೆ ತಾಲೂಕುಗಳ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಾಲೆಗಳು ಪ್ರಾರಂಭವಾಗಿ ಮೂರು ತಿಂಗಳು ಕಳೆಯುತ್ತಾ ಬಂದಿದೆ. ಈ ಹಂತದಲ್ಲಿ ಹೆಚ್ಚಿನ ಪರಿಶ್ರಮ ವಹಿಸಿದಂತೆ ಕಂಡು ಬರುತ್ತಿಲ್ಲ. ಹಲವಾರು ಕಾರಣಗಳಿಂದ ನಾವು ಈಗ ಹಿನ್ನಡೆಯಲ್ಲಿದ್ದರೂ ಮುಂದಿನ ದಿನಗಳಲ್ಲಾದರೂ ಪರಿಶ್ರಮಪಟ್ಟು ಉತ್ತಮ ಫಲಿತಾಂಶ ಲಭ್ಯವಾಗುವಂತೆ ಮಾಡಬೇಕಿದೆ. ಕೆಲವು ಸರ್ಕಾರಿ, ಅನುದಾನಿತ ಪ್ರೌಢಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದೆ. ಮತ್ತೆ ಕೆಲವೆಡೆ ಕೆಲವೊಂದು ಮಹತ್ವದ ವಿಷಯಗಳ ಶಿಕ್ಷಕರೇ ಇಲ್ಲ. ಇಂತಹ ಸಂದರ್ಭದಲ್ಲಿ ಶಿಕ್ಷಕರು ಇಲ್ಲವೆಂಬ ಕಾರಣಕ್ಕಾಗಿ ಫಲಿತಾಂಶ ಕಡಿಮೆಯಾಗಬಾರದು. ನಗರ ಹಾಗೂ ಗ್ರಾಮೀಣ ಮಟ್ಟಗಳ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು ಕಡೆ ಪಕ್ಷ ಪಕ್ಕದ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರಲ್ಲಿ ಮನವಿ ಮಾಡಿ ವಾರದಲ್ಲಿ ಮೂರ್‍ನಾಲ್ಕು ಬಾರಿಯಾದರೂ ವಿಷಯ ಶಿಕ್ಷಕರನ್ನು ಕರೆಸಿ ಮಕ್ಕಳಿಗೆ ಬೋಧನೆ ಮಾಡಿಸಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಸ್. ವೆಂಕಟೇಶಪ್ಪ, ಎಸ್‌ಎಸ್‌ಎಲ್ಸಿ ಫಲಿತಾಂಶವನ್ನು ಹೆಚ್ಚಿಸುವ ಬಗ್ಗೆ ಈಗಾಗಲೇ ಪ್ರೌಢಶಾಲೆಯ ಮುಖ್ಯ ಶಿಕ್ಷಕರು ಹಾಗೂ ಸಹಶಿಕ್ಷಕರಿಗೆ ನಿರಂತರವಾಗಿ ತರಬೇತಿ ನೀಡಲಾಗುತ್ತಿದೆ. ಅವರಿಗೂ ಜವಾಬ್ದಾರಿಯನ್ನು ವಹಿಸಲಾಗಿದೆ. ಪ್ರತಿಯೊಬ್ಬರೂ ತಮ್ಮ ವಿಷಯಗಳಿಗೆ ಸಂಬಂಧಪಟ್ಟಂತೆ ವಿದ್ಯಾರ್ಥಿಗಳಿಗೆ ಉತ್ತಮ ಬೋಧನೆ ಮಾಡಬೇಕು. ಎಸ್‌ಎಸ್‌ಎಲ್ಸಿಯಲ್ಲಿ ಬರುವ ಶಬರಿ ನಾಟಕ, ಸಂಕಲ್ಪ ಗೀತೆಗಳಲ್ಲಿ ಕಳೆದ ವರ್ಷ ಸುಮಾರು 20 ಅಂಕಗಳ ಪ್ರಶ್ನೆಗಳು ಬಂದಿದ್ದು, ಈ ಬಗ್ಗೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದರು.
ತಾಲೂಕು ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಜಿ.ಟಿ. ವೀರಭದ್ರಸ್ವಾಮಿ ಮಾತನಾಡಿ, ಎಸ್‌ಎಸ್‌ಎಲ್ಸಿ ಫಲಿತಾಂಶವನ್ನು ವೃದ್ಧಿಸಬೇಕೆಂಬ ಶಿಕ್ಷಣ ಇಲಾಖೆಯ ಕಳಕಳಿ ಎಲ್ಲರಿಗೂ ಅರ್ಥವಾಗಿದೆ. ಶಿಕ್ಷಕರು ಸಮೂಹ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯಲ್ಲಾದರೂ ಉತ್ತಮ ಬೋಧನೆ ನೀಡಬೇಕೆಂಬ ವಿಶ್ವಾಸ ಹೊಂದಿದ್ದಾರೆ. ಮುಖ್ಯ ಶಿಕ್ಷಕರೂ ಸಹ ಜಿಲ್ಲೆಯ ಎಸ್‌ಎಸ್‌ಎಲ್ಸಿ ಫಲಿತಾಂಶ ಹೆಚ್ಚಳದ ಬಗ್ಗೆ ವಿಶೇಷ ಗಮನ ನೀಡುತ್ತಿದ್ದಾರೆ. ಉತ್ತಮ ಶಿಕ್ಷಣ ಪಡೆಯುವಂತೆ ವಿದ್ಯಾರ್ಥಿಗಳನ್ನು ಶಿಕ್ಷಕರೇ ಪ್ರೇರೇಪಿಸಬೇಕಿದೆ ಎಂದು ತಿಳಿಸಿದರು. ಸಭೆಯಲ್ಲಿ ವಿಷಯ ತಜ್ಞರಾದ ಕವಿತಾ, ವಿಜಯಕುಮಾರ್, ನರಸಿಂಹಮೂರ್ತಿ, ಶಿವಣ್ಣ, ಬಿಆರ್‌ಸಿ ಮಂಜಪ್ಪ, ಅಕ್ಷರ ದಾಸೋಹ ಅಧಿಕಾರಿ ತಿಪ್ಪೇಸ್ವಾಮಿ, ಆದರ್ಶ ಶಾಲೆಯ ಮುಖ್ಯ ಶಿಕ್ಷಕ ಶ್ರೀನಿವಾಸ್, ಪಾಲಯ್ಯ ಮತ್ತಿತರರು ಭಾಗವಹಿಸಿದ್ದರು.